ಬೆಂಗಳೂರು: ಗ್ರಂಥಾಲಯ ಮೇಲ್ವಿಚಾರಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲ ತಾಲ್ಲೂಕಿನ ಕಲಾಲಘಟ್ಟ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಗೋವೇನಹಳ್ಳಿ ಗ್ರಾಮದ ರಾಮಚಂದ್ರಯ್ಯ ಅವರ ಸಾವಿಗೆ ಪಿಡಿಒ ಅವರೇ ಕಾರಣ’ ಎಂದು ಮೃತ ವ್ಯಕ್ತಿಯ ಸಂಬಂಧಿ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪಿಡಿಒ ವಿರುದ್ಧ ಬಿಎನ್‌ಎಸ್ ಸೆಕ್ಷನ್ 108 ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣವನ್ನು ನೆಲಮಂಗಲ ಉಪವಿಭಾಗದ ತ್ಯಾಮಗೊಂಡ್ಲು ಪೊಲೀಸರು ದಾಖಲಿಸಿದ್ದಾರೆ.
ರಾಮಚಂದ್ರಯ್ಯ ಪಂಚಾಯಿತಿಯ ಗ್ರಂಥಾಲಯದಲ್ಲಿ ಮೇಲ್ವಿಚಾರಕರಾಗಿ (ಅರೆಕಾಲಿಕ) ಕೆಲಸ ಮಾಡುತ್ತಿದ್ದರು. ಮೂರು ತಿಂಗಳಿಂದ ಗೀತಾಮಣಿ ಅವರು ರಾಮಚಂದ್ರಯ್ಯ ಅವರಿಗೆ ಸಂಬಳ ನೀಡಿರಲಿಲ್ಲ. ಹಾಜರಾತಿ ತೋರಿಸಲು ಬಯೋಮೆಟ್ರಿಕ್ ನೀಡದೇ ತೊಂದರೆ ನೀಡಿದ್ದರು. ಕೆಲಸಕ್ಕೆ ಬೇಡವೆಂದೂ ಹೇಳಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ತನಿಖಾ ಅಧಿಕಾರಿಯ ಮುಂದೆ ಹಾಜರಾಗಲು ಪಿಡಿಒಗೆ ನೋಟಿಸ್ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.