ಬೆಂಗಳೂರು: 17 ವರ್ಷದ ಅಪ್ರಾಪ್ತ ಮಗಳು, ತನ್ನ ಲವರ್ ಹಾಗೂ ಸ್ನೇಹಿತರ ಜೊತೆ ಸೇರಿ ಹೆತ್ತ ತಾಯಿಯನ್ನೇ ಕೊಂದಿರುವ ಘಟನೆ ಉತ್ತರಹಳ್ಳಿಯಲ್ಲಿ ನಡೆದಿದೆ. ಮೃತರನ್ನು ನೇತ್ರಾವತಿ (35) ಎಂದು ಗುರುತಿಸಲಾಗಿದೆ. ಅವರು ಸಾಲ ವಸೂಲಾತಿ ಸಂಸ್ಥೆಯೊಂದರಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 25 ರಂದು ಈ ಘಟನೆ ನಡೆದಿದ್ದು, ತಾಯಿಯ ಸಾವಿನ ನಂತರ ಯುವತಿ ಮನೆಯಿಂದ ನಾಪತ್ತೆಯಾಗಿದ್ದಳು. ಇದರಿಂದ ಅನುಮಾನಗೊಂಡ ನೇತ್ರಾವತಿಯ ಸಹೋದರಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತದನಂತರ ಕೊಲೆ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ತಾಪ್ತ ಹಂತಕರು ನೇತ್ರಾವತಿಯನ್ನು ಟವೆಲ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಆತ್ಮಹತ್ಯೆ ಎಂದು ತೋರಿಸಲು ಸೀರೆಯನ್ನು ಬಳಸಿ ಮೃತದೇಹವನ್ನು ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿರುವುದಾಗಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚಿಗೆ ತನ್ನ ಮಗಳು ಹುಡುಗನೊಬ್ಬನೊಂದಿಗೆ ಸಂಬಂಧ ಹೊಂದಿರುವುದನ್ನು ನೋಡಿದ್ದ ನೇತ್ರಾವತಿ, ಆತನಿಂದ ದೂರ ಇರುವಂತೆ ಎಚ್ಚರಿಕೆ ನೀಡಿದ್ದರು ಎಂಬುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯಲ್ಲಿ ಪ್ರಿಯಕರೊಂದಿಗೆ ಸಿಕ್ಕಿಬಿದ್ದ ನಂತರ ನೇತ್ರಾವತಿಯ ಕೊಲೆಯ ಸಂಚು ರೂಪಿಸಲಾಗಿದ್ದು, ಆಕೆಯ ಪುತ್ರಿಯೂ ಅದರಲ್ಲಿ ಭಾಗಿಯಾಗಿದ್ದಳು. ಕೊಲೆಗೆ ಸಂಬಂಧಿಸಿದಂತೆ ಹದಿಹರೆಯದ ಯುವತಿ ಹಾಗೂ ಆಕೆಯ ನಾಲ್ವರು ಗೆಳೆಯರನ್ನು ಬಂಧಿಸಲಾಗಿದ್ದು, ಬಾಲಾಪರಾಧ ಗೃಹಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.