ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಪಾಲಾಗಿರುವ ನಟ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವುದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ಕೋರ್ಟ್ ಮಂಗಳವಾರ ಸೆಪ್ಟೆಂಬರ್ 3ಕ್ಕೆ ಮುಂದೂಡಿಕೆ.
ಆರೋಪಿ ದರ್ಶನ್ ಅವರನ್ನು ಮತ್ತೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಜೈಲು ಅಧಿಕಾರಿಗಳು ಮುಂದಾಗಿದ್ದು, ಈ ಸಂಬಂಧ 64ನೇ ಸೆಷನ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಅವರು, ಆರೋಪಿ ದರ್ಶನ್ ಅವರನ್ನು ಜಾಮೀನು ಪಡೆಯುವ ಮುನ್ನ ಬಳ್ಳಾರಿ ಜೈಲಿನಲ್ಲಿ ಇರಿಸಲಾಗಿತ್ತು. ಈಗ ಮತ್ತೆ ಅಲ್ಲಿಗೆ ಸ್ಥಳಾಂತರಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.
ಆದರೆ ದರ್ಶನ್ ಅವರ ವಕೀಲ ಸಂದೇಶ್ ಚೌಟ ಅವರು, ಈ ಕ್ರಮವನ್ನು ಬಲವಾಗಿ ವಿರೋಧಿಸಿದರು. ಈ ಬದಲಾವಣೆಯು ವಿಚಾರಣಾ ಪ್ರಕ್ರಿಯೆಗಳಿಗೆ ತೀವ್ರ ಅಡ್ಡಿಯಾಗುತ್ತದೆ ಎಂದು ವಾದಿಸಿದರು.
"ಈ ಪ್ರಕರಣದಲ್ಲಿ 272 ಸಾಕ್ಷಿಗಳಿದ್ದು, ಸುಪ್ರೀಂ ಕೋರ್ಟ್ ಈಗಾಗಲೇ ತ್ವರಿತ ವಿಚಾರಣೆಗೆ ನಿರ್ದೇಶನ ನೀಡಿದೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತ್ರ ವಿಚಾರಣೆ ನಡೆದರೆ ಆರೋಪಿ ಮತ್ತು ಅವರ ವಕೀಲರು ಅರ್ಥಪೂರ್ಣವಾಗಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಬಳ್ಳಾರಿ, ಬೆಂಗಳೂರಿನಿಂದ 300 ಕಿ.ಮೀ.ಗಿಂತ ಹೆಚ್ಚು ದೂರದಲ್ಲಿರುವುದರಿಂದ ನಿಯಮಿತವಾಗಿ ಪ್ರಯಾಣಿಸಲು ಸಾಧ್ಯವಿಲ್ಲ" ಎಂದು ಚೌಟ ವಾದಿಸಿದರು.
ಪ್ರತಿವಾದಿಯು, ದರ್ಶನ್‌ಗೆ ಹಾಸಿಗೆ, ಬೆಡ್‌ಶೀಟ್ ಮತ್ತು ದಿಂಬು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಸಹ ಕೋರಿದರು.ಸುಪ್ರೀಂ
ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡುವಾಗ ಆರೋಪಿಯೂ ಪ್ರಭಾವಿ. ಈ ಹಿಂದೆ ಜೈಲಿನ ರೂಲ್ಸ್ ಉಲ್ಲಂಘನೆ ಮಾಡಿರೋದನ್ನ ಉಲ್ಲೇಖಿಸಿದೆ. ಜೊತೆಗೆ ಈ ಹಿಂದೆ ರಾಜಾತಿಥ್ಯ ಸಂಬಂಧ ಕೇಸ್ ದಾಖಲಾಗಿದೆ. ಆರೋಪಿಗೆ ಸಾಕಷ್ಟು ಅಭಿಮಾನಿಗಳಿದ್ದು, ಸಮಾಜದಲ್ಲಿ ರೋಲ್ ಮಾಡಲ್ ಆಗಿರಬೇಕು. ಇಂತಹ ವ್ಯಕ್ತಿ ಕೊಲೆಯಂಥ ಗಂಭೀರ ಆರೋಪದಲ್ಲಿ ಭಾಗಿಯಾಗಿದ್ದಾನೆ. ಆರೋಪಿಗೆ ರಾಜಾತಿಥ್ಯ ನೀಡಿದರೆ ಜೈಲು ಅಧಿಕಾರಿಯನ್ನು ಅಮಾನತು ಮಾಡಲಾಗುತ್ತೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಜೊತೆಗೆ ಆಡಳಿತಾತ್ಮಕ ದೃಷ್ಟಿಯಿಂದ ಸ್ಥಳಾಂತರಕ್ಕೆ ಮನವಿ ಮಾಡಲಾಗಿದೆ. ಚಾರ್ಜ್ ಫ್ರೇಮ್ ಸೇರಿದಂತೆ ವಿಚಾರಣೆಯನ್ನ ವಿಸಿ ಮೂಲಕ ಮಾಡಬಹುದು. ಇದಕ್ಕೆ ಬಿಎನ್ಎಸ್ನಲ್ಲಿ ಅವಕಾಶವಿದೆ. ಜೈಲು ಮ್ಯಾನ್ಯೂಯಲ್ 507 ಪ್ರಕಾರ ವಿಸಿ ಮೂಲಕ ಭೇಟಿಗೆ ಅವಕಾಶ ಇದೆ. ಹೀಗಾಗಿ ಐದು ಆರೋಪಿಗಳನ್ನ ಈ ಹಿಂದಿನ ಜೈಲುಗಳಿಗೆ ಶಿಫ್ಟ್ ಮಾಡಲು ಆದೇಶ ನೀಡಿ ಎಂದು ಪ್ರಸನ್ನ ಕುಮಾರ್ ಅವರು ಮನವಿ ಮಾಡಿದರು.
ವಾದ, ಪ್ರತಿವಾದ ಆಲಿಸಿದ ಕೋರ್ಟ್, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.