ಬೆಂಗಳೂರು: ಸೋನಿಯಾ ಗಾಂಧಿಯವರಿಗೆ "You Know Kannada" ಎಂದು ಕೇಳುವ ಧೈರ್ಯವಿದೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಮಂಗಳವಾರ ಪ್ರಶ್ನೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಸಿದ್ದರಾಮಯ್ಯನವರೇ. ಕ್ಷಮಿಸಿ, ಭಾರತದ ಗೌರವಾನ್ವಿತ ರಾಷ್ಟ್ರಪತಿ ಗಳಾದ ದ್ರೌಪತಿ ಮುರ್ಮು ಅವರಿಗೆ, ನಿಮ್ಮ ನಾಯಕರಾದ ಸೋನಿಯಾ ಗಾಂಧಿಯವರಷ್ಟು ಕನ್ನಡದಲ್ಲಿ ಪ್ರಭುತ್ವ ಇಲ್ಲ. ಏಕೆಂದರೆ ನೀವೆಂದೂ ಸೋನಿಯಾ ಗಾಂಧಿಯವರಿಗೆ "You Know Kannada" ಎಂದು ಕೇಳೇ ಇಲ್ಲ. ಅಥವಾ ಕೇಳುವ ಧೈರ್ಯ ಮಾಡಿಲ್ಲ. ಎಷ್ಟೇ ಆದರೂ ನಿಮ್ಮ ಪಕ್ಷದ ನಾಯಕಿ ಭಾರತದ ರಾಷ್ಟ್ರಾಧ್ಯಕ್ಷರಿಗಿಂತ ಎತ್ತರದವರು ತಾನೆ? ಎಂದು ವ್ಯಂಗ್ಯವಾಡಿದ್ದಾರೆ.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಎರಡು ದಿನಗಳ ಪ್ರವಾಸಕ್ಕಾಗಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಮೈಸೂರಿಗೆ ಆಗಮಿಸಿದ್ದರು.
ಶಿಷ್ಟಾಚಾರದ ಭಾಗವಾಗಿ ರಾಷ್ಟ್ರಪತಿಗಳನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರ ಮಾಡಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ರಾಜ್ಯಪಾಲರು, ಮುಖ್ಯಮಂತ್ರಿ, ಕೇಂದ್ರ ಆರೋಗ್ಯ ಇಲಾಖೆಯ ರಾಜ್ಯ ಸಚಿವೆ, ರಾಜ್ಯ ಆರೋಗ್ಯ ಸಚಿವರು ಸೇರಿ ಹಲವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳಿಗೆ ಸ್ವಾಗತವನ್ನು ಕೋರುತ್ತಾ, ’ಮೇಡಂ ಯು ನೊ ಕನ್ನಡ’ ಎಂದು ಪ್ರಶ್ನಿಸಿದ್ದ ಸಿದ್ದರಾಮಯ್ಯ ಅವರು, ಬಳಿಕ ನಾನು ಕನ್ನಡದಲ್ಲೇ ಮಾತನಾಡುತ್ತೇನೆಂದು ಭಾಷಣ ಮಾಡಿದ್ದರು.