ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಹೇಳಿದ್ದ ಮುಸುಕುಧಾರಿ 'ಬುರುಡೆ' ಚಿನ್ನಯ್ಯನಿಗೆ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿದ್ದು, ಆರೋಪಿಯನ್ನು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವಂತೆ ಆದೇಶಿಸಿದೆ.
ಚಿನ್ನಯ್ಯನ 15 ದಿನಗಳ ಎಸ್ ಐಟಿ ಕಸ್ಟಡಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಇಂದು ಆರೋಪಿಯನ್ನು ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ವಿಚಾರಣೆ ನಡೆಸಿದ ಕೋರ್ಟ್, ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಭದ್ರತೆಯ ದೃಷ್ಟಿಯಿಂದ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಕಳುಹಿಸುವಂತೆ ಪೊಲೀಸರಿಗೆ ಸೂಚಿಸಿದೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿಕೊಂಡು ಪ್ರತ್ಯಕ್ಷನಾಗಿದ್ದ ಈತನ ಹೇಳಿಕೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿ ತನಿಖೆಗೆ ಆದೇಶ ನೀಡಿತ್ತು. ಆದರೆ ತನಿಖೆಯಲ್ಲಿ ಟ್ವಿಸ್ಟ್ ಸಿಕ್ಕಿದ್ದು, ದೂರುದಾರ ಚಿನ್ನಯ್ಯನ ವಿರುದ್ಧವೇ ತನಿಖೆಯ ತೂಗುಗತ್ತಿ ತಿರುಗಿತ್ತು. ತಾನು ದೊಡ್ಡದೊಂದು ತಂಡದ ಷಡ್ಯಂತ್ರದ ಭಾಗ ಎಂದು ಆತ ಒಪ್ಪಿಕೊಂಡಿದ್ದಾನೆ.
ಆಗಸ್ಟ್ 23 ರಂದು ಎಸ್ಐಟಿ ಅಧಿಕಾರಿಗಳು ಚಿನ್ನಯನನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಿದ್ದರು. ಹೆಚ್ಚಿನ ವಿಚಾರಣಾಗಿ ಕೋರ್ಟ್ ಆರೋಪಿಯನ್ನು 12 ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನೀಡಿತ್ತು. ಬಳಿಕ ಮತ್ತೆ ಮೂರು ದಿನ ಕಸ್ಟಡಿಗೆ ಎಸ್ಐಟಿ ಪೊಲೀಸರು ಪಡೆದಿದ್ದರು. ಇದೀಗ ಒಟ್ಟು 15 ದಿನಗಳ ಕಾಲ ಎಸ್‌ಐಟಿ ಕಸ್ಟಡಿ ನಂತರ ಬುರುಡೆ ಚಿನ್ನಯ್ಯ ಜೈಲು ಪಾಲಾಗಿದ್ದಾರೆ.