ರಾಜ್ಯ

News Headlines 06-09-25 | ಬಾನು ಮುಷ್ತಾಕ್ ಆಯ್ಕೆ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ; ಜನಾರ್ಧನ ರೆಡ್ಡಿ ವಿರುದ್ಧ ಸೆಂಥಿಲ್ ಮಾನನಷ್ಟ ಕೇಸ್; ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಲ್ಲು ತೂರಾಟ!

ಬಾನು ಮುಷ್ತಾಕ್ ಆಯ್ಕೆ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ

ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ ಗೆ ಆಹ್ವಾನವನ್ನು ಆರಂಭದಿಂದಲೂ ವಿರೋಧಿಸಿಕೊಂಡು ಬಂದಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಇದೀಗ ಕಾನೂನು ಹೋರಾಟಕ್ಕೆ ಇಳಿದಿದ್ದಾರೆ. ಬಾನು ಮುಷ್ತಾಕ್ ಆಹ್ವಾನ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿ ಎಂದು ಹೈಕೋರ್ಟ್ ಮೆಟ್ಟಿಲೇರಿರುವ ಪ್ರತಾಪ್ ಸಿಂಹ, ರಾಜ್ಯ ಸರ್ಕಾರದ ಕ್ರಮಕ್ಕೆ ತಡೆ ನೀಡುವಂತೆ ಕೋರಿದ್ದಾರೆ. ದಸರಾ ಉದ್ಘಾಟನೆ ವೇಳೆ ಚಾಮುಂಡೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಬೇಕು. ವೇದ ಮಂತ್ರ, ಧಾರ್ಮಿಕ ಆಚರಣೆಗಳೊಂದಿಗೆ ಉದ್ಘಾಟನೆಯ ಸಂಪ್ರದಾಯವಿದೆ. ಬಾನು ಮುಷ್ತಾಕ್ ಹಿಂದೂ ವಿರೋಧಿ, ಕನ್ನಡ ವಿರೋಧಿ ಭಾವನೆ ಹೊಂದಿದ್ದಾರೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಬಾನು ಮುಷ್ತಾಕ್ ಅವರ ಆಯ್ಕೆ ಮಾಡಿದೆ ಎಂದು ಪ್ರತಾಪ್ ಸಿಂಹ ಟೀಕಿಸಿದ್ದಾರೆ. ಈ ಕುರಿತು ಸಿಎಂ‌ ಸಿದ್ದರಾಮಯ್ಯ, ಪ್ರತಾಪ್ ಸಿಂಹ ಕೋರ್ಟ್ಗೆ ಹೋಗಿದ್ದು ಬಹಳ ಸಂತೋಷ, ಅದನ್ನು ಕೋರ್ಟ್ ತೀರ್ಮಾನ ಮಾಡುತ್ತೆ ಎಂದಿದ್ದಾರೆ.

Dharmasthala case ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಸೆಂಥಿಲ್ ಮಾನನಷ್ಟ ಮೊಕದ್ದಮೆ

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತ ಪ್ರಕರಣದಲ್ಲಿ ತಮ್ಮ ವಿರುದ್ಧ ಶಾಸಕ ಜನಾರ್ದನ ರೆಡ್ಡಿ ಮಾಡಿದ್ದ ಗಂಭೀರ ಆರೋಪದ ವಿರುದ್ಧ ತಮಿಳುನಾಡು ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ತನ್ನ ಪಾತ್ರವಿಲ್ಲ. ಇಂತಹ ಬಾಲಿಶ ಆರೋಪಗಳಿಗೆ ನಾನು ಪ್ರತಿಕ್ರಿಯಿಸಬೇಕೇ ಎಂದು ಯೋಚಿಸುತ್ತಾ ಇಷ್ಟು ದಿನ ಸುಮ್ಮನಿದ್ದೆ. ಆದರೆ ಈಗ, ಪ್ರತಿದಿನ, ಹೊಸ ಕಥೆಗಳು ಹೊರಹೊಮ್ಮುತ್ತಿವೆ. ಮಾನನಷ್ಟ ಮೊಕದ್ದಮೆ ಹೂಡಲು ಇದು ಸರಿಯಾದ ಸಮಯ ಎಂದು ದೂರು ದಾಖಲಿಸಿದ್ದೇನೆ ಎಂದರು. ಮತ್ತೊಂದೆಡೆ, ದೂರುದಾರ-ಸಾಕ್ಷಿ ಚಿನ್ನಯ್ಯನನ್ನು ಪೊಲೀಸರು ಇಂದು ಬೆಳ್ತಂಗಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ಕೋರ್ಟ್ ಚಿನ್ನಯ್ಯನಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಭದ್ರತೆ ದೃಷ್ಟಿಯಿಂದ ಶಿವಮೊಗ್ಗ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗುತ್ತದೆ.

ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಲ್ಲು ತೂರಾಟ: ಇಬ್ಬರ ಬಂಧನ

ರಾಯಚೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಯಚೂರಿನ ಗಂಗಾ ನಿವಾಸ ರಸ್ತೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ನಡೆಯುವ ವೇಳೆ ಆರೋಪಿಗಳಾದ ಪ್ರಶಾಂತ್ ಮತ್ತು ಪ್ರವೀಣ್ ಕಲ್ಲು ತೂರಿದ್ದರು. ಈ ವೇಳೆ ಮಂಗಳವಾರ ಪೇಟೆ ನಿವಾಸಿಗಳಾದ ವಿನಯ್ ಮತ್ತು ಗಣೇಶ್ ಎಂಬುವವರಿಗೆ ಗಾಯಗಳಾಗಿದ್ದು ಅವರಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಕಲ್ಲು ತೂರಾಟದ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದ್ದು ಈ ದೃಶ್ಯಗಳನ್ನು ಆಧರಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ತಮ್ಮ ಏರಿಯಾ ಮೂಲಕ ಗಣೇಶ ಮೆರವಣಿಗೆ ಮಾಡಬಾರದು ಎಂದು ಆರೋಪಿಗಳು ಜಗಳ ಮಾಡಿದ್ದರು. ಇದನ್ನು ಮೀರಿ ಮೆರವಣಿಗೆ ಮಾಡಿದ್ದರಿಂದ ಕಲ್ಲು ತೂರಾಟ ನಡೆಸಿದ್ದಾಗಿ ಆರೋಪಿಗಳು ಹೇಳಿದ್ದಾರೆ.

Siddaramaiaha ವಿರುದ್ಧ ಅವಹೇಳನ FIR ದಾಖಲು

ಮೈಸೂರಿನಲ್ಲಿ ನಡೆದಿದ್ದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ 'ಮೇಡಂ ಯು ನೊ ಕನ್ನಡ ಎಂದು ಪ್ರಶ್ನಿಸಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ಟೀಕೆಗಳು ವ್ಯಕ್ತವಾಗಿತ್ತು. ರಾಷ್ಟ್ರಪತಿಗಳಿಗೆ ಸಿದ್ದರಾಮಯ್ಯ ಅಗೌರವ ತೋರಿದ್ದಾರೆಂದು ಹಲವರು ಟೀಕಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪದಗಳಿಂದ ಹೀಯಾಳಿಸಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಹಲವರ ವಿರುದ್ದ ಇದೀಗ ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ಸೆಪ್ಟೆಂಬರ್ 3ರಂದು ಸೈಬರ್ ಅಪರಾಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಉಪ ಆಯುಕ್ತ ರಾಜಾ ಇಮಾಮ್ ಖಾಸಿಂ ಹೇಳಿದ್ದಾರೆ.

ಸಂಚಾರಿ ನಿಯಮ ಉಲ್ಲಂಘನೆ: ದಂಡ ಪಾವತಿಸಿದ ಸಿಎಂ

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದಂಡ ಪಾವತಿಸಲು ಶೇ 50ರ ರಿಯಾಯಿತಿ ನೀಡಲಾಗಿದ್ದು, ಸಿಎಂ ಸಿದ್ದರಾಮಯ್ಯ ಅವರ ಕಾರು 7 ಬಾರಿ ಸಂಚಾರ ನಿಯಮ ಉಲ್ಲಂಘಿಸಿತ್ತು. ಆರು ಪ್ರಕರಣಗಳಲ್ಲಿ ಮುಖ್ಯಮಂತ್ರಿ ಸೀಟು ಬೆಲ್ಟ್ ಧರಿಸದೇ ನಿಯಮ ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಕಚೇರಿ 2,500 ಸಾವಿರ ರೂಪಾಯಿ ದಂಡ ಪಾವತಿಸಿದೆ. ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಕಾರು 10 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದೆ. ಸೀಟ್ ಬೆಲ್ಟ್, ಓವರ್ ಸ್ಪೀಡ್, ಜಂಪಿಂಗ್ ಟ್ರಾಫಿಕ್ ಸಿಗ್ನಲ್, ಜೀಬ್ರಾ ಕ್ರಾಸ್ ಕ್ರಾಸಿಂಗ್ ಮಾಡಿದ್ದಕ್ಕೆ ಒಟ್ಟಾರೆ 3,250 ರೂಪಾಯಿ ದಂಡ ವಿಧಿಸಲಾಗಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರೋಚಕ ಘಟ್ಟ ತಲುಪಿದ 'ಸಿಎಂ ಬದಲಾವಣೆ' ಚರ್ಚೆ: ಡಿಕೆಶಿ ಪರ ಶಾಸಕರು ದಿಢೀರ್ ದೆಹಲಿ ಯಾತ್ರೆ; ಹೈಕಮಾಂಡ್ ಮುಂದೆ ಶಕ್ತಿ ಪ್ರದರ್ಶನಕ್ಕೆ ಸಜ್ಜು!

ಅಕ್ರಮ ವಲಸಿಗರಿಗೆ ಅಸ್ಸಾಂ ಸರ್ಕಾರದ 'ಶಾಕ್': 'ಅತ್ಯಪರೂಪದ ಕಾನೂನು' ಜಾರಿ, 24 ಗಂಟೆಯೊಳಗೆ ಗಡಿಪಾರು!

ಭಾರತದ ಬೆನ್ನಿಗೆ ಚೂರಿ?: ದೆಹಲಿ ಬಾಂಬ್ ಸ್ಫೋಟಕ್ಕೂ ಅಫ್ಘಾನಿಸ್ತಾನಕ್ಕೂ ನಂಟು ಬಹಿರಂಗ; ಕರ್ನಾಟಕಕ್ಕೂ ಉಗ್ರನ ಭೇಟಿ!

Delhi Blast: ಮತ್ತೆ 4 ಪ್ರಮುಖ ಆರೋಪಿಗಳ ಬಂಧನ, ಬಂಧಿತರ ಸಂಖ್ಯೆ 6 ಕ್ಕೇರಿಕೆ

Vaikunta Ekadasi: ತಿರುಮಲ ವೈಕುಂಠ ದ್ವಾರ ದರ್ಶನ ಕುರಿತು TTD ಮಹತ್ವದ ಮಾಹಿತಿ, ಆನ್​ಲೈನ್​ನಲ್ಲಿ ಮಾತ್ರ ಟಿಕೆಟ್ ಲಭ್ಯ!

SCROLL FOR NEXT