ಬೆಂಗಳೂರು: ಜುಲೈ 24 ರಂದು ಮಾಚೋಹಳ್ಳಿ ಗೇಟ್ ಬಳಿಯ ಶ್ರೀರಾಮ ಜ್ಯುವೆಲ್ಲರ್ಸ್‌ನಲ್ಲಿ ಆಟಿಕೆ ಪಿಸ್ತೂಲಿನಿಂದ ಬೆದರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮೂವರು ದರೋಡೆಕೋರರನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮೊಹಮ್ಮದ್ ರಫೀಕ್, ನೌಶಾದ್ ಮತ್ತು ಮೊಹಮ್ಮದ್ ಇಬ್ಟೇಕರ್ ಎಂದು ಗುರ್ತಿಸಲಾಗಿದೆ. ಆರೋಪಿಗಳು ಬಿಹಾರ, ಉಡುಪಿ, ಕೊಡಗು ಮತ್ತು ಒಡಿಶಾದವರು ಎಂದು ತಿಳಿದುಬಂದಿದೆ. ಮತ್ತೊಬ್ಬ ಆರೋಪಿ ರಾಮ್‌ಶಾದ್ ಎಂಬಾತನಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.
ಸಂಪೂರ್ಣ ಘಟನೆಯ ವಿಡಿಯೋ ಅಂಗಡಿಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಪತ್ತೆಯಾಗಿತ್ತು. ಆರೋಪಿಗಳು 18 ಸೆಕೆಂಡುಗಳಲ್ಲಿ ದರೋಡೆ ಮಾಡಿ ಪರಾರಿಯಾಗಿರುವುದು ಕಂಡುಬಂದಿತ್ತು.
ಜನವರಿಯಲ್ಲಿ ಜಯನಗರ 2 ನೇ ಬ್ಲಾಕ್‌ನಲ್ಲಿ 62 ವರ್ಷದ ಮಹಿಳೆಯ ಚಿನ್ನದ ಸರವನ್ನು ದರೋಡೆ ಮಾಡಿದ್ದ ಪ್ರಕರಣದಲ್ಲಿ ರಫೀಕ್ ನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದರು.
ಈ ನಡುವೆ ಆಭರಣ ಮಳಿಗೆಯಲ್ಲಿ ನಡೆದ ದರೋಡೆಯಲ್ಲೂ ಈತ ಭಾಗಿಯಾಗಿರುವುದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪತ್ತೆಯಾಗಿತ್ತು.
ಜುಲೈ 24 ರಂದು ರಾತ್ರಿ 9 ಗಂಟೆ ಸುಮಾರಿಗೆ ಅಂಗಡಿ ಬಂದ್ ಮಾಡುವ ವೇಳೆ, ಮಾಲೀಕರು ಆಭರಣಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡುತ್ತಿದ್ದಾಗ ಇದ್ದಕ್ಕಿದ್ದಂತೆ ಆರೋಪಿಗಳು ಅಂಗಡಿಗೆ ನುಗ್ಗಿದ್ದರು. ಬಳಿಕ ಪಿಸ್ತೂಲ್ ತೋರಿಸಿ, 150 ಗ್ರಾಂ ಚಿನ್ನದ ಆಭರಣಗಳನ್ನು ಹೊತ್ತೊಯ್ದಿದ್ದರು. ಬಳಿಕ ಮಾಲೀಕ ಕನ್ನಯ್ಯ ಲಾಲ್ ಅವರು ಪೊಲೀಸರಿಗೆ ದೂರು ನೀಡಿದ್ದರು.
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿಗಳು ಮಾಸ್ಕ್ ಧರಿಸಿರುವುದು, ನಕಲಿ ನಂಬರ್ ಪ್ಲೇಟ್ ಬಳಸಿ ದ್ವಿಚಕ್ರ ವಾಹನದಲ್ಲಿ ಬಂದಿರುವುದು ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳಿಂದ 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು, ಎರಡು ಕಾರುಗಳು ಮತ್ತು 10 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಸುಮಾರು 50ಕ್ಕೂ ಹೆಚ್ಚು ದರೋಡೆಗಳಿವೆ ಎಂದು ಮಾಹಿತಿ ನೀಡಿದ್ದಾರೆ.