ಬೆಂಗಳೂರು: ನಗರದ ಮೆಜೆಸ್ಟಿಕ್ ನಲ್ಲಿ ಸಾರ್ವಜನಿಕ ಮೂತ್ರ ವಿಸರ್ಜನೆ ತಡೆಯಲು ಬೆಂಗಳೂರು ಕೇಂದ್ರ ಮಹಾನಗರ ಪಾಲಿಕೆ ಮುಂದಾಗಿದ್ದು, ಮೊಬೈಲ್ ಶೌಚಾಲಯ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ಮುಂಭಾಗದ ಆಟೋ ಟಿಪ್ಪರ್ ಮಸ್ಟರಿಂಗ್ ಕೇಂದ್ರಕ್ಕೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಈ ವೇಳೆ ಮೆಜೆಸ್ಟಿಕ್ ಬಸ್ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಹೊರಹೊಮ್ಮಿದ್ದ ದುರ್ವಾಸನೆ ಕಂಡು ಅಧಿಕಾರಿಗಳ ವಿರುದ್ಧ ಸಿಟ್ಟಿಗೆದ್ದರು.
ಬಳಿಕ ಸಾರ್ವಜನಿಕ ಮೂತ್ರ ವಿಸರ್ಜನೆ ತಡೆಯಲು ಹತ್ತಿರದಲ್ಲಿ ಮೊಬೈಲ್ ಶೌಚಾಲಯಗಳ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತ್ಯಾಜ್ಯ ಸಾಗಣೆ ಆಟೋ ಟಿಪ್ಪರ್ ಚಾಲಕರು ಮತ್ತು ಸಿಬ್ಬಂದಿ ಸರಿಯಾದ ಉಡುಪು, ಶೂ ಸುರಕ್ಷಾ ಸಾಮಗ್ರಿಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸಬೇಕು. ಮಸ್ಟರಿಂಗ್ ಕೇಂದ್ರಗಳಲ್ಲಿ ಪ್ರತಿನಿತ್ಯ ಬೆಳಿಗ್ಗೆ 5.30 ರಿಂದ 6.30 ರೊಳಗೆ ಹಾಜರಾತಿ ಪೂರ್ಣಗೊಳ್ಳಬೇಕು. ಪೌರಕಾರ್ಮಿಕರು ಶೂ, ಸಮವಸ್ತ್ರ ಹಾಗೂ ಕೈಗವಸನ್ನು ತಪ್ಪದೆ ಧರಿಸಬೇಕು. ಕಟ್ಟಡದ ಭಗ್ನಾವಶೇಷಗಳು, ಬ್ಲಾಕ್ ಸ್ಪಾಟ್ ಗಳನ್ನು ತೆರವುಗೊಳಿಸುವ ಕುರಿತಂತೆ ವರದಿ ವ್ಯವಸ್ಥೆ ಜಾರಿಗೊಳಿಸಬೇಕು. ಅದನ್ನು ಸರಿಯಾಗಿ ಅನುಷ್ಠಾನಗೊಳಿಸಲು ಮೇಲ್ವಿಚಾರಣೆ ನೆಡೆಸಬೇಕು ಎಂದು ಹೇಳಿದರು.
ಓಕಳಿಪುರಂನಂತಹ ಪ್ರಮುಖ ಜಂಕ್ಷನ್‌ಗಳಲ್ಲಿ ತೀವ್ರ ಸ್ವಚ್ಛತೆ ಮಾಡಬೇಕು. ಧನ್ವಂತರಿ ರಸ್ತೆಯಲ್ಲಿ ಹಾಕಲಾಗಿರುವ ಕಟ್ಟಡಗಳ ಭಗ್ನಾವಶೇಷಗಳನ್ನು ತೆರವುಗೊಳಿಸಬೇಕು. ಪಾದಚಾರಿ ಮಾರ್ಗದಲ್ಲಿ ಹಾಳಾಗಿರುವ ಕರ್ಬ್ ಸ್ಟೋನ್ ಗಳು, ಸ್ಲ್ಯಾಬ್ ಗಳನ್ನು ಬದಲಾಯಿಸಬೇಕು. ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬರುವ ಹೋಟೆಲ್‌ಗಳು ಹಾಗೂ ವಾಣಿಜ್ಯ ಮಳಿಗೆಗಳ ಬಳಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಈ ಸಂಬಂಧ ಎಲ್ಲಾ ಮಳಿಗೆಗಳ ಮುಂಭಾಗ ವಿಶೇಷ ಡಸ್ಟ್ ಬಿನ್ ಗಳನ್ನು ಅಳವಡಿಸಿಕೊಳ್ಳಲು ಸೂಚನೆ ನೀಡಬೇಕು. ಅದನ್ನು ಪಾಲಿಸದಿರುವವರಿಗೆ ದಂಡ ವಿಧಿಸುವ ಕೆಲಸ ಮಾಡಬೇಕು. ಸುತ್ತಮುತ್ತಲಿನ ನಾಗರಿಕರು ಹಾಗೂ ಅಂಗಡಿ ಮಾಲೀಕರು ಸ್ವಚ್ಛತೆ ಕಾಪಾಡಲು ಸಹಕರಿಸಬೇಕು ಎಂದು ತಿಳಿಸಿದರು.
ಸಣ್ಣ-ಸಣ್ಣ ಜಂಕ್ಷನ್‌ಗಳಲ್ಲಿ ತೋಟಗಾರಿಕಾ ವಿಭಾಗದ ವತಿಯಿಂದ ಸಸಿಗಳನ್ನು ನೆಟ್ಟು, ಸಂರಕ್ಷಿಸುವ ಕೆಲಸ ಮಾಡಬೇಕು. ಜೊತೆಗೆ ಪಾದಚಾರಿ ಮಾರ್ಗಗಳಲ್ಲಿ ನೆಟ್ಟಿರುವ ಸಸಿಗಳನ್ನು ಸರಿಯಾಗಿ ಪೋಷಣೆ ಮಾಡಬೇಕು ಹಾಗೂ ಸಸಿಗಳ ಸುತ್ತಲು ಗ್ರಿಲ್ ಅಳವಡಿಸಬೇಕು. ಮಳೆ ಬೀಳುವ ಸಮಯದಲ್ಲಿ ರಸ್ತೆಯಿಂದ ಸೈಡ್ ಡ್ರೈನ್ ಗಳಿಗೆ ಸರಾಗವಾಗಿ ನೀರು ಹರಿದು ಹೋಗುವ ಸಲುವಾಗಿ ಗ್ರೇಟಿಂಗ್‌ಗಳ ಬಳಿ ಶುಚಿತ್ವ ಕಾಪಾಡಬೇಕು. ಜೊತೆಗೆ ಸೈಡ್ ಡ್ರೈನ್‌ಗಳಲ್ಲಿ ಹೂಳೆತ್ತಿ ಸರಾಗವಾಗಿ ನೀರು ಹರಿದು ಹೋಗುವ ವ್ಯವಸ್ಥೆ ಮಾಡಬೇಕೆಂದು ಸೂಚನೆ ನೀಡಿದರು.
ಕೇಂದ್ರ ನಗರ ಪಾಲಿಕೆಯ ಪಾದಚಾರಿ ಮಾರ್ಗಗಳಲ್ಲಿ ಜಲಮಂಡಳಿ, ಬೆಸ್ಕಾಂ ಸಂಸ್ಥೆಗಳು ಪೈಪ್‌ಗಳು ಅಥವಾ ಇತರ ಕಾಮಗಾರಿಗಳ ತ್ಯಾಜ್ಯ/ ಸಾಮಗ್ರಿಗಳನ್ನು ಪಾದಚಾರಿ ಮಾರ್ಗದಲ್ಲಿ ಹಾಕಬಾರದು. ಪಾದಚಾರಿಗಳ ಓಡಾಟಕ್ಕೆ ಸಮಸ್ಯೆಯಾಗುವಂತೆ ತ್ಯಾಜ್ಯ ಹಾಕಿದವರಿಗೆ ಕೂಡಲೇ ನೋಟಿಸ್ ನೀಡಿ ತೆರವುಗೊಳಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು.