ಸ್ಥಳೀಯ ಸಂಸ್ಥೆಗಳಿಗೆ ಮತಪತ್ರಗಳನ್ನು ಬಳಸಿ ಚುನಾವಣೆ ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಚುನಾವಣಾ ಆಯೋಗವು 'ನಿರ್ಣಾಯಕ ಮಾಹಿತಿಯನ್ನು ಮರೆಮಾಡಿದೆ' ಮತ್ತು ಅದು 'ವೋಟ್ ಚೋರಿ'ಯಲ್ಲಿ ಭಾಗಿಯಾಗಿರುವ ಜನರನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದ್ದಾರೆ. ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಮತ ಕಳ್ಳತನದಿಂದಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾರಣ ಎಂದು ಶಂಕಿಸಿದ ಅದು ನನ್ನ ಮೊದಲ ಸೋಲು ಎಂದು ಹೇಳಿದರು. ಕಲ್ಯಾಣ ಕರ್ನಾಟಕಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೆ. ಇದರಲ್ಲಿ 371 (ಜೆ) ವಿಧಿಗೆ ತಿದ್ದುಪಡಿ ತರಲು ಸಾಕಷ್ಟ ಪ್ರಯತ್ನ ಮಾಡಿದ್ದೇ. ಇದರ ಹೊರತಾಗಿಯೂ ಕಲಬುರಗಿ ಲೋಕಸಭಾ ಕ್ಷೇತ್ರದ 5-6 ವಿಧಾನಸಭಾ ಕ್ಷೇತ್ರಗಳಲ್ಲಿ ತಾವು ಪಡೆದ ಮತಗಳ ಅಂತರ 20000 ಕ್ಕಿಂತ ಹೆಚ್ಚು. ಹೀಗಿದ್ದರೂ ತಾನು ಸೋಲಲು ಮತ ಕಳ್ಳತನ ನಡೆದಿರಬಹುದು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕ್ವಾಂಟಮ್ ಸಿಟಿ ಸ್ಥಾಪನೆಗಾಗಿ ಹೆಸರಘಟ್ಟದಲ್ಲಿ 6.17 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದ್ದು, ಇದು ಅತ್ಯಾಧುನಿಕ ಪ್ರಯೋಗಾಲಯಗಳು, ನವೋದ್ಯಮಗಳಿಗೆ ಇನ್ಕ್ಯುಬೇಷನ್ ಸೌಲಭ್ಯಗಳು ಮತ್ತು ಶೈಕ್ಷಣಿಕ-ಉದ್ಯಮ ಸಹಯೋಗಕ್ಕಾಗಿ ಮೂಲಸೌಕರ್ಯಗಳನ್ನು ಒಳಗೊಂಡಿರಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ಎಸ್ ಬೋಸರಾಜು ತಿಳಿಸಿದ್ದಾರೆ. 2035ರ ವೇಳೆಗೆ ಕರ್ನಾಟಕವು ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ದಿಟ್ಟ ಉಪಕ್ರಮಗಳ ಮೂಲಕ 20 ಬಿಲಿಯನ್ ಅಮೆರಿಕನ್ ಡಾಲರ್‌ಗಳ ಕ್ವಾಂಟಮ್ ಆರ್ಥಿಕತೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಭಾರತದ ಮೊದಲ ಕ್ವಾಂಟಮ್ ಇಂಡಿಯಾ ಬೆಂಗಳೂರು ಸಮಾವೇಶದಲ್ಲಿ ಮಾಡಿದ ಬದ್ಧತೆಗೆ ಅನುಗುಣವಾಗಿ ಭೂಮಿ ಮಂಜೂರು ಮಾಡಿದ್ದು ಇದಕ್ಕೆ ಕಳೆದ ಸೆಪ್ಟೆಂಬರ್ 3ರಂದು ಅನುಮೋದನೆ ನೀಡಲಾಗಿದೆ ಎಂದರು.
ಕರ್ನಾಟಕ ವಿಧಾನ ಪರಿಷತ್ತಿಗೆ ನಾಲ್ಕು ಸ್ಥಾನಗಳಿಗೆ ನಾಮ ನಿರ್ದೇಶನ ಮಾಡುವ ಸಂಬಂಧ ಸರ್ಕಾರ ಕಳುಹಿಸಿದ ಪಟ್ಟಿಗೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಡಾ.ಆರತಿ ಕೃಷ್ಣ, ಎಫ್ ಹೆಚ್ ಜಕ್ಕಪ್ಪನವರ್, ಶಿವಕುಮಾರ್ ಕೆ ಅವರ ಹೆಸರುಗಳಿದ್ದ ಪಟ್ಟಿಗೆ ರಾಜ್ಯಪಾಲರು ಅಂತಿಮ ಮುದ್ರೆ ಒತ್ತಿದ್ದಾರೆ. ಈ ಮೂಲಕ ಪರಿಷತ್ ಗೆ ಯಾರೂ ನೇಕಮವಾಗುತ್ತಾರೆ ಎನ್ನುವ ಗೊಂದಲಗಳಿಗೆ ತೆರೆ ಬಿದ್ದಿದೆ. ಮೂವರು 6 ವರ್ಷಗಳ ಅವಧಿಗೆ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದು ರಮೇಶ್ ಬಾಬು ಅವರ ಅವಧಿ 2026ರ ಜುಲೈ 21ರವರೆಗೆ ಮಾತ್ರ ಇರಲಿದೆ.
ಗಣೇಶ ಮೂರ್ತಿ ಮೆರವಣಿಗೆ ವೇಳೆ ಮುಸ್ಲಿಂ ಯುವಕನೋರ್ವ ಹಸಿರು ಧ್ವಜ ತಂದು ಗಲಾಟೆ ಸೃಷ್ಟಿಸಿದ್ದು ಅಲ್ಲದೆ ಹಿಂದೂ ಯುವಕನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ. ಬಾಗಲಕೋಟೆಯ ಹೊಸಮುರನಾಳ ಗ್ರಾಮದಲ್ಲಿ ಗಣೇಶ ವಿಸರ್ಜನೆ ಶೋಭಾಯಾತ್ರೆ ವೇಳೆ ಆಸಿಪ್ ಬೆಳಗಾಂವಕರ್ ಎಂಬಾತ ಹಸಿರು ಧ್ವಜ ತಂದಿದ್ದಾನೆ. ಇದಕ್ಕೆ ಹಿಂದೂ ಯವಕರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಆಸಿಫ್ ನವೀನ ಕೂಡ್ಲೆಪ್ಪನವರ ಎಂಬಾತನಿಗೆ ಚಾಕುವಿನಿಂದ ಇರಿದಿದ್ದಾನೆ. ಘಟನೆಯಲ್ಲಿ ಗಾಯಗೊಂಡ ನವೀನ್ ಗೆ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಲಾದಗಿ ಠಾಣಾ ಪ್ಯಾಪ್ತಿಯಲ್ಲಿ ನಡೆದಿದ್ದು, ಈ ಬಗ್ಗೆ ಪೊಲೀಸತು ಪರಿಶೀಲನೆ ನಡೆಸಿದ್ದಾರೆ.
ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅನುಭವಿಸುತ್ತಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಕೆಲಸ ಹಂಚಿಕೆ ಮಾಡಲಾಗಿದ್ದು, ಗ್ರಂಥಾಲಯದಲ್ಲಿ ಕ್ಲರ್ಕ್ ಕೆಲಸ ನೀಡಲಾಗಿದೆ. ವಿಚಾರಣಾಧೀನ ಕೈದಿಗಳು ಮತ್ತು ಸಜಾಬಂಧಿಗಳಿಗೆ ಗ್ರಂಥಾಲಯದಿಂದ ಪುಸ್ತಕ ವಿತರಣೆ ಮಾಡುವುದು, ಯಾವ ಕೈದಿಗೆ ಯಾವ ಪುಸ್ತಕ ನೀಡಲಾಗಿದೆ ಎಂಬುದನ್ನು ನೋಂದಣಿ ಮಾಡಿಕೊಳ್ಳುವ ಕೆಲಸವನ್ನು ಪ್ರಜ್ವಲ್‌ಗೆ ನೀಡಲಾಗಿದೆ. ಪ್ರಜ್ವಲ್ ಗೆ ಪ್ರತಿ ದಿನದ ಕೆಲಸಕ್ಕೆ 522 ರೂ. ಕೂಲಿಯನ್ನು ನಿಗದಿಪಡಿಸಲಾಗಿದೆ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.