ಮಂಗಳೂರು: ಇಲ್ಲಿನ ಕೂಳೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿನ ಗುಂಡಿಯಿಂದಾಗಿ ನಿಯಂತ್ರಣ ಕಳೆದುಕೊಂಡು ದ್ವಿಚಕ್ರ ವಾಹನವೊಂದು ಉರುಳಿಬಿದ್ದಿದ್ದು, ಚಲಿಸುತ್ತಿದ್ದ ಲಾರಿಯ ಕೆಳಗೆ ಬಿದ್ದು 40 ವರ್ಷದ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯನ್ನು ಮಾಧವಿ ಎಂದು ಗುರುತಿಸಲಾಗಿದ್ದು, ರಸ್ತೆಯಲ್ಲಿರುವ ಗುಂಡಿಯಿಂದಾಗಿ ಮಾಧವಿ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿಬಿದ್ದಿದೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಮೀನು ಸಾಗಣೆ ಮಾಡುವ ಲಾರಿ ಮಾಧವಿ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು.
ಹೆದ್ದಾರಿಯ ಕಳಪೆ ನಿರ್ವಹಣೆಗಾಗಿ ವಾಹನ ಚಾಲಕರಿಂದ ಪದೇ ಪದೆ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿಯೇ ಈ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ.
ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ ಅಪಘಾತಕ್ಕೆ ರಸ್ತೆಯ ದುಸ್ಥಿತಿಯೇ ಕಾರಣ ಎಂದು ಆರೋಪಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂಬಂಧ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸಿದ್ದಾರೆ.
ಲಾರಿಯನ್ನು ವಶಪಡಿಸಿಕೊಂಡು ಚಾಲಕನನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.
ತಕ್ಷಣವೇ ರಸ್ತೆ ದುರಸ್ತಿ ಪಡಿಸಲು ಈ ವಿಷಯವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ವರದಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.