ಬೆಂಗಳೂರು: ಅಕ್ರಮ ಗಣಿಗಾರಿಕೆ ವಿರುದ್ಧದ ಕ್ರಮಗಳನ್ನು ಬಲಪಡಿಸುವ ಮತ್ತು ಕಾನೂನುಬಾಹಿರ ವಿಧಾನಗಳ ಮೂಲಕ ಸಂಗ್ರಹಿಸಲಾದ ಆಸ್ತಿಗಳನ್ನು ವಶಪಡಿಸಿಕೊಳ್ಳಲು ರಾಜ್ಯ ಸರ್ಕಾರ ಹೊಸ ಕಾನೂನು ಜಾರಿಗೊಳಿಸಿದೆ.
ಸೆಪ್ಟೆಂಬರ್ 9 ರಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಕರ್ನಾಟಕ ಅಕ್ರಮ ಗಣಿಗಾರಿಕೆ ಮತ್ತು ಕಾನೂನುಬಾಹಿರ ಸ್ವತ್ತನ್ನು ವಶಪಡಿಸಿಕೊಳ್ಳುವುದಕ್ಕಾಗಿ ಮತ್ತು ಜಪ್ತಿಗಾಗಿ ವಸೂಲಾತಿ ಆಯುಕ್ತರ ನೇಮಕಾತಿ ಅಧಿನಿಯಮ, 2025 ಕ್ಕೆ ಸಹಿ ಹಾಕಿದ್ದು, ಬುಧವಾರ ಅದನ್ನು ರಾಜ್ಯ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ.
ರಾಜ್ಯದಾದ್ಯಂತ ಜಪ್ತಿ ಮತ್ತು ಮುಟ್ಟುಗೋಲು ಪ್ರಕ್ರಿಯೆಗಳನ್ನು ಮೇಲ್ವಿಚಾರಣೆ ಮಾಡಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗಿಂತ ಕಡಿಮೆಯಿಲ್ಲದ ಹಿರಿಯ ಅಧಿಕಾರಿಯನ್ನು ವಸೂಲಾತಿ ಆಯುಕ್ತರಾಗಿ ನೇಮಕ ಮಾಡುವುದಕ್ಕೆ ಈ ಕಾಯ್ದೆ ಅವಕಾಶ ನೀಡುತ್ತದೆ.
ಕಾಯ್ದೆಯಡಿಯಲ್ಲಿ, ವಸೂಲಾತಿ ಆಯುಕ್ತರು ಅಕ್ರಮ ಗಣಿಗಾರಿಕೆಯಿಂದ ಸಂಪಾದಿಸಿದ ಚರ ಮತ್ತು ಸ್ಥಿರ ಆಸ್ತಿಗಳನ್ನು ವಶಪಡಿಸಿಕೊಳ್ಳುವ, ಅಧೀನ ಅಧಿಕಾರಿಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ಸಿವಿಲ್ ನ್ಯಾಯಾಲಯಕ್ಕೆ ಸಮಾನವಾದ ಅಧಿಕಾರವನ್ನು ಚಲಾಯಿಸುವ ಅಧಿಕಾರ ಹೊಂದಿರುತ್ತಾರೆ.
ರಾಜ್ಯದಲ್ಲಿ ಲೆಕ್ಕವಿಲ್ಲದಷ್ಟು ಸಂಖ್ಯೆಯ ಗುತ್ತಿಗೆದಾರರು, ಸಾಗಾಣಿಕೆದಾರರು, ರಫ್ತುದಾರರು, ದಾಸ್ತಾನುಧಾರಕರು, ಖರೀದಿದಾರರು ಮತ್ತು ಇತರ ಮಧ್ಯವರ್ತಿಗಳು ಸೇರಿದಂತೆ ಬಹುವಹಿವಾಟುಗಳನ್ನು ಒಳಗೊಂಡ ಅಕ್ರಮ ಗಣಿಗಾರಿಕೆ ಚಟುವಟಿಕೆಗಳಿಂದ ಸಂಘಟಿತ ಅಪರಾಧ, ವ್ಯವಸ್ಥಿತ ಒಳಸಂಚು ಮತ್ತು ಅಪರಾಧ ಉತ್ಪತ್ತಿಗಳಿಂದಾದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲು, ಜಪ್ತಿಮಾಡಲು, ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ವಸೂಲಿ ಆಯುಕ್ತರೊಬ್ಬರ ನೇಮಕಾತಿಯ ಅವಶ್ಯಕತೆಯನ್ನು ಸರ್ಕಾರ ಮನಗಂಡು ಈ ಅಧಿನಿಯಮವನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಿ, ಒಪ್ಪಿಗೆ ಪಡೆದು ಇಂದು ಅಧಿಸೂಚಿಸಿದೆ.