ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಡಿಯಲ್ಲಿರುವ ಐದು ಪಾಲಿಕೆಗಳ ಚುನಾವಣೆ ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಯಲಿದ್ದು, ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಮತದಾರರ ಸೆಳೆಯಲು ಆಕಾಂಕ್ಷಿಗಳು ಕಸರತ್ತಿಗೆ ಸಜ್ಜಾಗುತ್ತಿದ್ದಾರೆ.
ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರು ಪೋಸ್ಟರ್ ಗಳ ಹಾಕಲು ಶುರು ಮಾಡಿದ್ದು, ಸಾರ್ವಜನಿಕ ಸ್ಥಳಗಳು, ಕಾರ್ಯಕ್ರಮಗಳು ಹಾಗೂ ಇತರೆ ಹಬ್ಬ, ಸಮಾರಂಭಗಳಿಗೆ ಭೇಟಿ ನೀಡುತ್ತಿದ್ದಾರೆ, ಈ ಮೂಲಕ ಮತದಾರರನ್ನು ಸೆಳೆಯಲು ಹಾಗೂ ಟಿಕೆಟ್ ಪಡೆಯಲು ಯತ್ನ ನಡೆಸುತ್ತಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಆಕಾಂಕ್ಷಿಗಳಾಗಿದ್ದವರು ಮತ್ತು ಸೋತ ಅಭ್ಯರ್ಥಿಗಳು ಈಗಾಗಲೇ ಬೂತ್ ಮಟ್ಟದ ಏಜೆಂಟ್‌ಗಳಾಗಿ ಅಧಿಕಾರ ವಹಿಸಿಕೊಂಡಿದ್ದು, ನಕಲಿ ಮತದಾರರನ್ನು ಗುರುತಿಸಿ ಹೊರಹಾಕಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಮತದಾರರ ಪಟ್ಟಿಯನ್ನು ಪರಿಶೀಲಿಸಲು ಬೂತ್ ಮಟ್ಟದ ಅಧಿಕಾರಿಗಳು ಮತ್ತು ಅಂಗನವಾಡಿ ಶಿಕ್ಷಕರೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ.
ಈ ಚಟುವಟಿಕೆಗಳು ಕಳೆದ ಎರಡು ತಿಂಗಳುಗಳಿಂದ ಆರಂಭವಾಗಿವೆ, ಇದೆಲ್ಲವೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆಯೇ ಆಗಿದೆ. ಚುನಾವಣೆ ವಿಳಂಬವಾಗುವುದಿಲ್ಲ. ಜಿಬಿಎ ಅಡಿಯಲ್ಲಿನ ಎಲ್ಲಾ ಐದು ಪಾಲಿಕೆ ಚುನಾವಣೆಗಳು 2026 ರ ಜನವರಿಯಿಂದ ಮಾರ್ಚ್ ನಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಸಿವಿ ರಾಮನ್ ನಗರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸೋತ ಮಾಜಿ ಕಾರ್ಪೊರೇಟರ್ ಎಸ್ ಆನಂದ್ ಅವರು ಹೇಳಿದ್ದಾರೆ.
ವಿಧಾನಸಭಾ ಕ್ಷೇತ್ರದ ಎಲ್ಲಾ 224 ಬೂತ್‌ಗಳಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಶಿವಾಜಿನಗರ ಕ್ಷೇತ್ರದ ವಸಂತ್ ನಗರದ ಆಕಾಂಕ್ಷಿ ರಘು ಅವರು ಮಾತನಾಡಿ, ವಾರ್ಡ್‌ನಲ್ಲಿನ ನಾಗರಿಕ ಕಾರ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ವಾರ್ಡ್ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇನೆ. ಪಾಲಿಕೆ ವ್ಯಾಪ್ತಿಯಿಂದ ಹೊರಗಿರುವ ಸಮಸ್ಯೆಗಳನ್ನೂ ಪರಿಹರಿಸಲು ಶಾಸಕರೊಂದಿಗೆ ಸಮನ್ವಯ ಸಾಧಿಸುತ್ತಿದ್ದೇನೆಂದು ಹೇಳಿದ್ದಾರೆ.
ಶಾಂತಿನಗರ ಕ್ಷೇತ್ರದ ಮಾಜಿ ಕಾರ್ಪೊರೇಟರ್ ಶಿವ ಕುಮಾರ್ ಅವರು ಮಾತನಾಡಿ, ತಮ್ಮ ವಾರ್ಡ್ ಶಾಂತಲಾ ನಗರವು ಯಾವಾಗಲೂ ಬಿಜೆಪಿಯ ಭದ್ರತೆಯಾಗಿದ್ದು, ವಾರ್ಡ್ ಮಟ್ಟದ ಸಭೆಗಳು ಮತ್ತು ದೈನಂದಿನ ಸಭೆಗಳನ್ನು ತೀವ್ರಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ ಬಿಬಿಎಂಪಿ ವಿಭಜನೆಗೆ ಮಾಜಿ ಕಾರ್ಪೊರೇಟರ್ ಸಿದ್ದಲಿಂಗಯ್ಯ ಅವರು ಬೇಸರ ವ್ಯಕ್ತಪಡಿಸಿದ್ದು, 5 ವರ್ಷಗಳಿಂದ ಚುನಾವಣೆಗೆ ಕಾಯುತ್ತಿದ್ದೆವು ಎಂದು ಹೇಳಿದ್ದಾರೆ.
ಬಿಬಿಎಂಪಿಗೆ ಚುನಾವಣೆ ನಡೆಸದೆ, ಪಾಲಿಕೆಯನ್ನೇ 5 ಭಾಗಗಳಾಗಿ ವಿಂಗಡಿಸಿದ್ದಾರೆ. ಪಾಲಿಕೆ ಚುನಾವಣೆಗೆ ನಾವು 5 ವರ್ಷಗಳಿಂದಲೂ ಸಿದ್ಧತ ನಡೆಸುತ್ತಿದ್ದೇವೆ. ಪ್ರತೀ ಮತದಾರನ್ನೂ ತಲುಪುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.