ಬೆಂಗಳೂರು: ಯುಕೆಪಿ ಹಂತ 3 ರ ಅಡಿ ಸ್ವಾಧೀನಕ್ಕೊಳಪಡುವ ಭೂಮಿಗಳಿಗೆ ದರ ನಿಗದಿಯನ್ನು ಗುರುವಾರ ನಡೆಯುವ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಭೂಸ್ವಾಧೀನ ಪರಿಹಾರ ವಿಚಾರವನ್ನೇ ವಿವಾದ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ. ಮುಂದೆ ತೀರ್ಮಾನ ಮಾಡಲಿರುವ ಸೂಚಿತ ಪರಿಹಾರಕ್ಕೆ ಸರ್ವ ಪಕ್ಷಗಳೂ ಒಪ್ಪಿಗೆ ಸೂಚಿಸಬೇಕು ಎಂದು ಮನವಿ ಮಾಡುತ್ತಿದ್ದೇನೆ ಎಂದರು.
ದರ ನಿಗದಿ ಎಂದು ಅಂತಿಮವಾಗಬಹುದು ಹಾಗೂ ಕಾನೂನಾತ್ಮಕ ತೊಡಕುಗಳ ನಿವಾರಣೆಯ ಕ್ರಮದ ಬಗ್ಗೆ ಎಂದು ಕೇಳಿದಾಗ, "ಈ ವಿಚಾರ ತುಂಬಾ ತಡವಾಗಬಾರದು ಎಂದು ನಾನು ತೀರ್ಮಾನ ತೆಗೆದುಕೊಂಡಿರುವೆ. ಸಚಿವ ಸಂಪುಟದಲ್ಲಿ ಇದರ ಬಗ್ಗೆ ನಿರ್ಧಾರ ಮಾಡಲಾಗುವುದು. ನಾನು ಅಫಿಡವಿಟ್ ಗೆ ಸಹಿ ಹಾಕಿದ್ದು ಎಸಿಎಸ್ ಅವರು ಗುರುವಾರ ನ್ಯಾಯಲಯಕ್ಕೆ ಇದನ್ನು ಸಲ್ಲಿಸಲಿದ್ದಾರೆ" ಎಂದರು.
"ಆಲಮಟ್ಟಿ ಅಣೆಕಟ್ಟು ಎತ್ತರವನ್ನು 524 ಮೀ. ಹೆಚ್ಚಳ ಮಾಡಿದರೆ ಎಷ್ಟು ಭೂಮಿ ಬೇಕಾಗಬಹುದು ಎಂದು ಮುಖ್ಯಮಂತ್ರಿಯವರು ಹಾಗೂ ನಾನು ಸಂಬಂಧಪಟ್ಟವರಿಂದ ಮಾಹಿತಿ ಪಡೆದುಕೊಂಡಿದ್ದೇವೆ. ಇದರ ಬಗ್ಗೆ ಕಾನೂನು ತಜ್ಞರ ಬಳಿ ಚರ್ಚೆ ನಡೆಸಲಾಗುತ್ತಿದೆ. ಇದರ ಬಗ್ಗೆ ಕಾನೂನು ತಂಡ ಗುರುವಾರ ಬೆಳಿಗ್ಗೆ ಅಭಿಪ್ರಾಯ ನೀಡಲಿದ್ದು, ಇದನ್ನು ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು" ಎಂದು ಹೇಳಿದರು.
ಶಾಂತಿಭಂಗದ ಷಡ್ಯಂತ್ರ ಮಾಡುತ್ತಿರುವ ಅಶೋಕ್
ದ್ವೇಷ ಬಿತ್ತುವ, ಸಮಾಜ ಇಬ್ಬಾಗ ಮಾಡುವುದೇ ಅವರ (ಆರ್.ಅಶೋಕ್) ಅಜೆಂಡಾ. ಅವರೇ ಶಾಂತಿಭಂಗ ಮಾಡುವ, ಅಶಾಂತಿ ಉಂಟುಮಾಡುವ ಷಡ್ಯಂತ್ರ ರೂಪಿಸುತ್ತಿದ್ದಾರೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು.
ಕನಕಪುರದಲ್ಲಿ ಮಾತನಾಡಿದ ಅವರು ಧರ್ಮಸ್ಥಳ, ದಸರಾ ಉದ್ಘಾಟನೆ, ಚಾಮುಂಡಿ ಬೆಟ್ಟ ಪ್ರವೇಶದ ವಿಚಾರದಲ್ಲಿ ವಿಪಕ್ಷ ನಾಯಕ ಅಶೋಕ್ ಅವರ ಟೀಕೆಗಳ ಬಗ್ಗೆ ಕೇಳಿದಾಗ, "ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಉದ್ಯೋಗವಿಲ್ಲ. ಎಲ್ಲಾ ಷಡ್ಯಂತ್ರಗಳ ಬಗ್ಗೆ ತನಿಖೆ ನಡೆಯುತ್ತಿದೆ. ಎಲ್ಲವೂ ಶೀಘ್ರ ಆಚೆ ಬರಲಿದೆ" ಎಂದು ಹೇಳಿದರು.