ರಾಜ್ಯ

News Headlines 12-09-25 | ಜಾತಿಗಣತಿ ಮರು ಸಮೀಕ್ಷೆ: 425 ಕೋಟಿ ರೂ ವೆಚ್ಚ- ಸಿಎಂ; ಶಾಸಕ ಯತ್ನಾಳ್ ವಿರುದ್ಧ FIR: ಮದ್ದೂರು ASP ತಿಮ್ಮಯ್ಯ ವರ್ಗಾವಣೆ; ಎಸ್ ನಾರಾಯಣ್, ಕುಟುಂಬದ ವಿರುದ್ಧ ದೂರು!

ಸೆ.22ರಿಂದ ಜಾತಿಗಣತಿ ಮರು ಸಮೀಕ್ಷೆ: 425 ಕೋಟಿ ಖರ್ಚು

ಜಾತಿಗಣತಿ ಮರು ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಸೆಪ್ಟೆಂಬರ್ 22ರಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದಾರೆ. ಸೆ.22ರಿಂದ ಅ.7ರವರೆಗೆ ಒಟ್ಟು 15 ದಿನಗಳ ಕಾಲ ಸಮೀಕ್ಷೆ ನಡೆಯಲಿದೆ. ಹೊಸದಾಗಿ 7 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿ ಗತಿ ಅರಿಯಲು ಈ ಸಮೀಕ್ಷೆ ನಡೆಸಲಾಗುತ್ತಿದೆ. ಆದಷ್ಟೂ ಜಾಗ್ರತೆಯಿಂದ ಸಮೀಕ್ಷೆ ನಡೆಸಿ ವರದಿ ಕೊಡಲು ಸೂಚನೆ ನೀಡಿದ್ದೇವೆ. 1,75,000 ಸರ್ಕಾರಿ ಶಾಲಾ ಶಿಕ್ಷಕರುಗಳನ್ನು ವಿಶೇಷ ಭತ್ಯೆ ನೀಡಿ ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೇವೆ. ಶಿಕ್ಷಕರ ಭತ್ಯೆಯೇ 325 ಕೋಟಿ ರೂ. ಆಗಲಿದೆ. ಸದ್ಯ 425 ಕೋಟಿ ಹಣ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು ಹೆಚ್ಚಿನ‌ ಹಣದ ಅಗತ್ಯಬಿದ್ದರೆ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು. ಮನೆ ಮನೆಗೂ ಕರೆಂಟ್ ಇದೆ. ಮೀಟರ್ ರೀಡರ್‌ಗಳು jio tag ಮಾಡುವ ಜೊತೆಗೆ 2 ಕೋಟಿ ಮನೆಗಳಿಗೆ ಪ್ರತ್ಯೇಕ ಗುರುತಿನ ನಂಬರ್ ನೀಡಿ ಸ್ಟಿಕ್ಕರ್ ಅಂಟಿಸುತ್ತಾರೆ. ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಅನ್ನು ಮೊಬೈಲಿಗೆ ಲಿಂಕ್ ಮಾಡುವುದರ ಜೊತೆಗೆ ಮೊಬೈಲ್ ಇಲ್ಲದ ಮನೆಗಳಿಗೂ ಪರ್ಯಾಯ ಮಾರ್ಗ ಹುಡುಕಿಕೊಂಡಿದ್ದೇವೆ ಎಂದು ತಿಳಿಸಿದರು.

Maddur Violence ಶಾಸಕ Yathnal ವಿರುದ್ಧ FIR

ಮದ್ದೂರಿನಲ್ಲಿ ಗಣೇಶ ಮೂರ್ತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಘಟನೆ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಭೇಟಿ ನೀಡಿದ್ದ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪದಡಿಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಗಣಪತಿ ಮೂರ್ತಿಗಳು ದೇಶದ ಯಾವುದೇ ಮಸೀದಿಗಳ ಮುಂದೆ ಹಾದುಹೋಗುವ ಹಕ್ಕಿದೆ. ಇದನ್ನು ವಿರೋಧಿಸುವವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ನಾನು ಅಧಿಕಾರಕ್ಕೆ ಬಂದರೆ 'ಅಕ್ರಮ ಮಸೀದಿಗಳನ್ನು' ಕೆಡವಲಾಗುವುದು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಸಿದ್ದರು. ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಮತ್ತು ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಉದ್ದೇಶದಿಂದ ದ್ವೇಷ ಭಾಷಣ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದ್ದೂರು ಕೋಮುಗಲಭೆ: ASP ತಿಮ್ಮಯ್ಯ ವರ್ಗಾವಣೆ

ಗಣೇಶ ವಿಸರ್ಜನೆ ವೇಳೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದಿದ್ದ ಕೋಮುಗಲಭೆಗೆ ಸಂಬಂಧಿಸಿದಂತೆ ಮಂಡ್ಯ ಹೆಚ್ಚುವರಿ ಎಸ್‌ಪಿ ತಿಮ್ಮಯ್ಯ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಸೆಪ್ಟೆಂಬರ್ 7 ಗಣೇಶ ವಿಸರ್ಜನೆ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದಿತ್ತು. ಇದು ಕೋಮು ಉದ್ವಿಗ್ನತೆಗೆ ಕಾರಣವಾಯಿತು. ಈ ವೇಳೆ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 25 ಮಂದಿಯನ್ನು ಬಂಧಿಸಿದ್ದಾರೆ. ಪೊಲೀಸ್ ಅಧಿಕಾರಿಯ ವರ್ಗಾವಣೆ ಬಗ್ಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಆಂತರಿಕ ಭದ್ರತಾ ಲೋಪ ಕಂಡು ಬಂದಿದೆ. ಭದ್ರತಾ ಲೋಪ ಕಂಡು ಬಂದಾಗ ಇಲಾಖೆ ಕ್ರಮ ಕೈಗೊಳ್ಳಬೇಕಲ್ಲವೇ? ಇನ್ಸ್ಪೆಕ್ಟರ್, ಪಿಎಸ್ಐ ಯಾರೇ ಇರಲಿ ಲೋಪಕಂಡು ಬಂದರೆ ಕ್ರಮ ಕೈಗೊಳ್ಳುತ್ತೇವೆ. ಆಂತರಿಕ ಭದ್ರತಾ ಲೋಪಗಳನ್ನು ಇಲಾಖೆ ಗಂಭೀರವಾಗಿ ಪರಿಗಣಿಸುತ್ತದೆ. ಹಾಗಾಗಿ ಮಂಡ್ಯ ಹೆಚ್ಚುವರಿ ಎಸ್ಪಿ-1 ತಿಮ್ಮಯ್ಯ ವಿರುದ್ಧ ಕ್ರಮ ಆಗಿದೆ ಎಂದರು.

ವಿಧಾನಸಭೆ-ಸಂಸತ್ತು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯಾಗುತ್ತಿದೆ

ವಿಧಾನಸಭೆ-ಸಂಸತ್ತು ರಾಜಕೀಯ ಆರೋಪ-ಪ್ರತ್ಯಾರೋಪಗಳ ವೇದಿಕೆಗಳಾಗಿ ಬದಲಾಗುತ್ತಿವೆ ಎಂದು ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಕಳವಳ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಲಾಗಿದ್ದ ಕಾಮನ್‌ವೆಲ್ತ್ ಸಂಸದೀಯ ಸಂಘದ ಭಾರತ ವಲಯದ 11ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜೆಗಳ ಆಕಾಂಕ್ಷೆಗಳನ್ನು ಈಡೇರಿಸಲು ಸಂಸತ್ತು, ವಿಧಾನಸಭೆಗಳಲ್ಲಿ ಜನಕಲ್ಯಾಣದ ಆರೋಗ್ಯಕರ ಚರ್ಚೆಗಳಾಗಬೇಕು ಎಂದು ಕರೆ ನೀಡಿದರು. ದಿನದಿಂದ ದಿನಕ್ಕೆ ಶಾಸನಸಭೆಗಳಲ್ಲಿ ಗಾಂಭೀರ್ಯತೆ ಇಲ್ಲದೆ, ಚರ್ಚೆಗಳ ಗುಣಮಟ್ಟ ತಳಮಟ್ಟಕ್ಕೆ ತಲುಪುತ್ತಿದೆ. ರಾಜಕೀಯ ಆರೋಪ-ಪ್ರತ್ಯಾರೋಪಗಳೇ ಪ್ರಾಮುಖ್ಯತೆ ಪಡೆದು ಜನರ ಅಭಿವೃದ್ಧಿ ಸಂಬಂಧಿಸಿದ ವಿಷಯಗಳ ಗೌಣವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ನಿರ್ದೇಶಕ ಎಸ್ ನಾರಾಯಣ್, ಕುಟುಂಬದ ವಿರುದ್ಧ ದೂರು

ಸೊಸೆಗೆ ಕಿರುಕುಳ ನೀಡಿದ ಆರೋಪದ ಮೇಲೆ ಖ್ಯಾತ ಸಿನಿಮಾ ನಿರ್ದೇಶಕ ಎಸ್. ನಾರಾಯಣ್, ಅವರ ಪತ್ನಿ ಮತ್ತು ಮಗನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಸ್. ನಾರಾಯಣ್ ಅವರ ಎರಡನೇ ಮಗ ಪವನ್ ಪತ್ನಿ ಪವಿತ್ರಾ ದೂರು ದಾಖಲಿಸಿದ್ದಾರೆ. ಮದುವೆಯ ಸಮಯದಲ್ಲಿ ವರದಕ್ಷಿಣೆ ನೀಡಲಾಗಿದ್ದರೂ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ದೂರಿನ ಹಿನ್ನೆಲೆಯಲ್ಲಿ ಜ್ಞಾನಭಾರತಿ ಠಾಣೆ ಪೊಲೀಸರು ಎಸ್ ನಾರಾಯಣ್ ಹಾಗೂ ಪತ್ನಿ ಪುತ್ರನಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅದೃಷ್ಟ ಕೈಹಿಡಿದರೆ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ; 2028ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲೇ ಚುನಾವಣೆ: ಡಿಕೆ ಸುರೇಶ್

ಟನಲ್ ಯೋಜನೆ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಅಂದ್ಕೊಂಡಿದ್ದೆ, ಕಾರಿಲ್ಲದೇ ಮದುವೆಯಾಗದವರ ಸಮಸ್ಯೆ ನಿವಾರಣೆಗೆ ಅಂತ ಗೊತ್ತಿರ್ಲಿಲ್ಲ- DKS ಹೇಳಿಕೆಗೆ ತೇಜಸ್ವಿ ವ್ಯಂಗ್ಯ

ಬಿಹಾರ ಚುನಾವಣೆಗೆ ಹಣ ಒದಗಿಸಲು ಸಚಿವರಿಂದ ಸಿಎಂ ಸಿದ್ದರಾಮಯ್ಯ 300 ಕೋಟಿ ರೂಪಾಯಿ ಸಂಗ್ರಹ: ಶ್ರೀರಾಮುಲು

Bengaluru: ದೇಗುಲಕ್ಕೆ ನುಗ್ಗಿ ಚಪ್ಪಲಿ ಕಾಲಲ್ಲಿ ಮೂರ್ತಿಗೆ ಒದ್ದ ಬಾಂಗ್ಲಾ ಪ್ರಜೆ, ಸ್ಥಳೀಯರ 'ಧರ್ಮದೇಟು', Video

ಆತ್ಮಹತ್ಯೆ ಮಾಡಿಕೊಂಡ ವೈದ್ಯೆ ಕುಟುಂಬದೊಂದಿಗೆ ಮಾತನಾಡಿದ ರಾಹುಲ್ ಗಾಂಧಿ; ನ್ಯಾಯದ ಭರವಸೆ

SCROLL FOR NEXT