ಬಳ್ಳಾರಿ: ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯಾಚರಿಸುತ್ತಿದ್ದ ಮಕ್ಕಳ ಕಳ್ಳತನ ಮಾಡುವ ಗ್ಯಾಂಗ್ ಅನ್ನು ಪೊಲೀಸರು ಪತ್ತೆಹಚ್ಚಿದ್ದು, ಅಪಹರಣ ನಡೆದ 24 ಗಂಟೆಗಳಲ್ಲಿ ಒಂದೂವರೆ ತಿಂಗಳ ಮಗುವನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾ ರಾಣಿ ಮಾತನಾಡಿ, ಆರೋಪಿ ಶಮೀಮ್, ಆಕೆಯ ಪತಿ ಇಸ್ಮಾಯಿಲ್ ಮತ್ತು ಸಹಚರ ಬಾಷಾ ಶುಕ್ರವಾರ ಮಗುವನ್ನು ಅಪಹರಿಸಿ, ನಂತರ ತೋರಣಗಲ್ಲಿನ ಬಸವರಾಜ ಮಹಾಂತಪ್ಪ ಎಂಬುವವರಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
19 ವರ್ಷಗಳಿಂದ ಮಕ್ಕಳಿಲ್ಲದ ಬಸವರಾಜ, ಕಠಿಣ ನಿಯಮಗಳಿಂದಾಗಿ ಕಾನೂನುಬದ್ಧವಾಗಿ ದತ್ತು ಪಡೆಯಲು ವಿಫಲವಾದ ನಂತರ ಬಾಷಾ ಎಂಬಾತನನ್ನು ಸಂಪರ್ಕಿಸಿದ್ದನು ಎಂದು ಶೋಭಾ ರಾಣಿ ಹೇಳಿದರು.
ಪೊಲೀಸರ ಪ್ರಕಾರ, ಮಗುವಿನ ತಾಯಿ ಬೆಣಕಲ್ಲು ಗ್ರಾಮದ ಶ್ರೀದೇವಿ ಹೊಲಿಗೆಗಳನ್ನು ತೆಗೆಸಲು ಮತ್ತು ತಮ್ಮ ನವಜಾತ ಶಿಶುವಿನ ಜನನ ಪ್ರಮಾಣಪತ್ರವನ್ನು ಪಡೆಯಲು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ.
ಆದರೆ, ಪುರಸಭೆಯ ಕಚೇರಿಯಲ್ಲಿ ಜನನ ಪ್ರಮಾಣಪತ್ರ ನೀಡುವುದಾಗಿ ಶಮೀಮ್ ಹೇಳಿದ್ದಾರೆ. ಆಗ ಶ್ರೀದೇವಿ ಶೌಚಾಲಯಕ್ಕೆ ಹೋಗಲು ಮಗುವನ್ನು ಶಮೀಮ್ ಬಳಿಯಲ್ಲಿ ಕೊಟ್ಟಿದ್ದಾರೆ. ಈ ವೇಳೆ ಶಮೀಮ್ ಮಗುವಿನೊಂದಿಗೆ ಪರಾರಿಯಾಗಿದ್ದರು.
ಶ್ರೀದೇವಿ ತಕ್ಷಣವೇ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದಾರೆ.
ಪ್ರಕರಣಕ್ಕೆ ಆದ್ಯತೆ ನೀಡಲಾಗಿದ್ದು, ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಶನಿವಾರ ರಾತ್ರಿಯ ವೇಳೆಗೆ ಮಗುವನ್ನು ರಕ್ಷಿಸಿದ್ದಾರೆ. ಶಮೀಮ್‌ನ ತಾಯಿ ಜೈನಬಿ ಕೂಡ ಈ ಹಿಂದಿನ ಮಕ್ಕಳ ಕಳ್ಳತನ ಪ್ರಕರಣದಲ್ಲಿ ಅಪರಾಧಿಯಾಗಿದ್ದಾರೆ ಎಂದು ಎಸ್‌ಪಿ ಹೇಳಿದರು.
ಈ ಗ್ಯಾಂಗ್ ಎಷ್ಟು ಪ್ರಕರಣಗಳಲ್ಲಿ ಭಾಗಿಯಾಗಿರಬಹುದು ಎಂದು ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.