ಈ ಬಾರಿಯ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಮೂವರು ಹೈಕೋರ್ಟ್ ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿದೆ. ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟಿಸಬಾರದು ಎಂದು ಪ್ರತಾಪ್ ಸಿಂಹ, ಟಿ. ಗಿರೀಶ್ ಕುಮಾರ್ ಹಾಗೂ ಹೆಚ್.ಎಸ್. ಗೌರವ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವಿಭಿನ್ನ ನಂಬಿಕೆಯ ವ್ಯಕ್ತಿಯನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದರಿಂದ ಸಾಂವಿಧಾನಿಕ ಅಥವಾ ಕಾನೂನು ಹಕ್ಕನ್ನು ಉಲ್ಲಂಘಿಸುತ್ತದೆ ಎಂಬ ವಾದಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ. ಬಾನು ಮುಸ್ತಾಖ್ ಅವರಿಗೆ ಹಿಂದೂ ಧರ್ಮದಲ್ಲಿ ನಂಬಿಕೆಯಿಲ್ಲ. ಅವರು ಹಿಂದೂ ವಿರೋಧಿಯಾಗಿದ್ದು, ಭುವನೇಶ್ವರಿಯನ್ನು ಅಪಮಾನ ಮಾಡಿದ್ದಾರೆ. ಬಾನು ಮುಷ್ತಾಕ್ ಆ ಹೇಳಿಕೆಗಳನ್ನು ಹಿಂಪಡೆದು ಕ್ಷಮೆಯಾಚಿಸಿದರೆ, ಅವರು ಸೆಪ್ಟೆಂಬರ್ 22 ರಂದು ದಸರಾ ಉದ್ಘಾಟನೆಗೆ ನಮ್ಮ ಅಭ್ಯಂತರವಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.
ನಟ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಹ್ಯಾಕ್ ಆಗಿದ್ದು, ಈ ಬಗ್ಗೆ ಉಪೇಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ತಮ್ಮ ಹೆಸರು ಹೇಳಿಕೊಂಡು ಯಾರಾದರೂ ದುಡ್ಡು ಕೇಳಿದ್ರೆ ಕೊಡಬೇಡಿ ಎಂದು ಉಪೇಂದ್ರ ಅವರು ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಉಪೇಂದ್ರ, ಪ್ರಿಯಾಂಕಾ ಹಾಗೂ ನನ್ನ ಮೊಬೈಲ್‌ನಿಂದ ಯಾರಾದರೂ ದುಡ್ಡು ಕಳುಹಿಸಿ ಎಂದು ಏನಾದರೂ ಸಂದೇಶ ಬಂದರೆ ದಯವಿಟ್ಟು ಕಳುಹಿಸೋದಕ್ಕೆ ಹೋಗಬೇಡಿ. ಈಗಾಗಲೇ ಪ್ರಿಯಾಂಕಾ ವಾಟ್ಸಾಪ್ನಿಂದ ಕೆಲವರಿಗೆ ಮೆಸೇಜ್ ಹೋಗಿದೆ. ನನ್ನ ಹೆಸರು ಹಾಕಿ ನಿಮಗೆ ಏನಾದರೂ ದುಡ್ಡು ಕಳುಹಿಸಿ ಎಂದರೆ ಯಾರು ಕಳುಹಿಸಬೇಡಿ. ನಾವು ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಭಾರತೀಯ ವಾಯುಪಡೆಯ ಎಂಜಿನಿಯರ್ ಒಬ್ಬರು ಅಪಾರ್ಟ್ ಮೆಂಟ್ ನ 24ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹಲಸೂರು ಮಿಲಿಟರಿ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ 25 ವರ್ಷದ ಲೋಕೇಶ್ ಪವನ್ ಕೃಷ್ಣ ಆತ್ಮಹತ್ಯೆಗೆ ಶರಣಾಗಿದ್ದು, ಬೆಂಗಳೂರಿನ ಪ್ರೆಸ್ಟೀಜ್ ಜಿಂದಾಲ್ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ನಿನ್ನೆ ಸಂಜೆ ಲೋಕೇಶ್ ತಮ್ಮ ಸಹೋದರಿ ಲಕ್ಷ್ಮಿ ಅವರನ್ನು ಭೇಟಿ ಮಾಡಿದ್ದರು, ಅವರ ಮನಸ್ಥಿತಿ ಹಾಳಾಗಿತ್ತು ಆ ಕ್ಷಣದಲ್ಲಿ ಅವರು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ.
ಎಂಜಿನ್ನಲ್ಲಿ ಕಾಣಿಸಿಕೊಂಡ ಬೆಂಕಿ ದಿಢೀರನೇ ವ್ಯಾಪಿಸಿ ಇಡೀ ಬಿಎಂಟಿಸಿ ಬಸ್ ಧಗಧಗನೆ ಹೊತ್ತಿ ಉರಿದ ಘಟನೆ ಬೆಂಗಳೂರಿನ ಹೆಚ್ಎಎಲ್ ಏರ್ಪೋರ್ಟ್ ಮುಖ್ಯ ಗೇಟ್ ಬಳಿ ಸೊಮವಾರ ಮುಂಜಾನೆ ಸಂಭವಿಸಿದೆ. ಮೆಜೆಸ್ಟಿಕ್ನಿಂದ ಕಾಡುಗೋಡಿಗೆ ತೆರಳುತ್ತಿದ್ದ ಬಿಎಂಟಿಸಿ ಬಸ್ನ ಎಂಜಿನ್ನಲ್ಲಿ ಬೆಂಕಿ ಕಾಣಿಸಿದೆ. ತಕ್ಷಣವೇ ಎಚ್ಚೆತ್ತ ಚಾಲಕ ಬಸ್ ನಿಲ್ಲಿಸಿ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿದ್ದು.ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಚ್ಎಎಲ್ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಂಟಿಸಿ ಬೆಂಕಿ ಕಾಣಿಸಿಕೊಳ್ಳಲು ಕಾರಣ ಪತ್ತೆ ಹಚ್ಚಲು ಮುಂದಾಗಿದೆ.
ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ದಾಳಿ ಬಳಿಕ ಇದೀಗ ಸಿಬಿಐ ದಾಳಿ ಮಾಡಿದೆ. ಬಳ್ಳಾರಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಗೋವಿಂದರಾಜಲು ಅವರ ಮನೆ ಮೇಲೆ ಸಿಬಿಐ ದಾಳಿ ಮಾಡಿದೆ. ಗೋವಿಂದರಾಜಲು ಮನೆಯಿಂದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಮೂಟೆಯಲ್ಲಿ ಕೊಂಡೊಯ್ದಿದ್ದಾರೆ. ಈ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವರಾಗಿದ್ದ ಬಿ ನಾಗೇಂದ್ರ ಅವರ ತಲೆದಂಡವಾಗಿದ್ದು, ಇದನ್ನೇ ಇಟ್ಟುಕೊಂಡು ವಿಪಕ್ಷ ಬಿಜೆಪಿ ನಾಯಕರು ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ಮಾಡಿದ್ದರು. ಆದ್ರೆ, ಇದೀಗ ಇದೇ ಪ್ರಕರಣ ಸಂಬಂಧ ಬಿಜೆಪಿ ಮುಖಂಡನ ಮನೆ ಮೇಲೆ ಸಿಬಿಐ ದಾಳಿ ಮಾಡಿದ್ದು, ಈ ಹಗರಣದಲ್ಲಿ ಬಿಜೆಪಿಗೂ ನಂಟು ಇದೆಯಾ ಎನ್ನುವ ಚರ್ಚೆಗಳು ಶುರುವಾಗಿವೆ.