ಧಾರವಾಡ: ತಮ್ಮ ಸಾರ್ವಜನಿಕ ಸಭೆಯನ್ನು ಪೊಲೀಸ್ ಪೇದೆಯೊಬ್ಬರು ರೆಕಾರ್ಡ್ ಮಾಡಿದ್ದಕ್ಕೆ ಆಕ್ಷೇಪಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಧಾರವಾಡದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.
ಶನಿವಾರ ಸಂಜೆ ನರೇಂದ್ರ ಗ್ರಾಮದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವನ್ನು ಪೊಲೀಸ್ ಕಾನ್‌ಸ್ಟೆಬಲ್ ಒಬ್ಬ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ, ಈ ವೇಳೆ ಅವರು ಕಾನ್‌ಸ್ಟೆಬಲ್ ನನ್ನು ರೆಕಾರ್ಡ್ ಮಾಡುವುದನ್ನು ನಿಲ್ಲಿಸುವಂತೆ ಕೇಳಿಕೊಂಡರು.
ಸೆಪ್ಟೆಂಬರ್ 6 ರಂದು ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಲಾಠಿಚಾರ್ಜ್ ಕುರಿತು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲು ಜೋಶಿ ಗ್ರಾಮಕ್ಕೆ ಆಗಮಿಸಿದ್ದರು. ಲಾಠಿಚಾರ್ಜ್‌ನಲ್ಲಿ ಭಾಗಿಯಾಗಿದ್ದ ಪೊಲೀಸರನ್ನು ಅಮಾನತುಗೊಳಿಸಬೇಕೆಂದು ಅವರು ಒತ್ತಾಯಿಸಿದರು.
ಲಾಠಿಚಾರ್ಜ್‌ನಲ್ಲಿ ಗಾಯಗೊಂಡ ಗ್ರಾಮಸ್ಥರ ಮನೆಗಳಿಗೆ ನಾನು ಭೇಟಿ ನೀಡಿದ್ದೆ. ಮೂರು ವರ್ಷದ ಮಕ್ಕಳ ಮೇಲೂ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಪೊಲೀಸರು ವೈಯಕ್ತಿಕ ದ್ವೇಷದಿಂದ ವರ್ತಿಸಿದ್ದಾರೆ. ಇದು ಮುಂದುವರಿದರೆ, ನಾನು ಕೇಂದ್ರ ಸಚಿವ ಎಂಬುದನ್ನು ಮರೆತು ಧರಣಿಯಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಅವರು ಹೇಳಿದರು.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ಲಾಠಿಚಾರ್ಜ್ ಮಾಡಬೇಕಾಯಿತು ಎಂದು ಎಸ್‌ಪಿ ಗುಂಜನ್ ಆರ್ಯ ಹೇಳಿದರು. ಈ ಸಂಬಂಧ ಪೊಲೀಸರು 50 ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಿದ್ದು ಹಲವಾರು ಹೇಳಿಕೆಗಳನ್ನು ದಾಖಲಿಸಿದ್ದಾರೆ. ದೂರುಗಳ ಆಧಾರದ ಮೇಲೆ ವಿಚಾರಣೆ ನಡೆಸಲಾಗುವುದು ಎಂದು ಅವರು ಹೇಳಿದರು.
ಸಭೆಯ ನಡಾವಳಿಗಳನ್ನು ದಾಖಲಿಸುತ್ತಿದ್ದ ಕಾನ್‌ಸ್ಟೆಬಲ್ ಬಗ್ಗೆ ಮಾತನಾಡಿದ ಗುಂಜನ್ ಆರ್ಯ, "ನಾವು ಇಡೀ ಸಭೆಯನ್ನು ರೆಕಾರ್ಡ್ ಮಾಡುತ್ತಿದ್ದೆವು. ಇದು ಸಾಮಾನ್ಯ ವಿಧಾನವಾದ್ದರಿಂದ ಯಾವುದೇ ತಪ್ಪಿಲ್ಲ. ಸಚಿವರು ಆಕ್ಷೇಪಿಸಿದಾಗ ರೆಕಾರ್ಡಿಂಗ್ ನಿಂತುಹೋಯಿತು ಎಂದು ಹೇಳಿದರು.