ಹದಗೆಟ್ಟಿರುವ ರಸ್ತೆಗಳ ಪರಿಸ್ಥಿತಿ ಮತ್ತು ದೀರ್ಘ ಪ್ರಯಾಣದ ಸಮಯವನ್ನು ಉಲ್ಲೇಖಿಸಿ, ನಗರದ ಹೊರ ವರ್ತುಲ ರಸ್ತೆ ಪ್ರದೇಶದಿಂದ ತನ್ನ ಕಚೇರಿಯನ್ನು ಸ್ಥಳಾಂತರಿಸಲು ನಿರ್ಧರಿಸಿರುವುದಾಗಿ ಬೆಂಗಳೂರು ಮೂಲದ ಲಾಜಿಸ್ಟಿಕ್ಸ್ ಸ್ಟಾರ್ಟ್ಅಪ್ ಬ್ಲ್ಯಾಕ್‌ಬಕ್ ತಿಳಿಸಿದೆ. 9 ವರ್ಷಗಳಿಂದ ಔಟರ್ ರಿಂಗ್ ರೋಡ್‌ನಲ್ಲಿ ಬೆಳ್ಳಂದೂರಿನಿಂದ ಕಾರ್ಯನಿರ್ವಹಿಸುತ್ತಿದ್ದ ಕಂಪನಿಗೆ, ಉದ್ಯೋಗಿಗಳಿಗೆ 'ಇಲ್ಲಿ ಮುಂದುವರಿಯುವುದು ಈಗ ತುಂಬಾ ಕಷ್ಟ. ನಾವು ಹೊರಹೋಗಲು ನಿರ್ಧರಿಸಿದ್ದೇವೆ' ಎಂದು ಬ್ಲ್ಯಾಕ್‌ಬಕ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ರಾಜೇಶ್ ಯಬಾಜಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಐಟಿ ದಿಗ್ಗಜ ಮೋಹನ್ ದಾಸ್ ಪೈ ಕೂಡ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇದು ಬೆಂಗಳೂರಿನಲ್ಲಿ ಆಡಳಿತದ ದೊಡ್ಡ ವೈಫಲ್ಯ ಆಗಿದೆ. ಹಲವು ಕಂಪನಿಗಳ ಸಿಐಒಗಳು ಹೊರಹೋಗುತ್ತಿದ್ದಾರೆ. ಬೆಂಗಳೂರಿನ ಔಟರ್ ರಿಂಗ್ ರಸ್ತೆಗಳಲ್ಲಿ ಪರಿಸ್ಥಿತಿ ಕೆಟ್ಟದಾಗಿದೆ. ದಯವಿಟ್ಟು ಮಧ್ಯಪ್ರವೇಶ ಮಾಡಬೇಕೆಂದು ಬೆಂಗಳೂರು ನಗರಾಭಿವೃದ್ಧಿ ಸಚಿವ, ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಟ್ಯಾಗ್ ಮಾಡಿದ್ದಾರೆ. ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಸ್ವಚ್ಛ ಮತ್ತು ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ನವೆಂಬರ್ ಒಳಗೆ ನಗರದ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಲು ಗುತ್ತಿಗೆದಾರರಿಗೆ ಅಂತಿಮ ಗಡುವು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ಸ್ನಾನಘಟ್ಟದ ಬಳಿಯ ಬಂಗ್ಲೆಗುಡ್ಡ ಅರಣ್ಯದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ ಅಸ್ಥಿಪಂಜರಗಳ ಅವಶೇಷಗಳನ್ನು ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ. ಅಧಿಕಾರಿಗಳ ಪ್ರಕಾರ, ಹಿಂದಿನ ಸಾಕ್ಷಿಗಳ ಸಾಕ್ಷ್ಯ ಸಂಗ್ರಹಣೆಯ ಸಮಯದಲ್ಲಿ ಸಂಭಾವ್ಯ ಪುರಾವೆ ಸ್ಥಳವೆಂದು ಗುರುತಿಸಲಾದ ಈ ಪ್ರದೇಶದಲ್ಲಿ ಭಾರಿ ಮೂಳೆಗಳು ಪತ್ತೆಯಾಗಿದ್ದು, ಪರೀಕ್ಷೆಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮೃತ ಸೌಜನ್ಯ ಅವರ ಚಿಕ್ಕಪ್ಪ ವಿಠ್ಠಲ್ ಗೌಡ ಈ ಹಿಂದೆ ಹೇಳಿಕೆ ನೀಡಿದ್ದನ್ನು ಅನುಸರಿಸಿ ಎಸ್ಐಟಿ ತಂಡ ಇಂದು ಶೋಧ ನಡೆಸಿತ್ತು. ಇನ್ನು ಧರ್ಮಸ್ಥಳ ದೇವಸ್ಥಾನ ಆಡಳಿತ ಮಂಡಳಿಯಿಂದ ನಡೆದಿದೆ ಎನ್ನಲಾದ ಭೂಕಬಳಿಕೆ, ಆರ್ಥಿಕ ದುರುಪಯೋಗ ಮತ್ತು ಆಡಳಿತಾತ್ಮಕ ಅಕ್ರಮಗಳ ಆರೋಪಗಳ ಕುರಿತು ಜಾರಿ ನಿರ್ದೇಶನಾಲಯದ (ಇ.ಡಿ) ಮೂಲಕ ತನಿಖೆ ನಡೆಸುವಂತೆ ಖ್ಯಾತ ಬರಹಗಾರ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿ ಮತ್ತು ಹಲವಾರು ಸಾಮಾಜಿಕ ಕಾರ್ಯಕರ್ತರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ ನೀರಾವರಿ ಯೋಜನೆಗಳಿಗಾಗಿ 7000 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮಾತನಾಡಿದ ಅವರು, ಹೈದರಾಬಾದ್-ಕರ್ನಾಟಕದ ನಿಜಾಮನ ಆಳ್ವಿಕೆಯಿಂದ ವಿಮೋಚನೆಗಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗಗಳನ್ನು ಈ ಸಂದರ್ಭ ನೆನಪಿಸುತ್ತದೆ ಎಂದು ಅವರು ಹೇಳಿದರು.
ಕಲಬುರಗಿ ಭೇಟಿ ವೇಳೆ ಜಿಲ್ಲೆಯಲ್ಲಿ ಮಳೆ ಮತ್ತು ಪ್ರವಾಹದಿಂದ ಬೆಳೆ ಹಾನಿಗೊಳಗಾದ ಪ್ರದೇಶಗಳನ್ನು ಸಿದ್ದರಾಮಯ್ಯ ವೀಕ್ಷಿಸಿದರು. ಮಳೆ ಮತ್ತು ಪ್ರವಾಹದಿಂದ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡುವ ಕುರಿತು ಕಂದಾಯ ಮತ್ತು ಕೃಷಿ ಇಲಾಖೆಗಳಿಂದ ಜಂಟಿ ಸಮೀಕ್ಷೆಗೆ ನಿರ್ದೇಶನ ನೀಡಿದ್ದೇನೆ ಎಂದು ಸಿಎಂ ಹೇಳಿದರು. ಒಂದು ವಾರದಲ್ಲಿ ಜಂಟಿ ಸಮೀಕ್ಷೆ ನಡೆಯಲಿದೆ. ಅದರ ನಂತರ ಬೆಳೆ ನಷ್ಟ ಪರಿಹಾರವನ್ನು ವಿತರಿಸಲಾಗುವುದು" ಎಂದು ಸಿಎಂ ತಿಳಿಸಿದ್ದಾರೆ.
ವಿಜಯಪುರದ ಚಡಚಣದಲ್ಲಿ SBI ಬ್ಯಾಂಕ್ ಗೆ ನುಗ್ಗಿದ ದರೋಡೆಕೋರರು ಬ್ಯಾಂಕ್ ಮ್ಯಾನೇಜರ್, ಕ್ಯಾಷಿಯರ್ ಮತ್ತು ಸಿಬ್ಬಂದಿಯ ಕೈಕಾಲು ಕಟ್ಟಿ ಹಾಕಿ ಅಪಾರ ಪ್ರಮಾಣದಲ್ಲಿ ನಗದು ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಮುಖಕ್ಕೆ ಮುಸುಕು ಧರಿಸಿ ಬಂದಿದ್ದ ದರೋಡೆಕೋರರು ಪಿಸ್ತೂಲು, ಮಾರಕಾಸ್ತ್ರಗಳೊಂದಿಗೆ ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿಯನ್ನು ಬೆದರಿಸಿ ಕಟ್ಟಿಹಾಕಿ ದರೋಡೆ ನಡೆಸಿದ್ದಾರೆ. ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಂಕ್ ಅಧಿಕಾರಿಗಳ ಅಂದಾಜಿನ ಪ್ರಕಾರ, ಒಟ್ಟು 21 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಗದು ಮತ್ತು ಚಿನ್ನಾಭರಣಗಳನ್ನು ದರೋಡೆಕೋರರು ಕದ್ದಿದ್ದಾರೆ. ಮಂಗಳವಾರ ಸಂಜೆ 6.30 ರ ಸುಮಾರಿಗೆ ಈ ಘಟನೆ ನಡೆದಿದೆ.