ನವದೆಹಲಿ: ಅಕ್ರಮ ಹಣ ವರ್ಗಾವಣೆ ತನಿಖೆಯಲ್ಲಿ ವಿವಿಧ ಕಾನೂನುಗಳು ಮತ್ತು ಸರ್ಕಾರಿ ಆದೇಶಗಳನ್ನು ಉಲ್ಲಂಘಿಸುವ ಮೂಲಕ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನಗಳ ಹಂಚಿಕೆಯಲ್ಲಿ "ದೊಡ್ಡ ಪ್ರಮಾಣದ" ಹಗರಣ ನಡೆದಿರುವುದು ಕಂಡುಬಂದಿದೆ ಎಂದು ಜಾರಿ ನಿರ್ದೇಶನಾಲಯ(ED) ಗುರುವಾರ ಹೇಳಿದೆ.
ಅನರ್ಹ ಸಂಸ್ಥೆ/ವ್ಯಕ್ತಿಗಳಿಗೆ ಪರಿಹಾರ ನಿವೇಶನಗಳ "ಅಕ್ರಮ" ಹಂಚಿಕೆಯಲ್ಲಿ MUDA ಮಾಜಿ ಆಯುಕ್ತ ಜಿ ಟಿ ದಿನೇಶ್ ಕುಮಾರ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಇಡಿ ತಿಳಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮಂಜೂರು ಮಾಡಿದ ಭೂಮಿಯಲ್ಲೂ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ.
ಸೆಪ್ಟೆಂಬರ್ 16 ರಂದು ಬೆಂಗಳೂರಿನಲ್ಲಿ ದಿನೇಶ್ ಕುಮಾರ್ ಅವರನ್ನು ಬಂಧಿಸಿರುವ ಇಡಿ, ಸೆಪ್ಟೆಂಬರ್ 26 ರವರೆಗೆ ತನ್ನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದೆ.
"ಈ ಪ್ರಕರಣದ ತನಿಖೆಯ ಸಮಯದಲ್ಲಿ ಸಂಗ್ರಹಿಸಲಾದ ಪುರಾವೆಗಳು ಮತ್ತು ದಾಖಲೆಗಳು ಜಿಟಿ ದಿನೇಶ್ ಕುಮಾರ್ ಅವರು ಆಯುಕ್ತರಾಗಿದ್ದಾಗ ಮೈಸೂರಿನ ಮುಡಾದಲ್ಲಿ ನಡೆಸಲಾದ ಸಮಗ್ರ ಅಕ್ರಮ ಹಣ ವರ್ಗಾವಣೆ ಯೋಜನೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿರುವುದನ್ನು ಸೂಚಿಸುತ್ತವೆ" ಎಂದು ಇಡಿ ಹೇಳಿಕೊಂಡಿದೆ.
ದೊಡ್ಡ ಪ್ರಮಾಣದ ಅಕ್ರಮಗಳ ವರದಿಗಳ ನಂತರ ರಾಜ್ಯ ಸರ್ಕಾರ, ಮುಡಾ ಕಾರ್ಯನಿರ್ವಹಣೆಯ ಬಗ್ಗೆ ಆಂತರಿಕ ತನಿಖೆ ನಡೆಸಿದ ನಂತರ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ದಿನೇಶ್ ಕುಮಾರ್ ಅವರನ್ನು ಅಮಾನತುಗೊಳಿಸಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಇಡಿ, ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿದೆ.
ಇದುವರೆಗೆ "ಅಕ್ರಮವಾಗಿ" ಹಂಚಿಕೆ ಮಾಡಲಾದ 252 ಮುಡಾ ಸೈಟ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ಹೇಳಿದೆ. ಇವುಗಳ ಮಾರುಕಟ್ಟೆ ಮೌಲ್ಯ ಸುಮಾರು 400 ಕೋಟಿ ರೂ. ಆಗಿದ್ದು, ಈ ಪ್ರಕರಣದಲ್ಲಿ ಪಾರ್ವತಿ ವಿರುದ್ಧದ ಇಡಿ ವಿಚಾರಣೆಯನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಜುಲೈನಲ್ಲಿ ಸುಪ್ರೀಂ ಕೋರ್ಟ್ ಸಹ ಎತ್ತಿಹಿಡಿದಿದೆ.