ಕಲಬುರಗಿ: ನಾಪತ್ತೆಯಾಗಿದ್ದ 20 ವರ್ಷದ ಯುವತಿ ಶುಕ್ರವಾರ ಸೇಡಂ ತಾಲ್ಲೂಕಿನ ಮಳಖೇಡ ಪ್ರದೇಶದ ಸಿಮೆಂಟ್ ಕಾರ್ಖಾನೆಯ ಆವರಣದಲ್ಲಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
20 ವರ್ಷದ ಕಾಲೇಜು ವಿದ್ಯಾರ್ಥಿನಿ ಭಾಗ್ಯಶ್ರೀ ಕಳೆದ ಸೆಪ್ಟೆಂಬರ್ 11 ರಂದು ನಾಪತ್ತೆಯಾಗಿದ್ದರು.
ಸಿಮೆಂಟ್ ಕಾರ್ಖಾನೆಯಲ್ಲಿ ಯೂನಿಯನ್ ನಾಯಕರಾಗಿರುವ ಆಕೆಯ ತಂದೆ ಸ್ಥಳೀಯ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು.
ಭಾಗ್ಯಶ್ರೀ ಕಾಣೆಯಾದ ದಿನದಂದು ಹತ್ತಿರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ವರದಿಯಾಗಿದೆ.
ತನಿಖೆಯ ಸಮಯದಲ್ಲಿ, ಸೆಪ್ಟೆಂಬರ್ 18 ರಂದು ಕಾರ್ಖಾನೆ ಆವರಣದಲ್ಲಿ ಪೊಲೀಸರು ಆಕೆಯ ಶವ ಪತ್ತೆ ಮಾಡಿದ್ದಾರೆ.
ಯುವತಿಯ ತಂದೆಯ ದೂರಿನ ಆಧಾರದ ಮೇಲೆ, ಅದೇ ಕಾರ್ಖಾನೆಯ ಗುತ್ತಿಗೆ ಉದ್ಯೋಗಿ ಶಂಕಿತ ಮಂಜುನಾಥ್ ಮತ್ತು ಅವರ ಕುಟುಂಬದ ಮೂವರು ಸದಸ್ಯರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಜುನಾಥ್ ತನ್ನ ಸಂಬಂಧಿಕರೊಂದಿಗೆ ಸೇರಿ, ಹಳೆ ದ್ವೇಷಕ್ಕೆ ಪ್ರತೀಕಾರವಾಗಿ ಭಾಗ್ಯಶ್ರೀಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ದೂರಿನ ಪ್ರಕಾರ, ಮಂಜುನಾಥ್ ಅವರ ಸೋದರಸಂಬಂಧಿ ಕಳೆದ ಆಗಸ್ಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಹೋದರನ ದುಡುಕಿನ ನಿರ್ಧಾರಕ್ಕೆ ಭಾಗ್ಯಶ್ರೀ ಅಪ್ಪ ಕಾರಣ ಎಂಬ ಆರೋಪ ಇದೆ ಮತ್ತು ಇದರ ಸೇಡಿಗಾಗಿ ಭಾಗ್ಯಶ್ರೀಯನ್ನು ಕೊಲೆ ಮಾಡಲಾಗಿದೆ ಎಂದು ಆಕೆಯ ತಂದೆ ಆರೋಪಿಸಿದ್ದಾರೆ.
ಮಂಜುನಾಥ್ ಅವರನ್ನು ಬಂಧಿಸಿದ ನಂತರವೇ ಇದು ಹೇಗೆ ಮತ್ತು ಏಕೆ ನಡೆಯಿತು ಎಂದು ನಮಗೆ ತಿಳಿಯುತ್ತದೆ. ಎಲ್ಲಾ ಆರೋಪಗಳ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ಅವರು ತಿಳಿಸಿದ್ದಾರೆ.
ಆರೋಪಿಯನ್ನು ಪತ್ತೆಹಚ್ಚಲು ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಮಂಜುನಾಥ್ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ.