ಬೆಂಗಳೂರು: ದಸರಾ ಹಬ್ಬದ ಸಮಯದಲ್ಲಿ ರಾಜ್ಯ ಸರ್ಕಾರದ ಅಧೀನದಲ್ಲಿರುವ ಕರ್ನಾಟಕ ಹಾಲು ಒಕ್ಕೂಟ(KMF) ನಂದಿನಿ ತುಪ್ಪ, ಬೆಣ್ಣೆ ಮತ್ತು ಲಸ್ಸಿ ಸೇರಿದಂತೆ ಹಲವು ಉತ್ಪನ್ನಗಳ ದರ ಇಳಿಕೆ ಮಾಡಿ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ.
ಸೆ,22ರಿಂದ ನೂತನ ದರ ಜಾರಿಗೆ ಬರಲಿದ್ದು, ಅಧಿಕೃತ ಆದೇಶ ಬಾಕಿಯಿದೆ. ಕೇಂದ್ರ ಸರ್ಕಾರದಿಂದ ಜಿಎಸ್‌ಟಿ ಇಳಿಕೆ ಬೆನ್ನಲ್ಲೇ ದರ ಇಳಿಕೆಗೆ ಸಜ್ಜಾಗಿರುವ ಕೆಎಂಎಫ್ ಈ ಬಗ್ಗೆ ನಿನ್ನೆ ಕೆಎಂಎಫ್ ಅಧಿಕಾರಿಗಳು ಸಭೆ ಮಾಡಿದ್ದಾರೆ.
ಸಭೆಯಲ್ಲಿ ಯಾವುದರ ದರ ಎಷ್ಟು ಇಳಿಕೆ ಎಂಬುವುದನ್ನು ನಿರ್ಧಾರ ಮಾಡಲಾಗಿದೆ. ತುಪ್ಪ, ಬೆಣ್ಣೆ, ಲಸ್ಸಿ ಸೇರಿ ಹಲವು ಉತ್ಪನ್ನಗಳ ದರ ಇಳಿಕೆ ಆಗಿದೆ.
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ ಶಿವಸ್ವಾಮಿ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ(The New Indian Express) ಪ್ರತಿನಿಧಿ ಜೊತೆಗೆ ಮಾತನಾಡಿ, ತುಪ್ಪ, ಚೀಸ್ ಮತ್ತು ಖಾರದ ಪುಡಿಗಳಂತಹ ವಸ್ತುಗಳ ಮೇಲಿನ ಶೇಕಡಾ 12 ಜಿಎಸ್‌ಟಿಯನ್ನು ಶೇಕಡಾ 5ಕ್ಕೆ ಇಳಿಸಲಾಗುವುದು. ಈ ಹಿಂದೆ ಶೇಕಡಾ 18 ಜಿಎಸ್‌ಟಿ ಹೊಂದಿದ್ದ ಐಸ್‌ಕ್ರೀಮ್‌ಗಳು, ಮಫಿನ್‌ಗಳು, ಕೇಕ್‌ಗಳು, ಕುಕೀಸ್ ಮತ್ತು ಚಾಕೊಲೇಟ್‌ಗಳು ಶೇ. 5ಕ್ಕೆ ಇಳಿಕೆಯಾಗುತ್ತದೆ.
ಹಾಲು ಮತ್ತು ಮೊಸರಿನ ದರಗಳಲ್ಲಿ ಯಾವುದೇ ಪರಿಷ್ಕರಣೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಹಾಲಿನ ಮೇಲೆ ಯಾವುದೇ ಜಿಎಸ್‌ಟಿ ವಿಧಿಸಲಾಗಿಲ್ಲವಾದರೂ, ಮೊಸರು 5% ಜಿಎಸ್‌ಟಿಯನ್ನು ಹೊಂದಿರುತ್ತದೆ. ಖರೀದಿ ಶುಲ್ಕಗಳು ಬದಲಾಗದೆ ಇರುವುದರಿಂದ ಇದು ರೈತರ ಮೇಲೆ ಪರಿಣಾಮ ಬೀರುವುದಿಲ್ಲ.
ಅತಿ ಹೆಚ್ಚಿನ ತಾಪಮಾನದ ಹಾಲಿನ (ಗುಡ್‌ಲೈಫ್‌ನಂತಹ ಪೌಚ್‌ಗಳಲ್ಲಿ ಪ್ಯಾಕ್ ಮಾಡಲಾದ) ದರವನ್ನು ಕಡಿಮೆ ಮಾಡಲಾಗಿದೆ. ಆದರೆ ನಂದಿನಿ ಇತ್ತೀಚೆಗೆ ಬಿಡುಗಡೆ ಮಾಡಿದ ಬೌನ್ಸ್ ಬ್ರಾಂಡ್‌ನಡಿಯಲ್ಲಿನ ಉತ್ಪನ್ನಗಳ ಬೆಲೆಗಳು ಜಿಎಸ್‌ಟಿಯನ್ನು ಶೇ.28 ರಿಂದ ಶೇ.40 ಕ್ಕೆ ಹೆಚ್ಚಿಸಿರುವುದರಿಂದ ದರ ಹೆಚ್ಚಾಗುತ್ತವೆ ಎಂದು ಕೆಎಂಎಫ್ ಅಧಿಕಾರಿಯೊಬ್ಬರು ವಿವರಿಸಿದರು.
ದರ ಪರಿಷ್ಕರಣೆಯ ಕುರಿತು ನಾವು ವಿವರವಾದ ಸಭೆ ನಡೆಸಿದ್ದೇವೆ. ಶೇ. 5 ಜಿಎಸ್‌ಟಿ ಹೊಂದಿರುವ ಮೊಸರಿಗೆ ಸಂಬಂಧಿಸಿದಂತೆ ಕೆಲವು ಗೊಂದಲಗಳಿದ್ದವು. ಮೊಸರಿನ ಬೆಲೆಯನ್ನು ಬದಲಾಯಿಸದಿರಲು ನಿರ್ಧರಿಸುವ ಮೊದಲು ಈ ವಿಷಯವನ್ನು ಕೇಂದ್ರ ಸಚಿವಾಲಯದೊಂದಿಗೆ ಚರ್ಚಿಸಲಾಗಿದೆ ಎಂದು ವಿವರಿಸಿದರು.
2017ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಲಾಗಿತ್ತು. 2022 ರಲ್ಲಿ ಜಿಎಸ್ಟಿಯನ್ನ ಶೇಕಡಾ 22ಕ್ಕೆ ಹೆಚ್ಚಿಸಲಾಗಿತ್ತು. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಹಾಲಿನ ಉತ್ಪನ್ನಗಳ ಮೇಲಿನ ಸರಕು ಸೇವಾ ತೆರಿಗೆಯನ್ನು ಶೇ.12ರಿಂದ 5ಕ್ಕೆ ಇಳಿಕೆ ಮಾಡಿದ್ದು, ಇದು ಸೆ. 22ರಿಂದ ಜಾರಿಗೆ ಬರಲಿದೆ.