ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಇಂದು ಬೆಳಗ್ಗೆ 10.10 ರಿಂದ 10.40 ರ ನಡುವಿನ ವೃಶ್ಚಿಕ ಲಗ್ನ ಮುಹೂರ್ತದಲ್ಲಿ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾಕ್ಕೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಬಾನು ಮುಷ್ತಾಕ್, ಮುಖ್ಯಮಂತ್ರಿ ಮತ್ತು ಇತರ ಗಣ್ಯರೊಂದಿಗೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಾಹಿತಿ ಬಾನು ಮುಷ್ತಾಕ್ ಅವರು ಹುಟ್ಟಿನಿಂದ ಮುಸಲ್ಮಾನರು, ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಅವರು ಮನುಷ್ಯರು, ಈ ದೇಶದ ಸಂವಿಧಾನ ಮೇಲೆ ನಂಬಿಕೆ ಇರುವವರು ಅವರ ದಸರಾ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸಲಿಲ್ಲ. ಅಂತಾರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿಯನ್ನು ನಮ್ಮ ಕನ್ನಡ ಸಾಹಿತ್ಯಕ್ಕೆ ತಂದುಕೊಟ್ಟಿದ್ದಾರೆ. ಅವರು ದಸರಾ ಉದ್ಘಾಟಿಸಿರುವುದು ಸೂಕ್ತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ಮೈಸೂರು ದಸರಾಕ್ಕೆ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಿದ ಬಳಿಕ ಮಾತನಾಡಿದ ಬಾನು ಮುಷ್ತಾಕ್, ಈ ಬಾರಿಯ ದಸರಾ ಉದ್ಘಾಟನೆಗೆ ನನಗೆ ಸರ್ಕಾರ ಆಹ್ವಾನ ನೀಡಿದಾಗ ಹಲವು ವಿರೋಧ, ವಿಘ್ನಗಳು ಎದುರಾದವು. ಆದರೆ ಅವೆಲ್ಲವನ್ನೂ ನಿವಾರಿಸಿ ಗಟ್ಟಿಯಾಗಿ ನಿಂತು ನನ್ನನ್ನು ಉದ್ಘಾಟನೆಗೆ ಆಹ್ವಾನಿಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಸರ್ಕಾರಕ್ಕೆ ಧನ್ಯವಾದ ತಿಳಿಸಿದರು. ಇನ್ನು ತಾಯಿ ಚಾಮುಂಡೇಶ್ವರಿ ಧೈರ್ಯ, ಶಕ್ತಿ, ರಕ್ಷಕತ್ವದ ಸಂಕೇತ, ಇಂದಿನ ಜಗತ್ತು ಯುದ್ಧದ ಜ್ವಾಲೆಯಲ್ಲಿ ಸುಡುತ್ತಿದೆ, ಹಗೆಗಳಿಂದ ಅಲ್ಲ ಪ್ರೀತಿಯಿಂದ ಜಗವನ್ನು ಗೆಲ್ಲೋಣ ಎಂದರು. ಮೈಸೂರಿನ ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಒಡೆಯರ್ ಅವರು, ರತ್ನ ಖಚಿತ ಸಿಂಹಾಸನವೇರಿ ಖಾಸಗಿ ದರ್ಬಾರ್ ನಡೆಸುವುದರೊಂದಿಗೆ ಸಾಂಪ್ರದಾಯಿಕವಾಗಿ ನವರಾತ್ರಿ ಚಾಲನೆ ನೀಡಿದರು.
ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹಲವು ಸಮುದಾಯಗಳ ವಿರೋಧ, ಅಸಮಾಧಾನ ಆಕ್ಷೇಪ ನಡುವೆಯೂ ಜಾತಿಗಣತಿ ಇಂದಿನಿಂದ ಪ್ರಾರಂಭವಾಗಿದೆ. ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ಜಾತಿಗಣತಿ ಆರಂಭವಾಗಿದೆ. ಹಲವೆಡೆ ಜಾತಿಗಣತಿ ಶುರುವಾದರೂ ಕೆಲ ತಾಂತ್ರಿಕ ದೋಷಗಳು ಎದುರಾಗಿವೆ. ಬಳ್ಳಾರಿಯಲ್ಲಿ ಆ್ಯಪ್ ಓಪನ್ ಮಾಡಿದರೆ ಎಎರ್ ತೋರಿಸುತ್ತಿದೆ. ಅದರಿಂದಾಗಿ ಶಿಕ್ಷಕರು ಪರದಾಡುವಂತಾಯಿತು. ಜಾತಿ ಗಣತಿ ಪ್ರಶ್ನಿಸಿ ಹೈಕೋರ್ಟ್ ಗೆ ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆಯನ್ನ ನಾಳೆ ಮಧ್ಯಾಹ್ನ 2:30 ಕ್ಕೆ ಮುಂದೂಡಲಾಗಿದೆ. ಕರ್ನಾಟಕದ ಜಾತಿ ಗಣತಿ ವಿರೋಧಿಸಿ ಹೈಕೋರ್ಟ್ಗೆ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಇಂದು ವಿಚಾರಣೆ ನಡೆಸಿದ ಕೋರ್ಟ್ ವಾದ ವಿವಾದ ಆಲಿಸಿತ್ತು. ಅಲ್ಲದೆ ವಿಚಾರಣೆ ವೇಳೆ ಪ್ರಸ್ತುತ ಜಾತಿಗಣತಿಯನ್ನು ಮುಂದೂಡಬಹುದಾ ಎಂದು ನ್ಯಾಯಮೂರ್ತಿಗಳು ಸರ್ಕಾರದ ಪರ ವಕೀಲರಿಗೆ ಪ್ರಶ್ನಿಸಿದ್ದರು. ಹೀಗಾಗಿ ನಾಳೆ ಹೈಕೋರ್ಟ್ ಮಹತ್ವದ ಆದೇಶ ಪ್ರಕಟಿಸುವ ಸಾಧ್ಯತೆಯಿದೆ.
ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಶೇ 12 ರಿಂದ ಶೇ 5ಕ್ಕೆ ಇಳಿಸಿರುವ ಪರಿಣಾಮ ಇಂದಿನಿಂದ ತುಪ್ಪ, ಬೆಣ್ಣೆ, ಪನೀರ್‌ನಂತಹ 'ನಂದಿನಿ' ಹಾಲಿನ ಉತ್ಪನ್ನಗಳ ದರ ಇಳಿಕೆಯಾಗಿದೆ. ಕೆಎಂಎಫ್ ಡೈರಿ ಉತ್ಪನ್ನಗಳ ಮೇಲಿನ ಪ್ರಸ್ತುತ ಜಿಎಸ್‌ಟಿ ಕಡಿತದಿಂದಾದ ಪರಿಷ್ಕೃತ ಬೆಲೆಗಳನ್ನು ಘೋಷಿಸಿದ್ದು ಸೆಪ್ಟೆಂಬರ್ 22ರಿಂದ ಪರಿಷ್ಕೃತ ದರ ಜಾರಿಗೆ ಬಂದಿದೆ. ಒಂದು ಲೀಟರ್ ತುಪ್ಪ 650 ರೂಪಾಯಿಯಿಂದ 610 ರೂಪಾಯಿಗೆ ಇಳಿಕೆ. 1 ಕೆಜಿ ಪನ್ನೀರ್ ಬೆಲೆ 425 ರೂಪಾಯಿಯಿಂದ 408 ರೂಪಾಯಿಗೆ ಇಳಿಕೆಯಾಗಿದೆ. 1 ಲೀಟರ್ ಗುಡ್‌ಲೈಫ್ ಹಾಲು 70ರಿಂದ 68 ರೂಪಾಯಿಗೆ ಇಳಿಕೆಯಾಗಿದೆ. ಅದೇ ರೀತಿ ಎಲ್ಲಾ ಉತ್ಪನ್ನಗಳ ಬೆಲೆಯೂ ಇಳಿಕೆಯಾಗಿದೆ.
ರಾಜ್ಯ ರಾಜಕೀಯದಲ್ಲಿ ಸುದ್ದಿಲ್ಲದೇ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನವೆಂಬರ್ ಗೆ ಎರಡುವರೆ ವರ್ಷ ಪೂರ್ಣಗೊಳಿಸುತ್ತದೆ. ಹೀಗಾಗಿ ನವೆಂಬರ್‌ನಲ್ಲಿ ಸಚಿವ ಸಂಪುಟ ಪುನಾರಚನೆಯಾಗುವ ಸಾಧ್ಯತೆ. ಇದಕ್ಕೆ ಪೂರಕವೆಂಬಂತೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು, ನವೆಂಬರ್ ತಿಂಗಳಲ್ಲಿ ಸಂಪುಟ ಪುನಾರಚನೆಯಾಗಲಿದೆ. ಈ ವೇಳೆ ಶೇ 50ರಷ್ಟು ಸಚಿವರು ಬದಲಾವಣೆಯಾಗುವ ಸಾಧ್ಯತೆ ಇದೆ ಎಂದರು. ಸಚಿವ ಸ್ಥಾನದಿಂದ ಹೊರ ಬಂದವರಿಗೆ ಪಕ್ಷ ಸಂಘಟನೆಯ ಕೆಲಸ ವಹಿಸಲಾಗುತ್ತದೆ. ಇನ್ನು ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡುವ ಸಾಧ್ಯತೆಗಳಿದ್ದು, ಎರಡು ದಶಕಗಳಿಂದ ಕಿತ್ತೂರು ಕರ್ನಾಟಕ ಭಾಗದಲ್ಲಿ ಅಲ್ಪಸಂಖ್ಯಾತ ರಿಗೆ ಸಚಿವ ಸ್ಥಾನ ನೀಡಿಲ್ಲ. ಈ ಬಾರಿ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ ಎಂದರು.