ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 5 ಪಾಲಿಕೆಗಳಾಗಿ ವಿಭಜನೆಯಗೊಂಡು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಆಗಿ ಪರಿವರ್ತನೆಗೊಂಡಿದ್ದು, ಇದರ ಬೆನ್ನಲ್ಲೇ ಬಿಬಿಎಂಪಿ ಕೈಗೆತ್ತಿಕೊಂಡಿದ್ದ ನಾಯಿಗಳಿಗೆ ಆಹಾರ ನೀಡುವ ಯೋಜನೆ ಕೂಡ ಸ್ಥಗಿತಗೊಂಡಂತಾಗಿದೆ.
ಬೀದಿ ನಾಯಿಗಳಿಗೆ ಪ್ರತಿ ದಿನ ಪೌಷ್ಟಿಕ ಆಹಾರ ನೀಡಲು ರೂ.2.88 ಕೋಟಿ ವೆಚ್ಚದ ಯೋಜನೆಯೊಂದನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರೂಪಿಸಿತ್ತು.
ನಾಯಿಗಳಿಗೆ ಆಹಾರ ನೀಡುವ ಕಡತವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರಿಗೆ ಸಲ್ಲಿಸಲಾಗಿದ್ದು, ಯೋಜನೆ ಬಗ್ಗೆ ಐದು ನಿಗಮಗಳು ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಕೋವಿಡ್-19 ಸಾಂಕ್ರಾಮಿಕ ರೋಗ ಸಮಯದಲ್ಲಿ ಬಿಬಿಎಂಪಿ ಬೀದಿ ನಾಯಿಗಳಿಗೆ ಆಹಾರವನ್ನು ನೀಡಲು ಪ್ರಾರಂಭಿಸಿತು. ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (AWBI) ಸೂಚಿಸಿದ 2023 ರ ಪ್ರಾಣಿ ಜನನ ನಿಯಂತ್ರಣ ನಿಯಮಗಳ ಪ್ರಕಾರ, ಶಾಸನಬದ್ಧ ಅವಶ್ಯಕತೆಯಂತೆ, ಬಿಬಿಎಂಪಿ ಜುಲೈನಲ್ಲಿ ಬೀದಿ ನಾಯಿಗಳಿಗೆ ಆಹಾರವನ್ನು ನೀಡಲು ಒಂದು ಯೋಜನೆಯನ್ನು ರೂಪಿಸಿತು.
ನಾಯಿಗಳ ಆಕ್ರಮಣಶೀಲತೆಯನ್ನು ಕಡಿಮೆ ಮಾಡುವುದು ಮತ್ತು ನಾಯಿ ಕಡಿತದ ಪ್ರಕರಣಗಳನ್ನು ಕಡಿಮೆ ಮಾಡುವುದು ಈ ಯೋಜನೆಯ ಹಿಂದಿನ ಉದ್ದೇಶವಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ನಮ್ಮ ಯೋಜನೆಯಲ್ಲಿ ನಗರದಲ್ಲಿ ಅಂದಾಜು 2.7 ಲಕ್ಷ ನಾಯಿಗಳಲ್ಲಿ 4,000 ನಾಯಿಗಳಿಗೆ 367 ಗ್ರಾಂನಷ್ಟು ಚಿಕನ್ ನೀಡುವ ನೀಡುವ ಗುರಿಯನ್ನು ಹೊಂದಲಾಗಿದೆ. ಈ ಆಹಾರ ನಾಯಿಗಳಿಗೆ 750 ಕ್ಯಾಲೋರಿಗಳನ್ನು ಒದಗಿಸುತ್ತದೆ. ಇದಕ್ಕಾಗಿ ಬಿಬಿಎಂಪಿ ನಾಯಿಗಳಿಗೆ ಆಹಾರ ನೀಡಲು ಸ್ಥಳಗಳನ್ನು ಗುರುತಿಸಲು ಮುಂದಾಗಿತ್ತು. ಅಲ್ಲದೆ, ಟೆಂಡರ್ ಕರೆಯಲೂ ಕೂಡ ಸಿದ್ಧತೆ ನಡೆಸಿತ್ತು. ಆದರೆ, ಬಿಬಿಎಂಪಿ ಯುಗ ಕೊನೆಗೊಂಡಿದ್ದು, 5 ಪಾಲಿಕೆಗಳಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ಪರಿರ್ತನೆಗೊಂಡಿದೆ. ಹೀಗಾಗಿ ಯೋಜನೆಯ ಕಡತವನ್ನು GBA ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರ ಅನುಮೋದನೆಗಾಗಿ ಕಳುಹಿಸಲಾಗಿದೆ. ಇದೀಗ ಐದು ಪಾಲಿಕೆಗಳ ಆಯುಕ್ತರು ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ಪಾಲಿಕೆ ಇದೀಗ ಮನೆ ಮನೆ ಕಸ ಸಂಗ್ರಹ ಮಾಡುತ್ತಿರುವುದರಿಂದ ಬೀದಿ ನಾಯಿಗಳಿಗೆ ಆಹಾರ ಸಿಗದಂತಾಗಿದೆ. ಆದ್ದರಿಂದ ಎಬಿಸಿ ನಿಯಮಗಳು 2023 ರ ನಿಯಮ 20(1) ರ ಅಡಿಯಲ್ಲಿ ಪ್ರಾಣಿಗಳಿಗೆ ಆಹಾರವನ್ನು ನೀಡುವುದು ಮುಖ್ಯವಾಗಿದೆ ನಿಯಮದ ಪ್ರಕಾರ, ಒಂದು ನಿರ್ದಿಷ್ಟ ಸಮುದಾಯಕ್ಕೆ ಯಾವುದೇ ಆಹಾರ ಪೂರೈಕೆದಾರರು ಇಲ್ಲದಿದ್ದರೆ, ಬೀದಿಯಲ್ಲಿರುವ ಪ್ರತೀ ಪ್ರಾಣಿಗೂ ಆಹಾರ ಮತ್ತು ನೀರು ಲಭ್ಯವಾಗುವಂತೆ ನೋಡಿಕೊಳ್ಳುವುದು ನಿವಾಸಿ ಕಲ್ಯಾಣ ಸಂಘದ ಜವಾಬ್ದಾರಿಯಾಗಿರುತ್ತದೆ ಎಂದು ಬೆಂಗಳೂರು ಪ್ರಾಣಿ ಹಕ್ಕುಗಳ ಕಾರ್ಯಕರ್ತ ಅರುಣ್ ಪ್ರಸಾದ್ ಅವರು ಹೇಳಿದ್ದಾರೆ.
ಬಿಬಿಎಂಪಿ ಅಸ್ತಿತ್ವದಲ್ಲಿದ್ದಿದ್ದರೆ ಪ್ರಾಣಿಗಳಿಗೆ ಆಹಾರ ನೀಡುವ ಯೋಜನೆ ಪ್ರಾರಂಭವಾಗುತ್ತಿತ್ತು. ಆದರೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಿಂದಾಗಿ ಯೋಜನೆ ಜಾರಿ ವಿಳಂಬವಾಗಿದೆ. ಹೀಗಾಗಿ ಐದು ಪಾಲಿಕೆಗಳು ಈ ನಿಟ್ಟಿನಲ್ಲಿ ಕೂಡಲೇ ನಿರ್ಧಾರ ಕೈಗೊಂಡು ಬೀದಿ ನಾಯಿಗಳಿಗೆ ಆಹಾರ ನೀಡಬೇಕೆಂದು ತಿಳಿಸಿದ್ದಾರೆ.