ಬೆಂಗಳೂರು: ಸರ್ಜಾಪುರದ ವಿಪ್ರೋ ಕ್ಯಾಂಪಸ್ ಮೂಲಕ ಸೀಮಿತ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕೆಂಬ ಸಿಎಂ ಸಿದ್ದರಾಮಯ್ಯ ಮನವಿಯನ್ನು ವಿಪ್ರೋ ಸಂಸ್ಥಾಪಕ ಮತ್ತು ಅಧ್ಯಕ್ಷ ಅಜೀಜ್ ಪ್ರೇಮ್‌ಜಿ ತಿರಸ್ಕರಿಸಿದ್ದಾರೆ. ಕ್ಯಾಂಪಸ್ ಕಂಪನಿಯ ಒಡೆತನದ ಖಾಸಗಿ ಆಸ್ತಿಯಾಗಿದ್ದು, ಸಾರ್ವಜನಿಕ ಸಾರಿಗೆಗೆ ಅಲ್ಲ ಎಂದು ಅಧ್ಯಕ್ಷ ಅಜೀಮ್ ಪ್ರೇಮ್‌ಜಿ ಹೇಳಿದ್ದಾರೆ. ಕ್ಯಾಂಪಸ್ ಮೂಲಕ ಸಾರ್ವಜನಿಕ ವಾಹನ ಸಂಚಾರಕ್ಕೆ ಅವಕಾಶ ನೀಡುವುದರಿಂದ ಗಮನಾರ್ಹ ಕಾನೂನು, ಆಡಳಿತಾತ್ಮಕ ಮತ್ತು ಶಾಸಕಾಂಗ ಸವಾಲುಗಳು ಎದುರಾಗುತ್ತವೆ ಎಂದರು.
ಸೆಪ್ಟೆಂಬರ್ 19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಜೀಜ್ ಪ್ರೇಮ್‌ಜಿ ಅವರಿಗೆ ಪತ್ರ ಬರೆದು, ಬೆಂಗಳೂರು ಹೊರ ವರ್ತುಲ ರಸ್ತೆಯಲ್ಲಿ ಹೆಚ್ಚುತ್ತಿರುವ ದಟ್ಟಣೆಯನ್ನು ಕಡಿಮೆ ಮಾಡುವ ಉಪಕ್ರಮದ ಭಾಗವಾಗಿ ಕಂಪನಿಯು ತನ್ನ ಕ್ಯಾಂಪಸ್ ಮೂಲಕ ಸೀಮಿತ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕೆಂದು ವಿನಂತಿಸಿದ್ದರು. ಈ ಕ್ರಮವು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಐಟಿ ಕಾರಿಡಾರ್‌ನಲ್ಲಿ ಪ್ರಯಾಣಿಸುವವರಿಗೆ ಗಮನಾರ್ಹ ಪರಿಹಾರವನ್ನು ನೀಡುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದರು.
ಸಿಎಂ ಸಿದ್ದರಾಮಯ್ಯ ಅವರ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಅಜೀಜ್ ಪ್ರೇಮ್‌ಜಿ ಅವರು, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯ ಗಂಭೀರ ಸಮಸ್ಯೆಯನ್ನು ಪರಿಹರಿಸಿದ್ದಕ್ಕಾಗಿ ನಾವು ಸಿಎಂ ಅವರನ್ನು ಶ್ಲಾಘಿಸುತ್ತೇವೆ ಎಂದು ಬರೆದಿದ್ದಾರೆ. ಆದಾಗ್ಯೂ, ನಮ್ಮ ಸರ್ಜಾಪುರ ಕ್ಯಾಂಪಸ್ ಮೂಲಕ ಸಾರ್ವಜನಿಕ ವಾಹನಗಳಿಗೆ ಅವಕಾಶ ನೀಡುವ ಸಲಹೆಯನ್ನು ನಾವು ಒಪ್ಪುವುದಿಲ್ಲ. ಇದು ಕಂಪನಿಗೆ ಗಂಭೀರ ಕಾನೂನು, ಆಡಳಿತಾತ್ಮಕ ಮತ್ತು ಶಾಸನಬದ್ಧ ಸವಾಲುಗಳನ್ನು ಒಡ್ಡುತ್ತದೆ. ಏಕೆಂದರೆ ಇದು ಕಂಪನಿಯ ಒಡೆತನದ ಖಾಸಗಿ ಆಸ್ತಿಯಾಗಿದ್ದು ಸಾರ್ವಜನಿಕ ಸಾರಿಗೆಗೆ ಉದ್ದೇಶಿಸಿಲ್ಲ ಎಂದು ಹೇಳಿದರು.