ಬೆಂಗಳೂರು: "ಜಾತಿ ಗಣತಿ" ಎಂದೇ ಜನಪ್ರಿಯವಾಗಿ ಕರೆಯಲ್ಪಡುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸದ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಗುರುವಾರ ಸಚಿವ ಸಂಪುಟ ನಿರ್ಧರಿಸಿದೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು, ಬೆಂಗಳೂರಿನಲ್ಲಿ ಸಮೀಕ್ಷೆಗೆ ಸಿಬ್ಬಂದಿ ಗೈರಾದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರವನ್ನು ಮುಖ್ಯ ಆಯುಕ್ತರಿಗೆ ನೀಡಲಾಗಿದೆ. ಇನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
"ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ನಿಯೋಜಿಸಲಾದ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಆದೇಶದ ಪ್ರಕಾರ ತಮ್ಮ ಕರ್ತವ್ಯವನ್ನು ನಿರ್ವಹಿಸದಿದ್ದರೆ ಅಥವಾ ಹಾಜರಾಗದಿದ್ದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪ್ರದೇಶದಲ್ಲಿ ಕ್ರಮ ಕೈಗೊಳ್ಳುವ ಅಧಿಕಾರವನ್ನು ಜಿಬಿಎ ಆಯುಕ್ತರಿಗೆ ನೀಡಲಾಗಿದೆ" ಎಂದು ಎಚ್ ಕೆ ಪಾಟೀಲ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಜಾತಿ ಗಣತಿ ವಿವಾದ ಆಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ಸಿಬ್ಬಂದಿ ಸಮೀಕ್ಷೆಗೆ ಮನೆ ಮನೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಬೇರೆ ಬೇರೆ ಕಾರಣಗಳನ್ನು ನೀಡಿ ಸಮೀಕ್ಷೆಗೆ ತೆರಳಲು ಮುಂದಾಗುತ್ತಿಲ್ಲ. ಹೀಗಾಗಿ ಈ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಸಿಎಂ ಸಿದ್ದರಾಮಯ್ಯ ಅವರು ಈ ನಿಟ್ಟಿನಲ್ಲಿ ಖಡಕ್ ಸೂಚನೆ ನೀಡಿದ್ದು, ಹಾಜರಾಗದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚನೆ ನೀಡಿದರು.
ಇತರ ಜಿಲ್ಲೆಗಳ ಬಗ್ಗೆ ಕೇಳಿದಾಗ, "ಈ ಆದೇಶ ಜಿಲ್ಲೆಗಳಿಗೂ ಅನ್ವಯವಾಗುತ್ತದೆ. ಮುಖ್ಯಮಂತ್ರಿಗಳು ನಾಳೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಎಲ್ಲಾ ಜಿಲ್ಲಾ ಪಂಚಾಯತ್‌ಗಳ ಸಿಇಒ ಜೊತೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ಅಗತ್ಯ ನಿರ್ದೇಶನಗಳನ್ನು ನೀಡಲಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಸೇವಾ ನಿಯಮಗಳಿಗೆ ಅನುಸಾರವಾಗಿರುತ್ತದೆ ಎಂದು ಸಚಿವರು ಹೇಳಿದರು.
ಸಮೀಕ್ಷೆಯ ಸಮಯದಲ್ಲಿ ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳ ಬಗ್ಗೆಯೂ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಮೊದಲ ಮತ್ತು ಎರಡನೇ ದಿನ ಸರ್ವರ್ ಸಮಸ್ಯೆಗಳಿದ್ದವು ಎಂಬುದು ನಿಜ. ಆದರೆ ಇಂದು ಪರಿಸ್ಥಿತಿ ಸುಧಾರಿಸಿದೆ ಎಂಬ ಮಾಹಿತಿ ಇದೆ" ಎಂದು ಅವರು ಹೇಳಿದರು.
ಸೆಪ್ಟೆಂಬರ್ 22 ರಂದು ಪ್ರಾರಂಭವಾದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಈ ಸಮೀಕ್ಷೆಯು ಅಕ್ಟೋಬರ್ 7 ರವರೆಗೆ ನಡೆಯಲಿದೆ.