ಮಂಗಳೂರು: ತೀವ್ರ ಕುತೂಹಲ ಮೂಡಿಸಿರುವ ಧರ್ಮಸ್ಥಳದ ಬಂಗ್ಲೆಗುಡ್ಡ ಕಾಡಿನಲ್ಲಿ ಪತ್ತೆಯಾದ ಅಸ್ಥಿಪಂಜರಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ಲಭ್ಯವಾಗಿದೆ.
ಅಸ್ಥಿಪಂಜರ ಶೋಧದ ವೇಳೆ ದೊರೆತ ಚಾಲನ ಪರವಾನಿಗೆ ಆಧಾರದ ಮೇಲೆ ಎಸ್‌ಐಟಿ ಅಧಿಕಾರಿಗಳು ತುಮಕೂರು ಜಿಲ್ಲೆಯ ಕುಟುಂಬವೊಂದಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದು, ಸೂಚನೆ ಬೆನ್ನಲ್ಲೇ ಕುಟುಂಬವು ಗುರುವಾರ ಎಸ್ಐಟಿ ಭೇಟಿ ಮಾಡಿದೆ ಎಂದು ತಿಳಿದುಬಂದಿದೆ.
ಗುರುತು ಪತ್ತೆಯಾದ ವ್ಯಕ್ತಿಯು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಆದಿಶೇಷ ನಾರಾಯಣ ಎಂದು ಮೂಲಗಳು ತಿಳಿಸಿವೆ.
ಇವರು 2013ರಿಂದ ನಾಪತ್ತೆಯಾಗಿದ್ದರು. ಆದರೆ ಈ ಬಗ್ಗೆ ಕುಟುಂಬಸ್ಥರು ದೂರು ನೀಡಿರಲಿಲ್ಲ. ಬಾರ್‌ನಲ್ಲಿ ಕ್ಯಾಶಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಇವರ ಅಸ್ಥಿ ಪಂಜರ ಇತ್ತೀಚೆಗೆ ಬಂಗ್ಲೆಗುಡ್ಡದಲ್ಲಿ ಲಭಿಸಿತ್ತು. ಇದೀಗ ಆದಿಶೇಷ ಅವರ ಕುಟುಂಬಸ್ಥರನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ವ್ಯಕ್ತಿ ಆಗಾಗ್ಗೆ ಯಾರೂ ತಿಳಿಸದೆ ಹೋಗುತ್ತಿದ್ದರು. ಹಲವು ದಿನಗಳ ಬಳಿಕ ವಾಪಸ್ಸಾಗುತ್ತಿದ್ದರು. ಹೀಗಾಗಿ ನಾವು ದೂರು ನೀಡಿರಲಿಲ್ಲ. ಪೊಲೀಸರು ಇದೀಗ ಮಾಹಿತಿ ನೀಡಿದ್ದು, ಡಿಎನ್ಎ ಪರೀಕ್ಷೆಗೊಳಗಾಗುವಂತೆ ತಿಳಿಸಿದ್ದಾರೆಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ಇದಕ್ಕೂ ಮುನ್ನು ಮತ್ತೊಂದು ಅಸ್ಥಿಪಂಜರದ ಗುರುತು ಪತ್ತೆಯಾಗಿದ್ದು, ಕೊಡಗಿನ ಯು.ಬಿ. ಅಯ್ಯಪ್ಪ ಎಂಬವರ ಅಸ್ಥಿಪಂಜರ ಇದಾಗಿತ್ತು. ಅಯ್ಯಪ್ಪ ಅವರ ಪುತ್ರ ಜೀವನ್ ಕೂಡ ನಿನ್ನೆ ಎಸ್‌ಐಟಿ ಕಚೇರಿಗೆ ಭೇಟಿ ನೀಡಿದ್ದರು.
ಏತನ್ಮಧ್ಯೆ, ಪ್ರಕರಣದ ದೂರುದಾರ ಹಾಗೂ ಸಾಕ್ಷಿದಾರಾಗಿರುವ ಚಿನ್ನಯ್ಯ ಎರಡನೇ ಬಾರಿಗೆ ಸೆಕ್ಷನ್ 183 ರ ಅಡಿಯಲ್ಲಿ ಹೇಳಿಕೆ ದಾಖಲಿಸಿದ್ದಾರೆ, ಗುರುವಾರ ಮಧ್ಯಾಹ್ನ 12 ಗಂಟೆಗೆ ನ್ಯಾಯಾಧೀಶರ ಮುಂದೆ ಚಿನ್ನಯ್ಯನನ್ನು ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಈತನ ಹೇಳಿಕೆ ದಾಖಲಿಸುವ ಕಾರ್ಯ ಆರಂಭಿಸಿದ್ದಾರೆ.
ಈ ನಡುವೆ ಬೆಳ್ತಂಗಡಿ ನಿವಾಸಿ ಶಶಿರಾಜ್ ಶೆಟ್ಟಿ ಅವರು ಎಸ್‌ಐಟಿಗೆ ದೂರು ಸಲ್ಲಿಸಿದ್ದು, ಸಾಕ್ಷಿಗಳೆಂದು ಹೇಳಿಕೊಂಡು ದೂರು ದಾಖಲಿಸಿರುವ ಜನರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸುಜಾತಾ ಭಟ್ ಆಧಾರರಹಿತ ಹೇಳಿಕೆಗಳನ್ನು ನೀಡಿದ್ದಾರೆ. ಇವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಖ್ಯಾತಿಗೆ ಕಳಂಕ ತರಲು ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ಮತ್ತು ಇತರರು ನಡೆಸಿರುವ ಪಿತೂರಿಯಂತೆಯೇ ಇವರೂ ಪಿತೂರಿ ನಡೆಸಿದ್ದಾರೆಂದು ಹೇಳಿದ್ದಾರೆ.