ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಜನರಿಗೆ ವಾಸ್ತವಾಂಶ ತಿಳಿಸುವುದಷ್ಟೇ ನಮ್ಮ ಸರ್ಕಾರದ ಉದ್ದೇಶ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.ಎಸ್ಐಟಿ ರಚನೆಯಿಂದ ನನ್ನ ಮೇಲಿದ್ದ ಕಳಂಕ ಕಳೆಯುತ್ತಿದೆ ಎಂಬ ವೀರೇಂದ್ರ ಹೆಗಡೆಯವರ ಹೇಳಿಕೆ ಬಗ್ಗೆ ಕೇಳಿದಾಗ, “ಈ ಪ್ರಕರಣದ ತನಿಖಾ ವರದಿ ಬರಲಿ. ಆನಂತರ ನಾನು ಮಾತನಾಡುತ್ತೇನೆ. ವೀರೇಂದ್ರ ಹೆಗಡೆ ಅವರ ಹೇಳಿಕೆಯನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ತನಿಖಾ ವರದಿ ಬರುವ ಮುನ್ನವೇ ಈ ಬಗ್ಗೆ ಪ್ರತಿಕ್ರಿಯಿಸುವುದರಲ್ಲಿ ಅರ್ಥವಿಲ್ಲ.
ರಾಜಕೀಯವಾಗಿ ಯಾರು ಏನು ಬೇಕಾದರೂ ಮಾತನಾಡಬಹುದು. ಆದರೆ ನಾನು ಸರ್ಕಾರದ ಪ್ರತಿನಿಧಿಯಾಗಿರುವುದರಿಂದ ಬೇರೆಯವರಂತೆ ಮಾತನಾಡಲು ಬರುವುದಿಲ್ಲ. ಈ ವಿಚಾರವಾಗಿ ವರದಿ ಬಂದ ನಂತರ ಮುಖ್ಯಮಂತ್ರಿಗಳು ಅಥವಾ ಗೃಹ ಸಚಿವರು ಅಧಿಕೃತ ಹೇಳಿಕೆ ನೀಡಬೇಕು. ಆನಂತರ ನಾನು ಮಾತನಾಡುತ್ತೇನೆ” ಎಂದು ತಿಳಿಸಿದರು. ಸುಪ್ರೀಂ ಕೋರ್ಟಿನಲ್ಲಿ ಪಿಐಎಲ್ ವಜಾ ಆಗಿದ್ದರೂ ಸರ್ಕಾರದ ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ ಎಂದು ಕೇಳಿದಾಗ, “ಈಗ ಆ ವಿಚಾರ ಚರ್ಚೆ ಬೇಡ. ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಹಾಕಿದ್ದು, ಅದು ವಜಾಗೊಂಡಿದೆ.
ಪಿಐಎಲ್ ಹಾಕಿದವರಿಗೆ ಸ್ಥಳೀಯವಾಗಿ ತನಿಖೆ ಮಾಡಲಿ ಎಂದು ಕೋರ್ಟ್ ಬೈದು ಕಳುಹಿಸಿದ್ದು ಎಲ್ಲವೂ ಗೊತ್ತಿದೆ. ಸುಪ್ರೀಂ ಕೋರ್ಟಿನ ನಿರ್ದೇಶನದ ಬಗ್ಗೆ ಯಾರು ಹೇಳುವುದಿಲ್ಲ. ದೆಹಲಿಗೆ ಬುರುಡೆ ತೆಗೆದುಕೊಂಡು ಹೋಗಿದ್ದರು. ಅದರ ಬಗ್ಗೆಯೂ ನಮಗೆ ಮಾಹಿತಿ ಇದೆ. ಆದರೆ ತನಿಖಾ ತಂಡದಿಂದ ಅಧಿಕೃತವಾಗಿ ನಮಗೆ ವರದಿ ಬರಲಿ” ಎಂದು ತಿಳಿಸಿದರು.