ರಾಮನಗರ: "ಭವಿಷ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಪಂಚ ಗ್ಯಾರಂಟಿ ಯೋಜನೆಗಳೆ ಕಾಪಾಡುತ್ತವೆ ಎನ್ನುವ ವಿಶ್ವಾಸ ನನಗಿದೆ. ಗ್ಯಾರಂಟಿ ಯೋಜನೆಗಳು ಸಮಾಜದಲ್ಲಿ ದೊಡ್ಡ ಸಾಮಾಜಿಕ ಬದಲಾವಣೆಯನ್ನು ಉಂಟು ಮಾಡಿವೆ. ಆರ್ಥಿಕವಾದ ಶಕ್ತಿ ನೀಡಿವೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಮನಗರದಲ್ಲಿ ಶನಿವಾರ ನಡೆದ ಬೆಂಗಳೂರು ದಕ್ಷಿಣ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಗಳ ಪದಾಧಿಕಾರಿಗಳ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾತನಾಡಿದರು.
"ಬಿಜೆಪಿ ಮತ್ತು ಜನತಾದಳದವರು ಮುಂದಿನ ದಿನಗಳಲ್ಲಿ ಹೇಗಾದರೂ ಮಾಡಿ ಈ ಗ್ಯಾರಂಟಿ ಯೋಜನೆಗಳನ್ನು ಯಾರಿಗೂ ಸಿಗದಂತೆ ಮಾಡಬೇಕೆನ್ನುವ ಷಡ್ಯಂತ್ರ ಮಾಡುತ್ತಿದ್ದಾರೆ. ಐದು ಗ್ಯಾರಂಟಿಗಳು ಉಳಿಯಬೇಕು ಎಂದರೆ ಕಾಂಗ್ರೆಸ್ ಸರ್ಕಾರ ಶಾಶ್ವತವಾಗಿ ಇರಬೇಕು. ಈ ನಿಟ್ಟಿನಲ್ಲಿ ನೀವುಗಳು ಕೆಲಸ ಮಾಡಬೇಕು" ಎಂದರು.
"ಚನ್ನಪಟ್ಟಣ ಉಪಚುನಾವಣೆಯಲ್ಲಿ ಯೋಗೇಶ್ವರ್ ಅವರು ಗೆಲ್ಲಲು ಗ್ಯಾರಂಟಿ ಯೋಜನೆಗಳ ಯಶಸ್ಸೇ ಕಾರಣ. ಮಹಿಳೆಯರು ಮಾಡಿದ ಉಪಕಾರವನ್ನು ಎಂದಿಗೂ ಮರೆಯುವುದಿಲ್ಲ ಉಪಕಾರ ಸ್ಮರಣೆಯನ್ನು ಅವರು ಹೊಂದಿರುತ್ತಾರೆ. ಯಾವುದೇ ರಾಜ್ಯಕ್ಕೆ ಹೋದರು, ಕರ್ನಾಟಕದ ಗ್ಯಾರಂಟಿ ಯೋಜನೆಗಳ ಬಗ್ಗೆ ಹೊಗಳುತ್ತಿದ್ದಾರೆ. ಜನರಿಗೆ ದೊಡ್ಡ ಉಪಕಾರ ಮಾಡಿದ್ದೀರಿ ಎಂದು ನನ್ನ ಬಳಿ ಹೇಳುತ್ತಿದ್ದಾರೆ" ಎಂದರು.
ಪಂಚಾಯ್ತಿ ಮಟ್ಟದಲ್ಲಿ ಫಲಾನುಭವಿಗಳ ಸಮಾವೇಶ ನಡೆಸಿ
"ಗ್ಯಾರಂಟಿ ಅನುಷ್ಠಾನ ಸಮಿತಿ ಗಳಿಂದ ಪ್ರತಿ ಪಂಚಾಯಿತಿ ಮಟ್ಟದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಬೇಕು. ಗ್ಯಾರಂಟಿ ಯೋಜನೆಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುತ್ತಿರುವ ಮೂರು ನಾಲ್ಕು ಜನರನ್ನು ಗುರುತಿಸಿ ಸನ್ಮಾನಿಸಬೇಕು. ಬೃಹತ್ ಸಮಾವೇಶ ನಡೆಸದೆ, ಚಿಕ್ಕದಾದ ಚೊಕ್ಕದಾದ ಸಮಾವೇಶ ನಡೆಸಬೇಕು" ಎಂದು ಸಲಹೆ ನೀಡಿದರು.
"ಯುವಕರ ಗುಂಪು ರಚಿಸಿ ಅವರಿಗೆ ಈ ಯೋಜನೆಗಳ ಬಗ್ಗೆ ಜ್ಞಾನ ಕೊಡಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಇದರ ಉಪಯೋಗವನ್ನು ಪ್ರಚಾರ ಮಾಡಬೇಕು. ಗೃಹಲಕ್ಷ್ಮೀ ಹಣದಿಂದ ಮಹಿಳೆಯರು ಗಂಡನಿಗೆ ಟ್ರ್ಯಾಕ್ಟರ್, ಬೈಕ್ ತೆಗೆದುಕೊಟ್ಟಿದ್ದಾರೆ. ಸ್ವಂತ ಉದ್ಯಮ ತೆರೆದು ಸ್ವಾವಲಂಬಿಯಾಗಿದ್ದಾರೆ. ಇದೆಲ್ಲವನ್ನು ಜನರಿಗೆ ಹೆಚ್ಚು, ಹೆಚ್ಚು ತಿಳಿಸಬೇಕು" ಎಂದರು.
"ಗ್ಯಾರಂಟಿ ಯೋಜನೆಗಳಿಂದ ಬದುಕು ಹೇಗೆ ಬದಲಾಯಿತು ಎಂದು ಫಲಾನುಭವಿಗಳಿಂದ ಅಭಿಪ್ರಾಯವನ್ನು ಹೇಳಿಸಬೇಕು. ಈ ಕಾರ್ಯಕ್ರಮವನ್ನು ಮಾದರಿಯಾಗುವಂತೆ ರೂಪಿಸಬೇಕು" ಎಂದು ತಿಳಿಸಿದರು.
"ಸಮಾಜದಿಂದ ಪಡೆದ ಹಣವನ್ನು ಸ್ವಾಹ ಮಾಡದೇ ಶಾಲೆ, ಆಸ್ಪತ್ರೆಗಳನ್ನು ನಿರ್ಮಾಣ ಮಾಡಿ ಎಂದು ಸಾಯಿಬಾಬಾ ಅವರು ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ದೇವೇಗೌಡರ ಸಮ್ಮುಖದಲ್ಲಿ ಹೇಳಿದ್ದರು. ಅದಕ್ಕೆ ನಾವು ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಒಂದು ಲಕ್ಷ ಕೋಟಿಗೂ ಹೆಚ್ಚು ಹಣ ಹಂಚಿದ್ದೇವೆ" ಎಂದರು.