ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಚುರುಕಾಗಿದ್ದು, ರಾಜ್ಯದಾದ್ಯಂತ ಭಾರಿ ಮಳೆಯಾಗುತ್ತಿದೆ. ರಾಜ್ಯದ ಬರೊಬ್ಬರಿ 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಈ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ರಾಜ್ಯಾದ್ಯಂತ ಮುಂದಿನ 5 ದಿನಗಳ ವರೆಗೆ ಅಂದರೆ ಅಕ್ಟೋಬರ್ 2ರವರೆಗೂ ಮಳೆ ಮುಂದುವರೆಯಲಿದೆ. ಪ್ರಮುಖವಾಗಿ ಇಂದಿನಿಂದ ಎರಡು ದಿನಗಳ ಕಾಲ ಉತ್ತರ ಕರ್ನಾಟಕದಾದ್ಯಂತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಜಿಲ್ಲೆಗಳಲ್ಲೂ ಅಕ್ಟೋಬರ್ 1ರಿಂದ ಮಳೆ ಚುರುಕಾಗಲಿದ್ದು, ದಕ್ಷಿಣ ಒಳನಾಡಿನ ಸಾಕಷ್ಟು ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಅಂತೆಯೇ ಬಳ್ಳಾರಿ, ಚಿಕ್ಕಮಗಳೂರು, ಶಿವಮೊಗ್ಗ, ವಿಜಯನಗರ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಧಾರವಾಡ, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ತುಮಕೂರಿನಲ್ಲೂ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಕರ್ನಾಟಕ ತತ್ತರ
ಇನ್ನು ಭಾರಿ ಮಳೆಯಿಂದಾಗಿ ಉತ್ತರ ಕರ್ನಾಟಕ ತತ್ತರಿಸಿ ಹೋಗಿದ್ದು, ಸಿಂದಗಿ, ಹುಣಸಗಿ, ಕಕ್ಕೇರಿ, ಕೆಂಭಾವಿ, ಚಿಂಚೋಳಿ, ಔರಾದ್, ಭಾಲ್ಕಿ, ದೇವರಹಿಪ್ಪರಗಿ, ಹುಮ್ನಾಬಾದ್, ಇಂಡಿ, ನೆಲೋಗಿ, ಸೈದಾಪುರ, ಸೇಡಂ, ಅಫ್ಝಲ್ಪುರದಲ್ಲಿ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಉಕ್ಕಿ ಹರಿದ ಭೀಮಾನದಿ
ಇತ್ತ ವಿಜಯಪುರದಲ್ಲಿ ಭಾರಿ ಮಳೆಯಿಂದಾಗಿ ಭೀಮಾನದಿ ಉಕ್ಕಿ ಹರಿಯುತ್ತಿದ್ದು, ಇಂಡಿಯ ಆಲಮೇಲ ತಾಲೂಕಿನಲ್ಲಿ ಪ್ರವಾಹ (Flood) ಉಂಟಾಗಿದೆ. ಕುಮಸಗಿ ಗ್ರಾಮದ 30ಕ್ಕೂ ಅಧಿಕ ಮನೆಗಳು ಸಂಪೂರ್ಣ ಜಲಾವೃತವಾಗಿದೆ. ಭೀಮಾ ತಟದ ನೂರಾರು ಎಕರೆ ಪ್ರದೇಶದ ಬೆಳೆ ಪ್ರವಾಹಕ್ಕೆ ಆಹುತಿಯಾಗಿದೆ. ಪ್ರತಿ ಎಕರೆಗೆ 25,000 ರೂಪಾಯಿ ಪರಿಹಾರ ಶೀಘ್ರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಟ್ಟಿಸಂಗಾವಿ ಸೇತುವೆ ಮುಳುಗಡೆ
ಕಲಬುರಗಿ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ನಿರಂತರವಾಗಿ ಮಳೆ (Rain) ಹಿನ್ನಲೆ ಭೀಮಾ ನದಿ ಹರಿವಿನ ಪ್ರಮಾಣದಲ್ಲಿ ಭಾರಿ ಹೆಚ್ಚಳವಾಗಿದೆ. ಇದರ ಜೊತೆಗೆ ಮಹಾರಾಷ್ಟ್ರದಿಂದ ನದಿಗೆ 3.40 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವ ಪರಿಣಾಮ ಜೇವರ್ಗಿ ಪಟ್ಟಣದ ಸಮೀಪದ ಕಟ್ಟಿಸಂಗಾವಿ ಸೇತುವೆ ಮುಳುಗಡೆಯಾಗಿದೆ.
ಪರಿಣಾಮ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯ ಸಂಚಾರ ಸಂಪೂರ್ಣ ಬಂದ್ ಆಗಿದೆ. ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ನಡು ರಸ್ತೆಯ ಮೇಲೆಯೇ ವಾಹನಗಳು ಕಿಲೋಮೀಟರ್ಗಟ್ಟಲೆ ಕ್ಯೂ ನಿಂತಿವೆ.
ಅಪಾರ ಪ್ರಮಾಣದ ನೀರು ಬಿಟ್ಟ ಮಹಾರಾಷ್ಟ್ರ
ಒಂದೆಡೆ ಮಳೆಯಿಂದಾಗಿ ಜನ ತತ್ತರಿಸುತ್ತಿದ್ದರೆ ಅತ್ತ ಮಹಾರಾಷ್ಟ್ರದಲ್ಲೂ ಭಾರಿ ಮಳೆಯಿಂದಾಗಿ ಅಲ್ಲಿನ ಅಣೆಕಟ್ಟುಗಳಿಗೆ ಭಾರಿ ನೀರು ಹರಿಯುತ್ತಿದೆ. ಪರಿಣಾಮ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಪರಿಣಾಮ ಕಲಬುರಗಿಯ ಸನ್ನತಿ ಬ್ಯಾರೇಜ್ ನಿಂದ ಯಾದಗಿರಿ ಕಡೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.
ಭೀಮಾ ನದಿ ಪ್ರವಾಹಕ್ಕೆ ರೈತರ ಬದುಕು ಅಕ್ಷರಶಃ ಬರ್ಬಾದ್ ಆಗಿದ್ದು, ನಾಯ್ಕಲ್ ಗ್ರಾಮದಲ್ಲಿ ನೂರಾರು ಎಕರೆ ಬೆಳೆ ಪ್ರವಾಹದ ನೀರಲ್ಲಿ ಮುಳುಗಿದೆ. ನದಿ ಪ್ರದೇಶದ ಸುತ್ತ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯವರೆಗೂ ಪ್ರವಾಹದ ನೀರು ನುಗ್ಗಿದ್ದು, ಭತ್ತ ಹಾಗೂ ಹತ್ತಿ ಬೆಳೆದಿದ್ದ ಜಮೀನು ಸಮುದ್ರದ ರೀತಿ ಕಾಣತೊಡಗಿದೆ.