ಬೆಂಗಳೂರು: ಪ್ರಾರಂಭ ಪ್ರಮಾಣಪತ್ರ(ಸಿಸಿ) ಮತ್ತು ಆಕ್ಯುಪೆನ್ಸಿ ಪ್ರಮಾಣಪತ್ರ(ಒಸಿ) ಇಲ್ಲದೆ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡಗಳಿಗೆ ಒಂದು ಬಾರಿ ವಿನಾಯಿತಿ ನೀಡುವ ಬಗ್ಗೆ ಪರಿಶೀಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ರಾಜ್ಯದಲ್ಲಿ ವಿದ್ಯುತ್, ನೀರು ಮತ್ತು ನೈರ್ಮಲ್ಯ ಸಂಪರ್ಕದಂತಹ ಅಗತ್ಯ ಸೇವೆಗಳನ್ನು ಪಡೆಯಲು ಸಿಸಿ ಮತ್ತು ಒಸಿ ಕಡ್ಡಾಯಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ಈ ಬಗ್ಗೆ ಇಂದು ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸುಪ್ರೀಂ ಕೋರ್ಟ್ ಆದೇಶ ಪಾಲಿಸುವ ಜತೆಗೆ ಕಾನೂನು ಚೌಕಟ್ಟಿನಲ್ಲಿ ಬಡವರಿಗೆ ವಿನಾಯಿತಿ ನೀಡುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸುತ್ತಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹಾಗೂ ರಾಜ್ಯದ ಇತರೆ ಕಡೆಗಳಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಲ್ಪಿಸುವಲ್ಲಿ ಇರುವ ತೊಡಕುಗಳನ್ನು ಪರಿಹರಿಸುವಂತೆ ಸಿಎಂ ಸೂಚಿಸಿದ್ದಾರೆ.
ವಿದ್ಯುತ್ ಮತ್ತು ನೀರಿನ ಸಂಪರ್ಕಗಳನ್ನು ಒದಗಿಸಲು ಕಾನೂನು ಸಾಧ್ಯತೆಗಳನ್ನು ವಿವರವಾಗಿ ಚರ್ಚಿಸಲು ಅಕ್ಟೋಬರ್ 8 ರಂದು ಮತ್ತೆ ಸಭೆ ಕರೆಯಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ನಿಯಮ ಉಲ್ಲಂಘಿಸಿ ನಿರ್ಮಾಣಗೊಂಡಿರುವ ಕಟ್ಟಡಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಅನುಮತಿ ನೀಡುವ ಸಾಧ್ಯತೆ ಬಗ್ಗೆ ಚರ್ಚೆ ನಡೆಸಲಾಗಿ, ನಿರ್ಮಾಣಗೊಂಡಿರುವ ಕಟ್ಟಡಗಳನ್ನು ನೆಲಸಮಗೊಳಿಸಲು ಸಾಧ್ಯವಿಲ್ಲ. ಸರ್ಕಾರದ ನಿರ್ಧಾರದಿಂದ ಜನರಿಗೆ ಅನುಕೂಲವಾಗಬೇಕು ಎಂದರು.
ಮಾರ್ಚ್ 2025 ರವರೆಗೆ ಸಲ್ಲಿಸಲಾದ ಅರ್ಜಿಗಳನ್ನು (ಸುಪ್ರೀಂ ಕೋರ್ಟ್ ಆದೇಶದ ಅನುಷ್ಠಾನದ ಮೊದಲು) ಒಸಿ ಮತ್ತು ಸಿಸಿಯಿಂದ ವಿನಾಯಿತಿ ನೀಡುವತ್ತ ಗಮನ ಹರಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶವು ಭಾರತದ ಎಲ್ಲಾ ರಾಜ್ಯಗಳಿಗೆ ಅನ್ವಯಿಸುತ್ತದೆಯಾದರೂ, ಎಲ್ಲಾ ರಾಜ್ಯಗಳು ಈ ಆದೇಶವನ್ನು ಜಾರಿಗೊಳಿಸುತ್ತಿವೆಯೇ ಎಂದು ಪರಿಶೀಲಿಸುವಂತೆ ಸಿಎಂ ಸಿದ್ದರಾಮಯ್ಯ ಅವರು, ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಬಿಡುಗಡೆ ಮಾಡಿದ ಪ್ರಕಟಣೆ ತಿಳಿಸಿದೆ.