ಬೆಂಗಳೂರು: ಕಾಂಗ್ರೆಸ್ ಆಡಳಿತದಲ್ಲಿ ಕಮಿಷನ್ ದರ ದುಪ್ಪಟ್ಟು ಆಗಿದ್ದು, ಬಾಕಿಬಿಲ್ ಪಾವತಿಯಾಗಿಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘ ಆರೋಪಿಸಿದೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ರಾಜ್ಯಾದ್ಯಂತ ಗುತ್ತಿಗೆದಾರರ ಮೇಲೆ ಪರಿಣಾಮ ಬೀರುವ ಪಾವತಿಯಾಗದ ಬಾಕಿ ಬಿಲ್ ಹಾಗೂ ಬಗೆಹರಿಯದ ಸಮಸ್ಯೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.
ಸರ್ಕಾರ ರೂ. 33,000 ಕೋಟಿ ಬಾಕಿ ಉಳಿಸಿಕೊಂಡಿದೆ ಎಂದು ಸಂಘ ಹೇಳಿದೆ. ನಿಮ್ಮ ಸರ್ಕಾರದಿಂದ ನಮಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಬಾಕಿ ಪಾವತಿ ಮತ್ತಿತರ ಸಮಸ್ಯೆ ಬಗೆಹರಿಸಲು ಕಳೆದ ಎರಡು ವರ್ಷಗಳಿಂದ ಅನೇಕ ಬಾರಿ ಸಭೆ ನಡೆಸಲಾಗಿದೆ. ಪ್ರತಿ ಬಾರಿಯೂ ನಮ್ಮನ್ನು ಸಮಾಧಾನಪಡಿಸಲಾಗುತ್ತದೆ. ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ನಿಮ್ಮ ಮೇಲಿನ ಗೌರವದಿಂದ ಮತ್ತು ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂಬ ನಂಬಿಕೆಯಿಂದ, ನಮ್ಮ ಗುತ್ತಿಗೆದಾರರು ತಾಳ್ಮೆಯಿಂದ ಇದ್ದರು. ಆದರೆ ಇದುವರೆಗೆ, ನಿಮ್ಮ ಸರ್ಕಾರದಿಂದ ನಮಗೆ ಯಾವುದೇ ಪ್ರಯೋಜನಗಳು ಆಗಿಲ್ಲ. ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ಕೆಲವು ಇಲಾಖೆಗಳಲ್ಲಿ ಕಮಿಷನ್ ದರ ದ್ವಿಗುಣಗೊಂಡಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಗುತ್ತಿಗೆದಾರರ ಮೂಲಕ ಕಾಮಗಾರಿ ನಿರ್ವಹಿಸುವ ಎಂಟು ಸರ್ಕಾರಿ ಇಲಾಖೆಗಳು ಬಾಕಿ ಇರುವ ಬಿಲ್‌ಗಳನ್ನು ಬಿಡುಗಡೆ ಮಾಡದಿರುವುದು ಸೇರಿದಂತೆ ಹಲವು ಆರೋಪಗಳನ್ನು ಸಂಘ ಮಾಡಿದೆ. ಸಂಬಂಧಪಟ್ಟ ಸಚಿವರು ಹಾಗೂ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದರೂ ಯಾವುದೇ ಉಪಯೋಗ ಆಗಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇಲಾಖೆಗಳು ಹಿರಿತನ ಮತ್ತು ಪಾರದರ್ಶಕತೆಯ ಕಾನೂನುಗಳನ್ನು ನಿರ್ಲಕ್ಷಿಸಿ, ತಮ್ಮದೇ ಆದ ಸೂತ್ರವನ್ನು ರೂಪಿಸುತ್ತಿವೆ. ವಿಶೇಷ ಗುತ್ತಿಗೆಗಳ (ಎಒಸಿ) ಅಡಿಯಲ್ಲಿ ಮೂರು ತಿಂಗಳಿಗೊಮ್ಮೆ ಬಾಕಿ ಉಳಿದಿರುವ ಬಾಕಿ ಬಿಲ್ ಗಳಲ್ಲಿ ಕೇವಲ ಶೇ. 15 ರಿಂದ 20 ರಷ್ಟನ್ನು ಮಾತ್ರ ಬಿಡುಗಡೆ ಮಾಡಲಾಗುತ್ತಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.