ಬೆಂಗಳೂರು: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸರ್ಕಾರ 3,000 ಕೋಟಿ ರೂ. ಪರಿಹಾರ ನೀಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರ್ಕಾರ ಬದುಕಿಲ್ಲ. ಬದುಕಿದ್ದರೇ ಪ್ರವಾಹಕ್ಕೂ ಮುನ್ನ ತಯಾರಿ ಮಾಡಿಕೊಳ್ಳುತ್ತಿತ್ತು, ಸಿಎಂ ಸೆ.30 ರಂದು ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ಕೊಡುತ್ತಿದ್ದಾರೆ. ಪ್ರವಾಹ ಪೀಡಿತ ಜಿಲ್ಲೆಗಳಿಗೆ ಹೋಗುವ ಮುನ್ನ ಸಂತ್ರಸ್ತರಿಗೆ ಪರಿಹಾರ ಘೋಷಿಸಿ ಹೋಗಲಿ.
ಉತ್ತರ ಕರ್ನಾಟಕ ಪ್ರವಾಹ ಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ತುರ್ತಾಗಿ 3 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು. ಪ್ರತಿಯೊಂದಕ್ಕೂ ಕೇಂದ್ರಕ್ಕೆ ಕಾಯಬೇಡಿ, ನೀವೇನು ಕೊಡ್ತೀರಿ ಅದನ್ನು ಘೋಷಿಸಲಿ ಎಂದರು.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಹ ಬಂದು ಸಾವು ನೋವು ಉಂಟಾಗಿದೆ. ಕಲಬುರಗಿ ಹಾಗೂ ಬೀದರ್‌ನಲ್ಲಿ ಹೆಚ್ಚು ಹಾನಿ ಉಂಟಾಗಿದೆ. ಈವರೆಗೆ ಯಾವುದೇ ಸಚಿವರು ಕ್ರಮ ವಹಿಸಿಲ್ಲ. ಬಿಜೆಪಿ ಅವಧಿಯಲ್ಲಿ ಡಬಲ್ ಪರಿಹಾರ ನೀಡಲಾಗಿತ್ತು.
ಸರ್ಕಾರದ ಬಳಿ ಹಣವಿದ್ದರೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದರು. ಹಣವಿಲ್ಲದೆ ಸಚಿವರು ಹಾಗೂ ಸಿಎಂ ಮುಖ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಸರ್ಕಾರದ ಸಂಪೂರ್ಣ ಗಮನ ಜಾತಿ ಸಮೀಕ್ಷೆಯ ಕಡೆಗಿದೆ. ಮನೆ ಹಾನಿಗೆ ಹಾಗೂ ಬೆಳೆ ಹಾನಿಗೆ ಎಷ್ಟು ಪರಿಹಾರ ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಬೇಕು ಎಂದರು.
ಕೇಂದ್ರ ಸರ್ಕಾರ ತನ್ನ ಪಾಲಿನ ಪರಿಹಾರದ ಹಣವನ್ನು ನೀಡುತ್ತದೆ. ರಾಜ್ಯ ಸರ್ಕಾರದಿಂದ ತಕ್ಷಣ 3,000 ಕೋಟಿ ರೂ. ಪರಿಹಾರ ಘೋಷಿಸಿ ವಿತರಣೆ ಮಾಡಬೇಕು. ಬಿಜೆಪಿ ಅವಧಿಯಲ್ಲಿ 30 ದಿನಕ್ಕಾಗುವಷ್ಟು ದಿನಸಿ ನೀಡಲಾಗಿತ್ತು.
ಈ ಸರ್ಕಾರ ಅರ್ಧ ಕೆ.ಜಿ ಅಕ್ಕಿಯೂ ಕೊಟ್ಟಿಲ್ಲ. ಬಿಜೆಪಿ ವತಿಯಿಂದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗುತ್ತಿದೆ. ನಾನು ಕೂಡ ಪ್ರವಾಸ ಮಾಡಿ, ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.