ಬೆಂಗಳೂರು: ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕಲ್ಯಾಣ ಕರ್ನಾಟಕ ಪ್ರದೇಶದ ಪ್ರವಾಹ ಪರಿಸ್ಥಿತಿಯನ್ನು "ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ" ಎಂದು ಪ್ರತಿಪಕ್ಷ ಬಿಜೆಪಿ ಮಂಗಳವಾರ ಆರೋಪಿಸಿದೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡುವ ಬದಲು ವೈಮಾನಿಕ ಸಮೀಕ್ಷೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ಮಹಾರಾಷ್ಟ್ರದ ಉಜನಿ ಮತ್ತು ನೀರಾ ಜಲಾಶಯಗಳಿಂದ ಹೆಚ್ಚುವರಿ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಭೀಮಾ ನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹ ಉಂಟಾಗಿ ಹಾನಿಗೀಡಾಗಿರುವ ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಮಂಗಳವಾರ ವೈಮಾನಿಕ ಸಮೀಕ್ಷೆ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ಇದು ಯಾವ ರೀತಿಯ ಸರ್ಕಾರ ಎಂದು ಜನರು ಕೇಳುತ್ತಿದ್ದಾರೆ. ಈ ಸರ್ಕಾರ ಸತ್ತಿದೆ. ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
'ಹೆಲಿಕಾಪ್ಟರ್ ಸಿದ್ದರಾಮಯ್ಯ' ಎಂದು ತರಾಟೆಗೆ ತೆಗೆದುಕೊಂಡ ಆರ್. ಅಶೋಕ್, ವೈಮಾನಿಕ ಸಮೀಕ್ಷೆ ನಡೆಸಲು ದೆಹಲಿ ಅಥವಾ ಮುಂಬೈನಿಂದ ಬರುತ್ತಿದ್ದೀರಾ? ನಿಮ್ಮ ಸ್ವಂತ ರಾಜ್ಯದ ವೈಮಾನಿಕ ಸಮೀಕ್ಷೆಯನ್ನು ಮಾಡುತ್ತಿದ್ದೀರಾ? ಇದು ಜಾಗತಿಕ ಸುದ್ದಿಯಾಗಿರುವ ಹದಗೆಟ್ಟ ಮತ್ತು ಗುಂಡಿಬಿದ್ದ ರಸ್ತೆಗಳಿಂದ ತಪ್ಪಿಸಿಕೊಳ್ಳುವ ಉಪಾಯವೇ? ಅಥವಾ ರಸ್ತೆಯಲ್ಲಿ ಪ್ರಯಾಣಿಸಿದರೆ ಜನ ನಿಮಗೆ ಘೇರಾವ್ ಹಾಕುತ್ತಾರೆ ಎಂಬ ಭಯದಿಂದ ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದೀರಾ? ಎಂದು ಟೀಕಾ ಪ್ರಹಾರ ನಡೆಸಿದರು.
ಪ್ರವಾಹ ಪೀಡಿತ ಜಿಲ್ಲೆಗಳಿಗೆ ಹೋಗಿ ಅಲ್ಲಿನ ಅಧಿಕಾರಿಗಳು ಮತ್ತು ರೈತರೊಂದಿಗೆ ಕುಳಿತು ಬೆಳೆಗಳಿಗೆ ಪರಿಹಾರ ಘೋಷಿಸಬೇಕಾಗಿತ್ತು ಮತ್ತು ಹಾಳಾದ ರಸ್ತೆಗಳು, ಶಾಲೆಗಳು ಮತ್ತು ಅಂಗನವಾಡಿಗಳ ಪುನಶ್ಚೇತನಕ್ಕೆ ಹಣ ಬಿಡುಗಡೆ ಮಾಡಬೇಕಾಗಿತ್ತು ಎಂದು ಹೇಳಿದರು.
ಪರಿಹಾರ ನೀಡಲು ವಿಳಂಬ ಮಾಡುತ್ತಿರುವುದನ್ನು ಪ್ರಶ್ನಿಸಿದ ಅಶೋಕ, ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆಯೇ? ಈ ವಿಳಂಬಕ್ಕೂ ಕೇಂದ್ರವನ್ನು ದೂಷಿಸಲು ನೀವು ಯೋಜಿಸುತ್ತಿದ್ದೀರಾ? ಸಭೆ ನಡೆಸುವ ಮೂಲಕ ಯುದ್ದೋಪಾದಿಯಲ್ಲಿ ಪರಿಹಾರ ಕಾರ್ಯವನ್ನು ಕೈಗೊಳ್ಳಬೇಕು. ಹಿರಿಯ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ, ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಲು ಸಚಿವರ ತಂಡವನ್ನು ರಚಿಸಬೇಕು ಎಂದು ಅವರು ಒತ್ತಾಯಿಸಿದರು.