ಬೆಂಗಳೂರು: ಮನೆಗೆಲಸದ ಮಧ್ಯವಯಸ್ಕ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ದುಷ್ಕೃತ್ಯದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ಜೀವಾವಧಿ ಕಠಿಣ ಜೈಲು ಶಿಕ್ಷೆ ರದ್ದುಗೊಳಿಸುವಂತೆ ಕೋರಿ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದಾರೆ.
ನನ್ನ ವಿರುದ್ಧ, ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ನೀಡಿರುವ ತೀರ್ಪು ಮಿಥ್ಯಾದೇಶ, ಕಾನೂನುಬಾಹಿರ, ಪ್ರಕರಣದ ದಾಖಲೆಗಳಲ್ಲಿರುವ ವಾಸ್ತವಾಂಶಗಳಿಗೆ ವಿರುದ್ಧವಾದ ನಿಲುವುಗಳಿಂದ ಕೂಡಿದೆ ಎಂದು ಪ್ರಜ್ವಲ್ ಮೇಲ್ಮನವಿಯಲ್ಲಿ ಆರೋಪಿಸಿದ್ದಾರೆ.
ಹೊಳೆನರಸೀಪುರದ ಗನ್ನಿಗಢ ಮತ್ತು ಬೆಂಗಳೂರಿನ ಬನಶಂಕರಿ ಮನೆಯಲ್ಲಿ ಮನೆಗೆಲಸದಾಕೆ ಮೇಲೆ ಪದೇ ಪದೆ ಅತ್ಯಾಚಾರ ಎಸಗಿದ ಅಪರಾಧದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ದೋಷಿಯೆಂದು ವಿಶೇಷ ನ್ಯಾಯಾಲಯ ತೀರ್ಮಾನಿಸಿ ಆ.2ರಂದು ಜೀವನ ಪರ್ಯಂತ ಶಿಕ್ಷೆ ವಿಧಿಸಿತ್ತು. ಈ ತೀರ್ಪು ರದ್ದು ಕೋರಿ ಇದೀಗ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿರುವ ಪ್ರಜ್ವಲ್, ಸಿಐಡಿಯ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರತಿವಾದಿ ಮಾಡಿದ್ದಾರೆ. ಮೇಲ್ಮನವಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ರಾಜಕೀಯ ದುರುದ್ದೇಶದಿಂದ ಮಹಿಳೆಯನ್ನು ಅಸ್ತ್ರವನ್ನಾಗಿಸಿ ನನ್ನ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಸಂತ್ರಸ್ತೆ 2023ರಲ್ಲಿ ಫಾರ್ಮ್ ಹೌಸ್‌ನಲ್ಲಿನ ನಮ್ಮ ಗೃಹಪ್ರವೇಶದಲ್ಲಿ ಪಾಲ್ಗೊಂಡಿದ್ದಾರೆ. ನಾನು ಅತ್ಯಾಚಾರ ಎಸಗಿದ್ದೇನೆ ಎನ್ನುವುದಾದರೆ ಆಕೆ ನಮ್ಮ ಗೃಹಪ್ರವೇಶಕ್ಕೆ ಹೇಗೆ ತಾನೇ ಬರುತ್ತಿದ್ದರು ಎಂದು ಪ್ರಜ್ವಲ್ ಮೇಲ್ಮನವಿಯಲ್ಲಿ ಪ್ರಶ್ನಿಸಿದ್ದಾರೆ.
ಪೊಲೀಸರು ಮಹಿಳೆಯಿಂದ 3 ವರ್ಷಗಳ ಬಳಿಕ ದೂರು ಪಡೆದಿದ್ದಾರೆ. ಸಕಾರಣಗಳಿಲ್ಲದ ಸಾಕ್ಷ್ಯಗಳನ್ನು ಪರಿಗಣಿಸಲಾಗಿದೆ. ಸ್ಟೋರ್ ರೂಮಿನಲ್ಲಿನ ಬಟ್ಟೆ, ಕೂದಲಿದ್ದ ಬ್ಯಾಗ್ ಅನ್ನು ಮಹಿಳೆ ಗುರುತಿಸಿಲ್ಲ. ಬ್ಯಾಟರಿ, ಪೇಂಟ್ ಇದ್ದ ರೂಮಿನಲ್ಲಿ ಮಹಿಳೆಯ ಉಡುಪು ಸಿಕ್ಕಿತೆಂದು ಹೇಳಲಾಗಿದೆ. ಲಾಕ್ ಆಗಿದ್ದ ರೂಮಿನಲ್ಲಿ ವೀರ್ಯಾಣು ಸಿಂಚನಗೊಂಡ ಬಟ್ಟೆ ಸಿಗಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಅಪರಾಧ ದಂಡ ಪ್ರಕ್ರಿಯಾ ಸಂಹಿತೆ–1973ರ (ಸಿಆರ್‌ಪಿಸಿ) ಕಲಂ 164ರ ಅನ್ವಯ ಸಂತ್ರಸ್ತೆಯ ಹೇಳಿಕೆಯನ್ನು ಕೋರ್ಟ್‌ಗೆ ಹಾಜರುಪಡಿಸಿಲ್ಲ. ಇದು ಅಪರಾಧಿಕ ನ್ಯಾಯಶಾಸ್ತ್ರದ ಮೂಲ ತತ್ವಗಳಿಗೆ ಅಪಚಾರ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಫೋಟೊಗಳು ಮತ್ತು ವಿಡಿಯೋದಿಂದ ಪ್ರಭಾವಿತರಾಗಿ ನನ್ನ ವಿರುದ್ಧ ತೀರ್ಪು ಬರೆಯಲಾಗಿದೆ. ಅತ್ಯಾಚಾರದ ವಿಡಿಯೊ ಇತ್ತೆಂದು ಆರೋಪಿಸಲಾದ ಮೊಬೈಲ್ ಅನ್ನೇ ವಶಕ್ಕೆ ಪಡೆದಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿಯಲ್ಲೂ ವಿರೋಧಾಭಾಸಗಳಿವೆ. ಹೀಗಾಗಿ, ನನಗೆ ವಿಧಿಸಲಾಗಿರುವ ಶಿಕ್ಷೆ ರದ್ದುಪಡಿಸಬೇಕು ಎಂದು ಪ್ರಜ್ವಲ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.