ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಸತಿ ಯೋಜನೆ ಅಡಿಯಲ್ಲಿ ನಿರ್ಮಿಸಲಾದ 1,026 1 ಬಿಹೆಚ್'ಕೆ ಫ್ಲ್ಯಾಟ್‌ಗಳು ಇನ್ನೂ ಮಾರಾಟವಾಗದೇ ಉಳಿದಿದ್ದು, ಇದರ ಪರಿಣಾಮ ಸರ್ಕಾರಕ್ಕೆ ಆರ್ಥಿಕ ಹೊರೆಯುಂಟಾಗುತ್ತಿದೆ ಎಂದು ತಿಳಿದುಬಂದಿದೆ.
ಈ ಖಾಲಿ ಫ್ಲ್ಯಾಟ್‌ಗಳ ನಿರ್ವಹಣೆಗೆ ತಿಂಗಳಿಗೆ ಸುಮಾರು ರೂ22 ರಿಂದ ರೂ.25 ಲಕ್ಷ ವೆಚ್ಚವಾಗುತ್ತಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ಆರ್ಥಿಕವಾಗಿ ದುರ್ಬಲ ವರ್ಗ (EWS)ಗಾಗಿ ನಿರ್ಮಿಸಲಾದ ಒಟ್ಟು 1,026 ಫ್ಲ್ಯಾಟ್‌ಗಳು ಇನ್ನೂ ಮಾರಾಟವಾಗಿಲ್ಲ ಎಂದು ತಿಳಿಸಿದ್ದಾರೆ. ಇದರಲ್ಲಿ ಸುಮಾರು 470 ಯುನಿಟ್‌ಗಳು ಆಲೂರು ಹೌಸಿಂಗ್ ಯೋಜನೆಯಲ್ಲಿ ಇರುವುದಾಗಿ ವಿವರಿಸಿದ್ದಾರೆ.
ಸರ್ಕಾರದ ಅಂಕಿ ಅಂಶಗಳ ಪ್ರಕಾರ, ಈ ಮಾರಾಟವಾಗದ ಫ್ಲ್ಯಾಟ್‌ಗಳಿಂದ ಸುಮಾರು ರೂ. 65 ಕೋಟಿ ರೂಪಾಯಿ ಆದಾಯ ನಷ್ಟವಾಗಿದೆ ಎಂದು ತಿಳಿದುಬಂದಿದೆ. ಜೊತೆಗೆ ಶೇ.7.5 ಬಡ್ಡಿ ದರದ ಆಧಾರದ ಮೇಲೆ ಸುಮಾರು ರೂ.50 ಲಕ್ಷದಷ್ಟು ಹೆಚ್ಚುವರಿ ಬಡ್ಡಿ ನಷ್ಟವೂ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಈ ಎಲ್ಲ ಅಪಾರ್ಟ್‌ಮೆಂಟ್‌ಗಳ ನಿರ್ವಹಣೆಗಾಗಿ ಪ್ರತೀ ತಿಂಗಳು ಸುಮಾರು ರೂ.25 ಲಕ್ಷ ವೆಚ್ಚವಾಗುತ್ತಿದೆ. ಇದರಲ್ಲಿ ವಿದ್ಯುತ್ ಬಿಲ್, ಲಿಫ್ಟ್ ನಿರ್ವಹಣೆ, ಕಸ ವಿಲೇವಾರಿ ಹಾಗೂ ಇತರೆ ಮೂಲಸೌಕರ್ಯ ವೆಚ್ಚಗಳು ಸೇರಿವೆ. ಫ್ಲ್ಯಾಟ್‌ಗಳು ಸಂಬಂಧಿತ ನಿವಾಸಿ ಕಲ್ಯಾಣ ಸಂಘಗಳಿಗೆ (RWA) ಹಸ್ತಾಂತರವಾಗುವವರೆಗೆ, ಅವುಗಳ ಸಂಪೂರ್ಣ ಜವಾಬ್ದಾರಿ ಬಿಬಿಎಂಪಿಯ ಮೇಲೆಯೇ ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರ ನಡುವೆಯೂ ಸರ್ಕಾರ ಮತ್ತು ಜಿಬಿಎ ವಸತಿ ಯೋಜನೆಗಳಿಗೆ ಇನ್ನೂ ಬೇಡಿಕೆ ಇದೆ ಎಂದು ಸರ್ಕಾರ ಹೇಳುತ್ತಿದ್ದು, ಅಗ್ಗದ ದರದಲ್ಲಿ ಫ್ಲ್ಯಾಟ್‌ಗಳನ್ನು ನೀಡಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿದೆ. ಮಾರಾಟ ಹೆಚ್ಚಿಸಲು ಪ್ರಚಾರ ಕಾರ್ಯಗಳನ್ನೂ ಕೈಗೊಳ್ಳಲಾಗಿದೆ ಎಂದು ತಿಳಿಸಿವೆ.
ನಿರ್ಮಾಣ ಗುಣಮಟ್ಟದ ಬಗ್ಗೆ ಬಂದಿರುವ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸರ್ಕಾರ, ಬಿಬಿಎಂಪಿ ಇಂಜಿನಿಯರ್‌ಗಳು ನಿವಾಸಿಗಳ ಸಂಘಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ದೂರುಗಳನ್ನು ತಕ್ಷಣ ಪರಿಹರಿಸಲಾಗುತ್ತಿದೆ ಎಂದು ಹೇಳಿದೆ. ಜೊತೆಗೆ, ವಸತಿ ಯೋಜನೆಗಳ ಗುಣಮಟ್ಟ ಉತ್ತಮವಾಗಿದೆ ಎಂಬುದನ್ನೂ ಸರ್ಕಾರ ಪುನರುಚ್ಚರಿಸಿದೆ.
ಮಾರಾಟವಾಗದ ಫ್ಲ್ಯಾಟ್‌ಗಳನ್ನು ವಿಲೇವಾರಿ ಮಾಡಲು ಬಿಬಿಎಂಪಿ ಈಗಾಗಲೇ ಕ್ರಮಗಳನ್ನು ಆರಂಭಿಸಿದ್ದು, 2026 ಡಿಸೆಂಬರ್ ಒಳಗೆ ಈ ಸಮಸ್ಯೆ ಪರಿಹರಿಸುವ ಗುರಿ ಹೊಂದಿದೆ. ಜನರಲ್ಲಿ ಅರಿವು ಮೂಡಿಸಲು ಪ್ರಚಾರ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಫೆಬ್ರವರಿ ತಿಂಗಳಲ್ಲಿ ಫ್ಲ್ಯಾಟ್ ಮಾರಾಟದಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದ್ದು, ಜನವರಿಯಲ್ಲಿ 34 ಫ್ಲ್ಯಾಟ್‌ಗಳು ಮಾರಾಟವಾಗಿದ್ದರೆ, ಫೆಬ್ರವರಿಯಲ್ಲಿ 198 ಫ್ಲ್ಯಾಟ್‌ಗಳು ಬುಕ್ ಆಗಿವೆ ಎಂದು ಮಾಹಿತಿ ನೀಡಿದ್ದಾರೆ.