ಬೆಂಗಳೂರು: ಬೆಂಗಳೂರಿನ ಹೆಸರಘಟ್ಟದ ಮತ್ಕೂರು ಗ್ರಾಮದಲ್ಲಿ H5N1 ಹಕ್ಕಿಜ್ವರ ದೃಢಪಟ್ಟಿದ್ದು, ಅಧಿಕಾರಿಗಳು ಪ್ರೋಟೋಕಾಲ್ ಪ್ರಕಾರ ಎಲ್ಲಾ ನಿಯಂತ್ರಣ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಏಪ್ರಿಲ್ 14 ರಂದು ರಾಷ್ಟ್ರೀಯ ಹೈ ಸೆಕ್ಯುರಿಟಿ ಪ್ರಾಣಿ ರೋಗಗಳ ಸಂಸ್ಥೆ, ಭೋಪಾಲ್‌ನ NIHSAD ಪ್ರಯೋಗಾಲಯದ ವರದಿಯ ಪ್ರಕಾರ, ಹೆಸರಘಟ್ಟದ ಮತ್ಕೂರು ಗ್ರಾಮದಲ್ಲಿ ಈ ಸೋಂಕು ವರದಿಯಾಗಿದೆ ಎಂದು ಅವರು ಹೇಳಿದ್ದಾರೆ.
ಆರೋಗ್ಯ ಇಲಾಖೆಯ ಪ್ರಕಾರ, ರಾಜ್ಯ ಕ್ಷಿಪ್ರ ಪ್ರತಿಕ್ರಿಯೆ ತಂಡ(RRT), ಜಿಲ್ಲಾ RRT ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ (PHC)ದ ತಂಡಗಳು ಏಪ್ರಿಲ್ 16 ರಂದು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.
ಮತ್ಕೂರು ಗ್ರಾಮವನ್ನು "ಸೋಂಕಿತ ವಲಯ" (0-3 ಕಿಮೀ) ಎಂದು ಘೋಷಿಸಲಾಗಿದೆ, ಆದರೆ ಹೆಸರಘಟ್ಟ ಮತ್ತು ಸೊನ್ನೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಸುತ್ತಮುತ್ತಲಿನ 3-10 ಕಿಮೀ ಪ್ರದೇಶವನ್ನು ಕಣ್ಗಾವಲು ವಲಯವೆಂದು ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 15 ರಂದು ಪಶುವೈದ್ಯಕೀಯ ಇಲಾಖೆಯು ಒಟ್ಟು 7,444 ಕೋಳಿಗಳು, 14,788 ಮೊಟ್ಟೆಗಳು ಮತ್ತು 2,250 ಕೆಜಿ ಕೋಳಿ ಆಹಾರವನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿದೆ. . ಈ ಕಾರ್ಯಾಚರಣೆಯಲ್ಲಿ ಭಾಗಿಯಾದ 10 ಸಿಬ್ಬಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಅವರಿಗೆ ‘ಒಸೆಲ್ಟಾಮಿವಿರ್’ ಔಷಧ ನೀಡಿ ವೈದ್ಯಕೀಯ ನಿಗಾ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಂಕಿತ ವಲಯದ ವ್ಯಾಪ್ತಿಯಲ್ಲಿ ಬರುವ 2 ಗ್ರಾಮಗಳ 3,422 ಜನಸಂಖ್ಯೆ ಹಾಗೂ ಕಣ್ಗಾವಲು ವಲಯದ 17 ಗ್ರಾಮಗಳ 22,395 ಜನರ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾ ಇರಿಸಿದೆ. ಆಶಾ ಕಾರ್ಯಕರ್ತೆಯರು ಮುಂದಿನ 10 ದಿನಗಳ ಕಾಲ ಮನೆ ಮನೆಗೆ ಭೇಟಿ ನೀಡಿ ಜ್ವರದ ತಪಾಸಣೆ ನಡೆಸಲಿದ್ದಾರೆ. ಹೆಸರಘಟ್ಟ ಮತ್ತು ಸೊನ್ನೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯವಿರುವ ಪಿಪಿಇ ಕಿಟ್, ಮಾಸ್ಕ್ ಮತ್ತು ಔಷಧಗಳನ್ನು ದಾಸ್ತಾನು ಇರಿಸಲು ಸೂಚಿಸಲಾಗಿದೆ.