ಬೆಂಗಳೂರಿನಲ್ಲಿ ಎಂ ಜಿ ರಸ್ತೆ ಬಳಿಯಿರುವ One8 Commune ರೆಸ್ಟೊರೆಂಟ್ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಸಹ-ಸ್ವಾಮ್ಯದಲ್ಲಿದ್ದ ಸಂಸ್ಥೆ ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಮುಚ್ಚಲ್ಪಟ್ಟಿದೆ.
ವರದಿಗಳ ಪ್ರಕಾರ, ಬಾಕಿ ಮೊತ್ತವು 2 ಕೋಟಿ ರೂಪಾಯಿಗೂ ಅಧಿಕವಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂ ಸಮೀಪದಲ್ಲಿರುವ ಈ ರೆಸ್ಟೊರೆಂಟ್ ವ್ಯವಹಾರದಿಂದ ವಿರಾಟ್ ಕೊಹ್ಲಿ ಈಗಾಗಲೇ ದೂರವಾಗಿದ್ದು, ತನ್ನ ಬ್ರ್ಯಾಂಡ್ ಹೆಸರನ್ನೂ ಹಿಂಪಡೆದಿದ್ದರು.
ಮೂಲಗಳ ಪ್ರಕಾರ, ಅಗ್ನಿ ಸುರಕ್ಷತಾ ನಿಯಮ ಉಲ್ಲಂಘನೆ ಸೇರಿದಂತೆ ಹಲವು ನಿಯಮ ಅನುಸರಣೆ ಸಮಸ್ಯೆಗಳು ಮತ್ತು ನೊಟೀಸ್ ಗಳ ಹಿನ್ನೆಲೆಗಳಲ್ಲಿ ವಿರಾಟ್ ಕೊಹ್ಲಿ ಈ ರೆಸ್ಟೊರೆಂಟ್ ವ್ಯವಹಾರದಿಂದ ದೂರ ಉಳಿದರು. Trio Hills Hospitality ನಡೆಸುತ್ತಿದ್ದ ಈ ರೆಸ್ಟೊರೆಂಟ್ ಸುಮಾರು ಆರು ತಿಂಗಳ ಬಾಡಿಗೆಯನ್ನು ಪಾವತಿಸದೆ ಉಳಿದಿದ್ದು, ನಿರ್ವಹಣಾ ಶುಲ್ಕ ಮತ್ತು ಆದಾಯ ಹಂಚಿಕೆಯ ಹಣವೂ ಬಾಕಿಯಾಗಿದೆ.
ಇದರಿಂದ ಕಟ್ಟಡದ ಮಾಲೀಕರು ನಗರ ಸಿವಿಲ್ ನ್ಯಾಯಾಲಯವನ್ನು ಸಂಪರ್ಕಿಸಿ, ಎಲ್ಲಾ ಬಾಕಿಗಳನ್ನು ಪಾವತಿಸುವವರೆಗೆ ಆಸ್ತಿಯನ್ನು ಮುಚ್ಚುವಂತೆ ನ್ಯಾಯಾಲಯ ಆದೇಶಿಸಿದೆ. ಈ ರೆಸ್ಟೊರೆಂಟ್‌ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಯಿಂದ ನಿಯಮ ಉಲ್ಲಂಘನೆಗಳ ಹಿನ್ನೆಲೆಯಲ್ಲಿ ಹಲವು ನೋಟಿಸ್‌ಗಳು ಕೂಡ ಬಂದಿದ್ದವು. ಕೊಹ್ಲಿ ಬ್ರ್ಯಾಂಡ್ ಹೊರನಡೆದ ನಂತರ ಗ್ರಾಹಕರ ಸಂಖ್ಯೆ ಕಡಿಮೆಯಾಗುವುದರಿಂದ ವ್ಯವಹಾರಕ್ಕೆ ದೊಡ್ಡ ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ. ನ್ಯಾಯಾಲಯದ ನಿರ್ದೇಶನದಂತೆ ಬಾಕಿ ಹಣ ಪಾವತಿಸುವವರೆಗೆ ರೆಸ್ಟೊರೆಂಟ್ ಮುಚ್ಚಿರಲಿದೆ.
ಕಳೆದ ವರ್ಷದ ಜೂನ್‌ನಲ್ಲಿ, ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ (COTPA) ಅಡಿಯಲ್ಲಿ ಈ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆವರಣದಲ್ಲಿ ಧೂಮಪಾನಕ್ಕಾಗಿ ಪ್ರತ್ಯೇಕ ಪ್ರದೇಶವನ್ನು ಒದಗಿಸದ ಕಾರಣದಿಂದ COTPA ಕಾಯ್ದೆಯ ಸೆಕ್ಷನ್ 4 ಮತ್ತು 21 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸೆಕ್ಷನ್‌ಗಳ ಪ್ರಕಾರ, ಹೊಟೇಲ್, ರೆಸ್ಟೊರೆಂಟ್‌ಗಳು ಮತ್ತು ವಿಮಾನ ನಿಲ್ದಾಣಗಳಂತಹ ಸ್ಥಳಗಳಲ್ಲಿ ನಿರ್ದಿಷ್ಟ ಧೂಮಪಾನ ವಲಯವನ್ನು ಒದಗಿಸಲು ಅವಕಾಶವಿದೆ. ಇದಲ್ಲದೆ, ಅಗ್ನಿಶಾಮಕ ದಳದಿಂದ ಅಗತ್ಯವಾದ ನಿರಪೇಕ್ಷ ಪ್ರಮಾಣಪತ್ರ (NOC) ಸೇರಿದಂತೆ ಕಡ್ಡಾಯ ಅನುಮತಿಗಳಿಲ್ಲದೆ ಕಾರ್ಯನಿರ್ವಹಿಸುತ್ತಿದ್ದುದಾಗಿ ಮಹಾನಗರ ಪಾಲಿಕೆ ನೋಟಿಸ್ ನೀಡಿತ್ತು.
ಇನ್ನೊಂದು ಪ್ರಕರಣದಲ್ಲಿ, ಎಂಜಿ ರಸ್ತೆಯ ಇತರ ಸಂಸ್ಥೆಗಳ ಜೊತೆಗೆ One8 Commune ವಿರುದ್ಧ ಅನುಮತಿಸಿದ ಸಮಯಕ್ಕಿಂತ ಹೆಚ್ಚು ಹೊತ್ತು ಕಾರ್ಯನಿರ್ವಹಿಸಿದ್ದಕ್ಕಾಗಿ ಪ್ರಕರಣ ದಾಖಲಾಗಿತ್ತು. ಬೆಂಗಳೂರು ಶಾಖೆಯನ್ನು ಡಿಸೆಂಬರ್ 2023ರಲ್ಲಿ ಉದ್ಘಾಟಿಸಲಾಗಿತ್ತು.
One8 Commune ವಿರಾಟ್ ಕೊಹ್ಲಿ ಸ್ಥಾಪಿಸಿದ ಪ್ರೀಮಿಯಂ ರೆಸ್ಟೊರೆಂಟ್ ಮತ್ತು ಬಾರ್ ಸರಣಿಯಾಗಿದ್ದು, ದೆಹಲಿ (ಏರೋಸಿಟಿ), ಗುರುಗ್ರಾಮ್, ಪುಣೆ, ಕೊಲ್ಕತ್ತಾ, ನೋಯ್ಡಾ, ಬೆಂಗಳೂರು ಮತ್ತು ಹೈದರಾಬಾದ್ ನಗರಗಳಲ್ಲಿ ಶಾಖೆಗಳನ್ನು ಹೊಂದಿದೆ.