ಮುಖ್ಯಮಂತ್ರಿ ಸಿದ್ದರಾಮಯ್ಯ 
ರಾಜ್ಯ

2 ವರ್ಷಗಳಿಂದ ರಾಜ್ಯಕ್ಕೆ ಹಣ ಬಿಡುಗಡೆ ಮಾಡಿಲ್ಲ, ನಿರ್ಲಕ್ಷ್ಯ ನಡುವೆಯೂ ಅಭಿವೃದ್ಧಿ ಮುಂದುವರೆಸಿದ್ದೇವೆ: ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಕಿಡಿ

ಕೇಂದ್ರ ಸರ್ಕಾರ ಆಯವ್ಯಯದಲ್ಲಿ ಅನುದಾನ ಹಂಚಿಕೆ ಮಾಡಿದ್ದರೂ, ಕಳೆದ ಎರಡು ವರ್ಷಗಳಿಂದ ಕರ್ನಾಟಕಕ್ಕೆ ಹಣ ಬಿಡುಗಡೆಯಾಗಿಲ್ಲ. ಆದರೂ ರಾಜ್ಯ ಸರ್ಕಾರವೇ ಕೇಂದ್ರದ ಪಾಲಿನ ಹಣವನ್ನು ಭರಿಸಿ, ಯೋಜನೆ ಅನುಷ್ಠಾನ ಮುಂದುವರೆಯುವಂತೆ ನೋಡಿಕೊಂಡಿದೆ.

ಬೆಂಗಳೂರು: ಕೇಂದ್ರ ಸರ್ಕಾರ ಆಯವ್ಯಯದಲ್ಲಿ ಅನುದಾನ ಹಂಚಿಕೆ ಮಾಡಿದ್ದರೂ, ಕಳೆದ ಎರಡು ವರ್ಷಗಳಿಂದ ಕರ್ನಾಟಕಕ್ಕೆ ಹಣ ಬಿಡುಗಡೆಯಾಗಿಲ್ಲ. ಆದರೂ ರಾಜ್ಯ ಸರ್ಕಾರವೇ ಕೇಂದ್ರದ ಪಾಲಿನ ಹಣವನ್ನು ಭರಿಸಿ, ಅಭಿವೃದ್ಧಿ ಯೋಜನೆಗಳನ್ನು ಮುಂದುವರೆಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ.

ಜಲ ಜೀವನ ಮಿಷನ್‌ 2.0 ಕುರಿತಂತೆ ಕೇಂದ್ರ ಜಲ ಶಕ್ತಿ ಸಚಿವರಾದ ಸಿ.ಆರ್‌.ಪಾಟೀಲ್‌ ಅವರೊಂದಿಗಿನ ವಿಡಿಯೋ ಸಂವಾದದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯಕ್ಕೆ ಕಳೆದ ಎರಡು ವರ್ಷಗಳಿಂದ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಆದರೂ ಜಲ ಜೀವನ್ ಮಿಷನ್ ಯೋಜನೆಯಲ್ಲಿ ಕರ್ನಾಟಕ ಮಹತ್ವದ ಪ್ರಗತಿ ಸಾಧಿಸಿದೆ ಎಂದು ಹೇಳಿದರು.

ದೇಶದಲ್ಲಿಯೇ ಎರಡನೇ ಅತ್ಯಂತ ಹೆಚ್ಚಿನ ಒಣಭೂಮಿ ಹೊಂದಿರುವ ರಾಜ್ಯವಾದ ಕರ್ನಾಟಕದಲ್ಲಿ ನೀರಿನ ಸಮಸ್ಯೆ ಇರುವುದಲ್ಲದೇ, ರಾಜ್ಯದ ಹಲವು ಭಾಗಗಳಲ್ಲಿ ಆರ್ಸೆನಿಕ್ ಹಾಗೂ ಫ್ಲೋರೈಡ್ ಮಿಶ್ರಣದ ಸಮಸ್ಯೆಯಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಗ್ರಾಮೀಣ ಕುಟುಂಬಗಳಿಗೆ ಕುಡಿಯಲು ಯೋಗ್ಯವಾದ ನೀರನ್ನು ಒದಗಿಸಲು ಜಲಮೂಲಗಳ ಸುಧಾರಣೆ ಮತ್ತು ಬೃಹತ್ ನೀರಿನ ಸರಬರಾಜು ವ್ಯವಸ್ಥೆಗೆ ಆದ್ಯತೆ ನೀಡಿದ್ದೇವೆ. ಕುಡಿಯುವ ನೀರಿನ ಕಾಮಗಾರಿಗಳಲ್ಲಿ ಕರ್ನಾಟಕ ಯಾವುದೇ ರಾಜಿ ಮಾಡಿಕೊಳ್ಳದೆ ಗುಣಮಟ್ಟವನ್ನು ಕಾಯ್ದುಕೊಂಡಿದೆ. ಈ ಯೋಜನೆಯಡಿ ಪ್ರತಿಯೊಂದು ಕಾಮಗಾರಿಗಳನ್ನು ಮೂರನೇ ಏಜೆನ್ಸಿ ಮೂಲಕ ಪರಿಶೀಲನೆ ನಡೆಸಲಾಗುತ್ತಿದ್ದು, ಪಾರದರ್ಶಕತೆಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಇದುವರೆಗೆ 101.31 ಲಕ್ಷ ಗ್ರಾಮೀಣ ಕುಟುಂಬಗಳ ಪೈಕಿ 88.06 ಮನೆಗಳಿಗೆ ನಳಸಂಪರ್ಕ ಕಲ್ಪಿಸಿದ್ದು, ಶೇ.86.93 ರಷ್ಟು ಪ್ರಗತಿ ಸಾಧಿಸಿದ್ದೇವೆ. ಈಗಾಗಲೇ ಕೈಗೊಳ್ಳಲಾಗಿರುವ 66,344 ಕಾಮಗಾರಿಗಳ ಪೈಕಿ ಸುಮಾರು 48,789 ಕಾಮಗಾರಿಗಳು ಭೌತಿಕವಾಗಿ ಪೂರ್ಣಗೊಂಡಿವೆ. ಇದರಲ್ಲಿ ಗ್ರಾಮಗಳಲ್ಲಿ 28,809 ಕಾಮಗಾರಿಗಳು ಹಾಗೂ 19,980 ಕಾಮಗಾರಿಗಳು ಶಾಲೆ, ಅಂಗನವಾಡಿಗಳಲ್ಲಿ ಕೈಗೊಳ್ಳಲಾಗಿದ್ದು, ಗ್ರಾಮೀಣ ಮಟ್ಟದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ. ದರೆ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ, ಕರ್ನಾಟಕ ರೂ.17,554.63 ಕೋಟಿ ಬಂಡವಾಳ ಹೂಡಿದೆ. ಇದರಲ್ಲಿ ಕೇಂದ್ರದ ಪಾಲಿನ ನಿರೀಕ್ಷೆಯಲ್ಲಿ ಹೂಡಲಾಗಿರುವ ರೂ.8,880.71 ಕೋಟಿಯೂ ಸೇರಿದ್ದು, ಇದು ಯೋಜನೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ಯೋಜನೆ ಅನುಷ್ಠಾನದಲ್ಲಿ ರಾಜ್ಯ ಯಾವುದೇ ರೀತಿಯಲ್ಲಿ ರಾಜಿಯಾಗದೆ, ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದರೂ, ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿರುವುದು ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಆಯವ್ಯಯದಲ್ಲಿ ಅನುದಾನ ಹಂಚಿಕೆ ಮಾಡಿದ್ದರೂ, ಕಳೆದ ಎರಡು ವರ್ಷಗಳಿಂದ ಕರ್ನಾಟಕಕ್ಕೆ ಹಣ ಬಿಡುಗಡೆಯಾಗಿಲ್ಲ. ಆದರೂ ರಾಜ್ಯ ಸರ್ಕಾರವೇ ಕೇಂದ್ರದ ಪಾಲಿನ ಹಣವನ್ನು ಭರಿಸಿ, ಯೋಜನೆ ಅನುಷ್ಠಾನ ಮುಂದುವರೆಯುವಂತೆ ನೋಡಿಕೊಂಡಿದೆ. ಇದೇ ವೇಳೆ ನಾವು ಸದೃಢವಾದ ಸಾಂಸ್ಥಿಕ ಹಾಗೂ ನಿರ್ವಹಣಾ ವ್ಯವಸ್ಥೆಯನ್ನು ರೂಪಿಸಲು ಒತ್ತು ನೀಡಿದ್ದೇವೆ. ಆಪರೇಷನ್ & ಮೈಂಟೆನೆನ್ಸ್‌ ನೀತಿಯನ್ನು ಅನುಷ್ಠಾನಗೊಳಿಸಿದ ಹಾಗೂ ಚಾಲನೆ ನೀಡಿದ ಮೊದಲ ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದೆ. ಗ್ರಾಮೀಣ ಜಲ ನೈರ್ಮಲ್ಯ ಸಮಿತಿಗಳು ಸಕ್ರಿಯವಾಗಿದ್ದು, ಸಮಿತಿಗಳಲ್ಲಿ ಲಿಂಗ ಸಮಾತೋಲವನ್ನು ಕಾಯ್ದುಕೊಳ್ಳಲಾಗಿದೆ. ಕಾರ್ಯಾಚರಣೆಗೆಂದೇ ಮೀಸಲಾದ ಪಿಎಂಯು ಅನ್ನು ಸ್ಥಾಪಿಸಲಾಗಿದ್ದು, ಜೀವ ಜಲ ಅಪ್ಲಿಕೇಶನ್, ಜಿ.ಐ.ಎಸ್ ಆಧಾರಿತ ಭೂ ನಿರ್ವಹಣೆ, ಸಮಯೋಚಿತ ನಿರ್ವಹಣಾ ವ್ಯವಸ್ಥೆ ಮುಂತಾದ ಡಿಜಿಟಲ್ ನಾವೀನ್ಯತೆಗಳ ಮೂಲಕ ಆಡಳಿತ ವ್ಯವಸ್ಥೆಯನ್ನು ಸುಧಾರಣೆ ಮಾಡಲಾಗಿದೆ. 1.51 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ನೀರಿನ ಗುಣಮಟ್ಟ ಪರೀಕ್ಷೆ ಮಾಡುವ ಬಗ್ಗೆ ತರಬೇತಿ ನೀಡುವ ಮೂಲಕ ಸ್ಥಳೀಯ ನಾಯಕತ್ವಕ್ಕೆ ಮಹತ್ವ ನೀಡಿದೆ.

ಗುಣಮಟ್ಟ ಖಾತ್ರಿಪಡಿಸಲು ಕರ್ನಾಟಕವು ಬ್ಯೂರೋ ವೆರಿಟಾಸ್ ಸಂಸ್ಥೆಯನ್ನು ಸ್ವತಂತ್ರ ಪರಿಶೀಲನೆ, ಮಾದರಿ ಆಧಾರಿತ ತಪಾಸಣೆ, ದಾಖಲೆಗಳ ಪರಿಶೀಲನೆ, ತಾಂತ್ರಿಕ ಪರೀಕ್ಷೆಗಳಿಗಾಗಿ ನೇಮಿಸಿದ್ದು, ತನ್ಮೂಲಕ ಕಾಮಗಾರಿಗಳ ಸುಸ್ಥಿರ ಕಾರ್ಯಶೀಲತೆಯನ್ನು ದೃಢಪಡಿಸಲಾಗುತ್ತಿದೆ. ನೀರಿನ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲಾಗುತ್ತಿದ್ದು, ಇದು ಜ್ಞಾನ ಮತ್ತು ನಿರ್ದೇಶನ ಕೇಂದ್ರ(knowledge and command hub) ವಾಗಿ ಕಾರ್ಯನಿರ್ವಹಿಸಲಿದೆ. 259 ಗ್ರಾಮಗಳಿಗೆ ಈಗಾಗಲೇ 24/7 ನೀರಿನ ಸರಬರಾಜು ಸಾಧಿಸಲಾಗಿದ್ದು, ಈ ಮಿಷನ್‌ಗಿರುವ ಪರಿವರ್ತನಾ ಸಾಮರ್ಥ್ಯವನ್ನು ಇದು ಸಾಬೀತುಪಡಿಸಿದೆ.

ಎಲ್ಲಾ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಕರ್ನಾಟಕ ಸಂಪೂರ್ಣವಾಗಿ ಬದ್ಧವಾಗಿದೆ. ಮುಂಗಡ ವೆಚ್ಚದ ಮರುಪಾವತಿಗಳು ಸೇರಿದಂತೆ ಬಾಕಿಯಿರುವ ಎಲ್ಲಾ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ಇದೇ ವೇಳೆ ಎಲ್ಲ ಗ್ರಾಮೀಣ ನಿವಾಸಿಗಳಿಗೆ ಸುರಕ್ಷಿತ ಮತ್ತು ಸುಸ್ಥಿರ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರದ ಜೊತೆ ಕೆಲಸ ಮಾಡುವುದನ್ನು ಹೀಗೆಯೇ ಮುಂದುವರಿಸುತ್ತೇವೆ ಎಂಬ ಭರವಸೆಯನ್ನೂ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಳೆ ಬಳಿಕ ಸಿಲಿಕಾನ್ ಸಿಟಿ ಕೂಲ್-ಕೂಲ್: 10 ಡಿಗ್ರಿ ಸೆಲ್ಸಿಯಸ್ ತಾಪಮಾನ ಕುಸಿತ; ಮುಂದಿನ 2 ದಿನಗಳೂ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ..!

ಇರಾನ್ ಯುದ್ಧ, ಉಕ್ರೇನ್ ಬಗ್ಗೆ ಪುಟಿನ್, ಟ್ರಂಪ್ ಚರ್ಚೆ: ಕ್ರೆಮ್ಲಿನ್ ಹೇಳಿದ್ದೇನು?

25 ವರ್ಷಗಳ ಬಳಿಕ ಬೆಂಗಳೂರಲ್ಲಿ ದಾಖಲೆ ಮಳೆ: ನಗರದಲ್ಲಿ ಭಾರೀ ಅವಾಂತರ, 9 ಜೀವಗಳು ಬಲಿ.!

ಬಿಹಾರ ಮೃಗಾಲಯ, ಡೈರಿ ಸಂಸ್ಥೆಗೆ ಸಂಜಯ್ ಗಾಂಧಿ ಹೆಸರು ತೆಗೆದು ಹಾಕಿದ ಬಿಜೆಪಿ ಸರ್ಕಾರ!

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ದುರಂತ: ದುರ್ಘಟನೆಗೆ ಮೂಲಭೂತ ಸೌಕರ್ಯಗಳ ನಿರ್ಲಕ್ಷ್ಯವೇ ಕಾರಣ; ಸರ್ಕಾರದ ವಿರುದ್ಧ ವಿಪಕ್ಷಗಳು ತೀವ್ರ ಕಿಡಿ

SCROLL FOR NEXT