ಬೆಂಗಳೂರು: ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷೆಯಲ್ಲಿನ ಅಕ್ರಮಗಳನ್ನು ಖಂಡಿಸಿದ ದೇಶಾದ್ಯಂತ ಭಾರೀ ಪ್ರತಿಭಟನೆ ನಡೆದ ಬೆನ್ನಲ್ಲೇ ರಾಜ್ಯದಲ್ಲೂ ಕೆಎಎಸ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ.
ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಕೆಎಎಸ್ ಪರೀಕ್ಷೆಯಲ್ಲಿ 25 ಮಾರ್ಕ್ಸ್ ನೀಡಲು ಬರೋಬ್ಬರಿ ಒಂದೂವರೆ ಕೋಟಿ ರೂ. ಹಣಕ್ಕೆ ಡಿಮ್ಯಾಂಡ್ ಮಾಡಿದ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಲಂಚ ಕೊಟ್ಟ ಅಭ್ಯರ್ಥಿ ಹೆಸರು ಸಮೇತ ದೂರು ನೀಡಲಾಗಿದೆ.
ಒಟ್ಟು 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಹಣ ಕೊಟ್ಟ ಅಭ್ಯರ್ಥಿ ಹೆಸರನ್ನೂ ಉಲ್ಲೇಖಿಸಲಾಗಿದೆ.
ಕಾಂತಕುಮಾರ್ ಎಂಬ ಅಭ್ಯರ್ಥಿ ದೊಡ್ಡ ಪ್ರಮಾಣದ ಲಂಚ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಅಭ್ಯರ್ಥಿ ಕೆಪಿಎಸ್ಸಿ ಸದಸ್ಯರೊಬ್ಬರ ಜೊತೆ ಸಂಪರ್ಕದಲ್ಲಿದ್ದ ಎಂದು ಆರೋಪಿಸಲಾಗಿದೆ. ಪ್ರಾಥಮಿಕ ವಿಚಾರಣೆಗಾಗಿ ಪೊಲೀಸರು ದೂರನ್ನು ಕಾಯ್ದಿರಿಸಿದ್ದಾರೆ.
ಸಂದರ್ಶನದಲ್ಲಿ 25 ಮಾರ್ಕ್ಸ್ ನೀಡಲು ಕೆಪಿಎಸ್ಸಿ ಸದಸ್ಯರೊಬ್ಬರಿಗೆ ಬರೋಬ್ಬರಿ ಒಂದೂವರೆ ಕೋಟಿ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಇದಕ್ಕೆ ಪೂರಕ ಎಂಬಂತೆ ಸಿಡಿಆರ್ ಸಿಕ್ಕಿದೆ. ಎಷ್ಟು ಸಲ ಅಭ್ಯರ್ಥಿ ಹಾಗೂ ಮೆಂಬರ್ ಮಾತನಾಡಿದ್ದಾರೆ ಅನ್ನೋದು ಸಿಡಿಆರ್‌ನಲ್ಲಿ ಇದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.