ಎಐ ಸೃಷ್ಟಿತ ಚಿತ್ರ 
ರಾಜ್ಯ

"justice For Manasa": ಆಟೋ ಡಿಕ್ಕಿಯಾಗಿ ವಿದ್ಯಾರ್ಥಿನಿ ದಾರುಣ ಸಾವು, ಬೆಂಗಳೂರು ವಿವಿ ಆವರಣದಲ್ಲಿ ರಸ್ತೆ ತಡೆದು ವಿದ್ಯಾರ್ಥಿಗಳ ಆಕ್ರೋಶ..!

ಮೈಸೂರು ಜಿಲ್ಲೆಯ ನಂಜನಗೂಡು ಮೂಲದ ಮಾನಸಾ, ಬೆಂಗಳೂರು ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದು, ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿ ವಾಸವಾಗಿದ್ದರು.

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಎಚ್.ಎಂ. ಮಾನಸಾ (23) ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಘಟನೆಯ ಬೆನ್ನಲ್ಲೇ ಆಕ್ರೋಶಗೊಂಡ ನೂರಾರು ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ಜಸ್ಟಿಸ್ ಫಾರ್ "ಮನಸಾ" ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ವಿಶ್ವವಿದ್ಯಾಲಯ ಆಡಳಿತವನ್ನು ಒತ್ತಾಯಿಸಿದ್ದಾರೆ.

ಮೈಸೂರು ಜಿಲ್ಲೆಯ ನಂಜನಗೂಡು ಮೂಲದ ಮಾನಸಾ, ಬೆಂಗಳೂರು ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದು, ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿ ವಾಸವಾಗಿದ್ದರು.

ಜುಲೈ 30ರಂದು ಪರೀಕ್ಷೆ ಮುಗಿಸಿಕೊಂಡು ಗಾಂಧಿ ಮಾರ್ಗದ ಕ್ಯಾಂಟೀನ್ ಸಮೀಪ ರಸ್ತೆ ದಾಟುತ್ತಿದ್ದ ವೇಳೆ ಅತಿವೇಗವಾಗಿ ಬಂದ ಆಟೋ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಮನಸಾ ಗಂಭೀರವಾಗಿ ಗಾಯಗೊಂಡಿದ್ದರು.

ಅವರನ್ನು ನಾಗರಭಾವಿಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮಾನಸಾ ಮೃತಪಟ್ಟಿದ್ದಾರೆ ಎಂದು ಜ್ಞಾನಭಾರತಿ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಈಗಾಗಲೇ ಆಟೋ ಚಾಲಕನನ್ನು ಬಂಧಿಸಲಾಗಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಮಾನಸಾ ಸಾವಿನ ಬಳಿಕ "ಜಸ್ಟಿಸ್ ಫಾರ್ ಮನಸಾ" ಬ್ಯಾನರ್ ಅಡಿಯಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಪ್ರತಿಭಟನೆ ನಡೆಸಿ, ಕುಲಪತಿಗೆ ಮನವಿ ಪತ್ರ ಸಲ್ಲಿಸಿದರು.

ಗಾಂಧಿ ಮಾರ್ಗದಲ್ಲಿ ಸಾರ್ವಜನಿಕ ವಾಹನಗಳ ಸಂಚಾರವನ್ನು ನಿಷೇಧಿಸಬೇಕು, ಮನಸಾ ಕುಟುಂಬಕ್ಕೆ ಎಲ್ಲಾ ರೀತಿಯ ನೆರವು ನೀಡಬೇಕು, ವೈದ್ಯಕೀಯ ವೆಚ್ಚವನ್ನು ವಿಶ್ವವಿದ್ಯಾಲಯವೇ ಭರಿಸಬೇಕು ಹಾಗೂ ಪ್ರಕರಣದಲ್ಲಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ದೃಶ್ಯಕಲಾ ವಿಭಾಗದ ಅತಿಥಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಸಲ್ಲಿಸಿದ ಮನವಿ ಪತ್ರದಲ್ಲಿ, ಗಾಂಧಿ ಮಾರ್ಗದಲ್ಲಿ ಅತಿವೇಗ ಹಾಗೂ ನಿರ್ಲಕ್ಷ್ಯ ಚಾಲನೆಯಿಂದ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಕ್ಯಾಂಟೀನ್ ಹಾಗೂ ಬಾಲಕಿಯರ ವಸತಿ ನಿಲಯದ ಎದುರು ಹಣ್ಣಿನ ವ್ಯಾಪಾರಿಗಳು ಇರುವುದರಿಂದ ವಾಹನಗಳು ಏಕಾಏಕಿ ನಿಲ್ಲುತ್ತಿದ್ದು, ಇದರಿಂದ ಅಪಘಾತದ ಅಪಾಯ ಹೆಚ್ಚುತ್ತಿದೆ.

ಹೀಗಾಗಿ ಗಾಂಧಿ ಮಾರ್ಗದಲ್ಲಿ ಸಾರ್ವಜನಿಕ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಬೇಕು. ಅದು ಸಾಧ್ಯವಾಗದಿದ್ದರೆ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೆ ತರಬೇಕು, ನಿಯಮಿತ ಅಂತರದಲ್ಲಿ ವೇಗ ನಿಯಂತ್ರಣ ತಡೆಗೋಡೆಗಳನ್ನು ಅಳವಡಿಸಬೇಕು ಒತ್ತಾಯಿಸಿದ್ದಾರೆ.

"ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಾತ್ರಿಪಡಿಸುವ ಹೊಣೆ ವಿಶ್ವವಿದ್ಯಾಲಯದ ಮೇಲಿದೆ. ಇನ್ನಷ್ಟು ವಿಳಂಬ ಮಾಡಿದರೆ ಇಂತಹ ಅಪಘಾತಗಳು ಮತ್ತೆ ಮರುಕಳಿಸುವ ಅಪಾಯವಿದೆ" ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹಾರ್ಮುಜ್ ಜಲಸಂಧಿ ಒಪ್ಪಂದ ಸನ್ನಿಹಿತ, ಆದರೆ ಯಾವುದಾದರೊಂದು ದೇಶ ತನ್ನ ನಿಲುವಿನಲ್ಲಿ ಸಡಿಲಿಕೆ ತೋರಿಸಬೇಕು: ಇರಾನ್-ಯುಎಸ್

Mojtaba Khamenei ಎಲ್ಲಿದ್ದಾರೆ? ರಹಸ್ಯ ತಾಣದಲ್ಲಿ ಪರಮೋಚ್ಛ ನಾಯಕ; ಅವರ ಉಪಸ್ಥಿತಿಯೇ ನಮ್ಮ ಧೈರ್ಯ ಎಂದ Iran ಅಧ್ಯಕ್ಷ

ಅಸಮಾಧಾನಿತ ಶಾಸಕರ ಸಮಸ್ಯೆ ಆಲಿಸಿದ್ದೇವೆ, ನಾವೆಲ್ಲಾ ಒಂದು ಕುಟುಂಬ- ಸುರ್ಜೆವಾಲ; ಸಚಿವ ಸ್ಥಾನ ಹೊರತಾಗಿ ಬೇರೆ ಏನು ಕೊಟ್ಟರೂ ಒಪ್ಪಲ್ಲ- ಎಂ ಕೃಷ್ಣಪ್ಪ

Sheikh Hasina: ವಾಪಸ್ ಬಾಂಗ್ಲಾದೇಶಕ್ಕೆ ಹೋಗಲು ನಿರ್ಧರಿಸಿದ್ದೇನೆ; ನನ್ನನ್ನು ಕೊಲ್ಲಲಿ, ಜೈಲಿಗೆ ಹಾಕಲಿ - ಶೇಖ್ ಹಸೀನಾ

ಸಚಿವ ಸ್ಥಾನ ಕೋಟಿ ಕೋಟಿಗೆ ಹರಾಜು: BJPಯಿಂದ ಆಡಿಯೋ ಬಿಡುಗಡೆ; ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ