ಎಐ ವಿಶ್ವವಿದ್ಯಾಲಯ, ಆಡಳಿತದಲ್ಲಿ ಎಐ ಬಳಕೆ, ರಾಜ್ಯವ್ಯಾಪಿ ಕೌಶಲ್ಯಾಭಿವೃದ್ಧಿ ಮತ್ತು ಡೇಟಾ ಸಾರ್ವಭೌಮತ್ವ ಸೇರಿದಂತೆ ಹಲವು ವಿಷಯಗಳ ಕುರಿತು ಸಮಾಲೋಚನೆ ನಡೆಯಿತು. ತೆರಿಗೆ ಆಡಳಿತ, ವಂಚನೆ ಪತ್ತೆ, ಆರೋಗ್ಯ ಸೇವೆ ಹಾಗೂ ಪರೀಕ್ಷಾ ಭದ್ರತೆಯಲ್ಲಿ ಎಐ ಬಳಕೆಯ ಬಗ್ಗೆಯೂ ಚರ್ಚಿಸಲಾಯಿತು. ಆದರೆ ಸಭೆಯ ಬಳಿಕ ಯಾವುದೇ ಅಧಿಕೃತ ಒಪ್ಪಂದ ಅಥವಾ ಹೊಸ ನೀತಿ ಘೋಷಣೆ ಮಾಡಲಾಗಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕೃತಕ ಬುದ್ಧಿಮತ್ತೆ (AI) ವಿಶ್ವದ ಅತ್ಯಂತ ತುರ್ತು ಸವಾಲುಗಳನ್ನು ಎದುರಿಸುವಲ್ಲಿ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ (SDGs) ಸಾಧನೆಯನ್ನು ವೇಗಗೊಳಿಸುವಲ್ಲಿ ಶಕ್ತಿವರ್ಧಕ (Force Multiplier) ಆಗಬೇಕು ಎಂದು ಐಟಿ/ಬಿಟಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವೋಲ್ವರ್‌ಹ್ಯಾಂಪ್ಟನ್–ಬೆಂಗಳೂರು ಸಂಶೋಧನೆ ಮತ್ತು ನವೋದ್ಯಮ ಕೇಂದ್ರ (WBCR&I) ಆಯೋಜಿಸಿದ್ದ 'ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ಕೃತಕ ಬುದ್ಧಿಮತ್ತೆಯ ಬಳಕೆ' ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಯುಕ್ತ ರಾಷ್ಟ್ರಗಳ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (SDGs) ಉಲ್ಲೇಖಿಸಿದ ಪ್ರಿಯಾಂಕ್ ಖರ್ಗೆ, ಬಡತನ ನಿರ್ಮೂಲನೆ, ಆರೋಗ್ಯ ಸೇವೆ ಸುಧಾರಣೆ, ಗುಣಮಟ್ಟದ ಶಿಕ್ಷಣ, ಅಸಮಾನತೆ ಕಡಿತ ಹಾಗೂ ಹವಾಮಾನ ಬದಲಾವಣೆಯಂತಹ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಪ್ರಯತ್ನಗಳಾಗಿದ್ದರೂ, ನಿರೀಕ್ಷಿತ ಮಟ್ಟದ ಪ್ರಗತಿ ಇನ್ನೂ ಸಾಧಿಸಲಾಗಿಲ್ಲ ಎಂದು ಹೇಳಿದರು.
ಈ ಅಂತರವನ್ನು ತುಂಬುವ ಅಪೂರ್ವ ಅವಕಾಶವನ್ನು ಎಐ ಒದಗಿಸುತ್ತದೆ. ಆದರೆ ಅದನ್ನು ಜವಾಬ್ದಾರಿಯುತವಾಗಿ ಮತ್ತು ಜನರ ಜೀವನ ಸುಧಾರಣೆಯ ಉದ್ದೇಶದಿಂದ ಬಳಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಎಐ ಯಾವುದೇ ರಕ್ಷಕನಲ್ಲ. ಅದಕ್ಕೆ ಆತ್ಮಸಾಕ್ಷಿ, ಧೈರ್ಯ ಅಥವಾ ಕರುಣೆ ಇಲ್ಲ. ಆದರೆ ಆತ್ಮಸಾಕ್ಷಿ, ಧೈರ್ಯ ಮತ್ತು ಕರುಣೆ ಹೊಂದಿರುವವರ ಕೈಯಲ್ಲಿ ಅದು ಶಕ್ತಿವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಎಐ ನಮ್ಮ ಸಮಸ್ಯೆಗಳನ್ನು ಪರಿಹರಿಸಬಹುದೇ ಎಂಬುದು ಮುಖ್ಯ ಪ್ರಶ್ನೆಯಲ್ಲ. ಜನರ ಬದುಕಿಗೆ ಅತ್ಯಂತ ಮಹತ್ವದ ಸವಾಲುಗಳನ್ನು ಪರಿಹರಿಸಲು ಅದನ್ನು ನಾವು ಜವಾಬ್ದಾರಿಯುತವಾಗಿ ಬಳಸುತ್ತೇವೆಯೇ ಎಂಬುದೇ ಮುಖ್ಯ ಎಂದು ಖರ್ಗೆ ಹೇಳಿದರು.
ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಯ ಹಾದಿಯಲ್ಲಿ ತಂತ್ರಜ್ಞಾನವು ಮಾನವ ಕೇಂದ್ರಿತವಾಗಿರಬೇಕು ಎಂದು ಖರ್ಗೆ ಒತ್ತಿ ಹೇಳಿದರು.
ಎಐಯ ಅಂತಿಮ ಉದ್ದೇಶ...
ವೈದ್ಯರು ಹೆಚ್ಚಿನ ಜೀವಗಳನ್ನು ಉಳಿಸಲು ನೆರವಾಗುವುದು,
ರೈತರು ಉತ್ಪಾದಕತೆ ಹೆಚ್ಚಿಸಿಕೊಳ್ಳಲು ಸಹಾಯ ಮಾಡುವುದು,
ಸರ್ಕಾರಗಳು ನಾಗರಿಕರಿಗೆ ಉತ್ತಮ ಸೇವೆ ನೀಡಲು ನೆರವಾಗುವುದು,
ಯುವ ನವೋದ್ಯಮಿಗಳು ಸಮಾಜಕ್ಕೆ ಪರಿಣಾಮಕಾರಿ ಪರಿಹಾರಗಳನ್ನು ರೂಪಿಸಲು ಉತ್ತೇಜನ ನೀಡುವುದಾಗಿರಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರದಿಂದ ಆಯ್ಕೆಯಾಗುವ ಸ್ಟಾರ್ಟ್‌ಅಪ್‌ಗಳಿಗೆ ನೀಡುವ ಅನುದಾನವನ್ನು ಮುಂದಿನ ವರ್ಷದಿಂದ 1 ಕೋಟಿಗೆ ಹೆಚ್ಚಿಸಲಾಗುವುದು ಎಂದೂ ಅವರು ಘೋಷಿಸಿದರು.
ದೇಶದ ಮೊದಲ ಎಐ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹೂಡಿಕೆ ಮಾಡಿರುವುದನ್ನು ಉಲ್ಲೇಖಿಸಿದ ಖರ್ಗೆ, ಜವಾಬ್ದಾರಿಯುತ ಎಐ ಆವಿಷ್ಕಾರಕ್ಕೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.
ಕೃತಕ ಬುದ್ಧಿಮತ್ತೆಯ (AI) ಪ್ರಸ್ತುತ ಇಂಧನ ಮತ್ತು ಸಂಪನ್ಮೂಲ ಬಳಕೆ ಪರಿಸರದ ದೃಷ್ಟಿಯಿಂದ ದೀರ್ಘಾವಧಿಗೆ ಸಮರ್ಥನೀಯವಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (IISc) ನ್ಯಾನೋ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕೇಂದ್ರದ ಸಹ ಪ್ರಾಧ್ಯಾಪಕ ಪ್ರೊ. ಶ್ರೀತೋಷ್ ಗೋಸ್ವಾಮಿ ಹೇಳಿದ್ದಾರೆ.
ಬೆಂಗಳೂರು ಇಂಡಿಯಾ ನ್ಯಾನೋ 2026 ಕಾರ್ಯಕ್ರಮದಲ್ಲಿ 'ಮಾಲಿಕ್ಯುಲರ್ ನ್ಯೂರೋಮಾರ್ಫಿಕ್ ಬಿಲ್ಡಿಂಗ್ ಬ್ಲಾಕ್ಸ್ ಫಾರ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್' ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
ಒಂದು ಎಐ ಮಾದರಿಯನ್ನು ಸಂಪೂರ್ಣವಾಗಿ ಬದಲಾಯಿಸಬೇಕಾದರೆ ಸುಮಾರು 7 ಲಕ್ಷ ಲೀಟರ್ ನೀರು ಬೇಕಾಗುತ್ತದೆ. ಎಐ ತರಬೇತಿ ಮತ್ತು ಬಳಕೆಯಿಂದ ಉಂಟಾಗುವ ಕಾರ್ಬನ್ ಹೆಜ್ಜೆಗುರುತು (Carbon Footprint) ಭೂಮಿಯಿಂದ ಚಂದ್ರನಿಗೆ ಹೋಗಿ ಮರಳುವ ಪ್ರಯಾಣದಷ್ಟಿರುತ್ತದೆ ಎಂದು ಹೇಳಿದರು.
ಎಐ ಕಾರ್ಯನಿರ್ವಹಿಸುವ ಹಾರ್ಡ್‌ವೇರ್ ಕುರಿತು ಮಾತನಾಡಿದ ಅವರು, ಪ್ರಸ್ತುತ ಎಐ ಅಭಿವೃದ್ಧಿಗೆ ಪ್ರಮುಖ ಅಡ್ಡಿಯಾಗಿರುವುದು ಕಂಪ್ಯೂಟಿಂಗ್ ಶಕ್ತಿಯಲ್ಲ, ಚಿಪ್‌ಗಳಲ್ಲಿನ ಮೆಮೊರಿ ಸಾಮರ್ಥ್ಯ ಎಂದು ಹೇಳಿದರು.
ಇಂದು ನಮ್ಮನ್ನು ಮಿತಿಗೊಳಿಸುತ್ತಿರುವುದು ಕಂಪ್ಯೂಟಿಂಗ್ ಸಾಮರ್ಥ್ಯವಲ್ಲ, ಮೆಮೊರಿ. ಹೀಗಾಗಿ ಈಗಿನ ಮೆಮೊರಿ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಕಂಪ್ಯೂಟಿಂಗ್ ವಿನ್ಯಾಸಗಳನ್ನು ಮರುಪರಿಶೀಲಿಸಬೇಕಾಗಿದೆ ಎಂದು ತಿಳಿಸಿದರು.
ಪರಿಸರದ ಮೇಲಿನ ಪರಿಣಾಮಗಳನ್ನು ಗಮನಿಸಿದರೆ, ಭವಿಷ್ಯದಲ್ಲಿ ಎಐ ಕೇವಲ ಬೃಹತ್ ಡೇಟಾ ಕೇಂದ್ರಗಳಲ್ಲೇ ಕೇಂದ್ರೀಕೃತವಾಗದೆ, ವ್ಯಕ್ತಿಗತವಾಗಿ ಸ್ಥಳೀಯ ಮಟ್ಟದಲ್ಲೇ ಕಾರ್ಯನಿರ್ವಹಿಸುವ ಮೆದುಳು ಪ್ರೇರಿತ ನ್ಯೂರೋಮಾರ್ಫಿಕ್ ಕಂಪ್ಯೂಟಿಂಗ್ ವ್ಯವಸ್ಥೆಗಳತ್ತ ಸಾಗಬೇಕು. ಇವು ಹೆಚ್ಚು ಇಂಧನ ದಕ್ಷ ಪರ್ಯಾಯವಾಗಲಿವೆ ಎಂದು ಅವರು ಅಭಿಪ್ರಾಯಪಟ್ಟರು.