ಬೆಳಗಾವಿ: ಇತ್ತೀಚೆಗೆ ಕೆಲವೇ ದಿನಗಳಲ್ಲಿ ಹಣ ಡಬಲ್ ಮಾಡಿಕೊಡುತ್ತೇವೆ, ಅತ್ಯಧಿಕ ಬಡ್ಡಿ ನೀಡುತ್ತೇವೆ ಎಂದು ಆಸೆ ತೋರಿಸಿ ಜನರನ್ನು ಮೋಸಗೊಳಿಸುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಬೆಳಗಾವಿಯ 'ಶಿವಂ ಅಸೋಸಿಯೇಟ್ಸ್' ಸಂಸ್ಥೆಯ ಬಹುಕೋಟಿ ಹಗರಣ. ಹೌದು, ಜಾರಿ ನಿರ್ದೇಶನಾಲಯ ನಡೆಸಿರುವ ತನಿಖೆಯಿಂದ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಹಗರಣದ ಕರಾಳ ಸತ್ಯಗಳು ಹೊರಬಂದಿವೆ. ಆ ಕುರಿತ ವರದಿ ಇಲ್ಲಿದೆ:
ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮಾಲೀಕ ಶಿವಾನಂದ ಸಿದ್ದಪ್ಪ ನೀಲಣ್ಣನವರ್ ಸಾರ್ವಜನಿಕರಿಗೆ ತಿಂಗಳಿಗೆ ಶೇ. 3 ರಷ್ಟು (ವರ್ಷಕ್ಕೆ ಶೇ. 36) ಹೆಚ್ಚಿನ ಬಡ್ಡಿ ನೀಡುವುದಾಗಿ ಆಮಿಷ ಒಡ್ಡಿ ಬರೋಬ್ಬರಿ ₹2,110.97 ಕೋಟಿಗೂ ಅಧಿಕ ಹಣವನ್ನು ಅಕ್ರಮವಾಗಿ ಸಂಗ್ರಹಿಸಿ ವಂಚಿಸಿರುವುದು ಇಡಿ ತನಿಖೆಯಲ್ಲಿ ಅಧಿಕೃತವಾಗಿ ಬಯಲಾಗಿದೆ. ಅದರಂತೆ, ತನಿಖೆಯ ಪ್ರಕಾರ, ಶಿವಂ ಅಸೋಸಿಯೇಟ್ಸ್ ಸಂಸ್ಥೆಯು ಸಾರ್ವಜನಿಕರಿಂದ ಸುಮಾರು ₹2,110.97 ಕೋಟಿ ಠೇವಣಿ ಪಡೆದಿತ್ತು. ಆದರೆ, ಆ ಮೊತ್ತದಲ್ಲಿ ಹೂಡಿಕೆದಾರರಿಗೆ ಕೇವಲ ₹333.89 ಕೋಟಿ ಮಾತ್ರ ವಾಪಸ್ ನೀಡಲಾಗಿದೆ ಎಂದು ತಿಳಿದುಬಂದಿದೆ. ಆದ್ರಲ್ಲೂ, ಉಳಿದ ಅಂದಾಜು ₹1,777 ಕೋಟಿಗೂ ಹೆಚ್ಚಿನ ಹಣಕ್ಕೆ ಯಾವುದೇ ರೀತಿಯ ಸರಿಯಾದ ಲೆಕ್ಕಪತ್ರಗಳು ಇಲ್ಲದಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಜನರನ್ನು ಸೆಳೆಯಲು ಮಧ್ಯವರ್ತಿಗಳಿಗೆ (ಲೀಡರ್ಸ್) ಶೇ. 0.5 ರಷ್ಟು ಕಮಿಷನ್ ನೀಡಲಾಗುತ್ತಿತ್ತು ಎನ್ನಲಾಗಿದೆ.
ಏತನ್ಮಧ್ಯೆ, ಇಡಿ ಅಧಿಕಾರಿಗಳ ಪ್ರಕಾರ, ಹೂಡಿಕೆದಾರರ ಹಣವನ್ನು ಬೇರೆಡೆಗೆ ವರ್ಗಾಯಿಸಲು ಶಿವಾನಂದ ನೀಲಣ್ಣನವರ್ ಅವರು ಶಿವಂ ಪ್ರೊಡಕ್ಷನ್ಸ್, ಶಿವಂ ಲೈಫ್‌ಲೈನ್ ಪ್ರೈವೇಟ್ ಲಿಮಿಟೆಡ್, ಶಿವಂ ಸೇವಾ ಪ್ರೈವೇಟ್ ಲಿಮಿಟೆಡ್ ನಂತಹ ಹಲವು ಸಹವರ್ತಿ ಸಂಸ್ಥೆಗಳ ಜಾಲವನ್ನು ಸೃಷ್ಟಿಸಿದ್ದರು ಎನ್ನಲಾಗಿದೆ.
ಇದಕ್ಕೂ ಮುನ್ನ ಆಗಸ್ಟ್ 7, 2026 ರಂದು ಜಾರಿ ನಿರ್ದೇಶನಾಲಯದ ಮಂಗಳೂರು ವಲಯದ ಅಧಿಕಾರಿಗಳು ಬೆಳಗಾವಿ, ಚಿಕ್ಕೋಡಿ ಮತ್ತು ನಿಪಾನಿ ಸೇರಿದಂತೆ ಹಲವು ಸ್ಥಳಗಳಲ್ಲಿ ಏಕಕಾಲಕ್ಕೆ ಬೃಹತ್ ಶೋಧ ಕಾರ್ಯಾಚರಣೆ ನಡೆಸಿ, ಅಕ್ರಮ ಹಣ ವರ್ಗಾವಣೆ, ಆಸ್ತಿ ಹೂಡಿಕೆ ಮತ್ತು ಬೇನಾಮಿ ವಹಿವಾಟುಗಳಿಗೆ ಸಂಬಂಧಿಸಿದ ಡಿಜಿಟಲ್ ಪುರಾವೆ ಹಾಗೂ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಜೊತೆಗೆ ಆರೋಪಿಗಳ ವೈಯಕ್ತಿಕ, ವ್ಯವಹಾರಿಕ ಹಾಗೂ ಮಧ್ಯವರ್ತಿಗಳ ಬ್ಯಾಂಕ್ ಖಾತೆಗಳಿಂದ ಹಣವನ್ನು ಶೇರು ಮಾರುಕಟ್ಟೆ ಮತ್ತು ಸ್ಥಿರ ಠೇವಣಿಗಳಿಗೆ ವರ್ಗಾಯಿಸಿರುವುದು ಕೂಡ ಪತ್ತೆಯಾಗಿದೆ.
ಏನಿದು ಶಿವಂ ಅಸೋಸಿಯೇಟ್ಸ್ ಹಗರಣ?
ಆರಂಭದಲ್ಲಿ RBI ಅಥವಾ SEBI ಅನುಮತಿ ಇಲ್ಲದೆ ಅಕ್ರಮ ಠೇವಣಿ ಸಂಗ್ರಹಿಸುತ್ತಿದ್ದ ಆರೋಪದ ಮೇಲೆ ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿ, ಪೊಲೀಸರು ಶಿವಾನಂದ್‌ನನ್ನು ಮೇ 2026 ರಲ್ಲಿ ಬಂಧಿಸಿದ್ದರು. ಆದರೆ, ವಂಚನೆಯ ವ್ಯಾಪ್ತಿ ದೊಡ್ಡದಾಗಿದ್ದರಿಂದ ಪ್ರಕರಣವನ್ನು CID ತನಿಖೆಗೆ ವಹಿಸಲಾಗಿತ್ತು. ಇದರ ನಡುವೆ, ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ.