ಬೆಂಗಳೂರು : ರಸ್ತೆ ಗುಂಡಿಯಿಂದಾಗಿ ಬೈಕ್‌ನಿಂದ ಕೆಳಗೆ ಬಿದ್ದ ಯುವತಿಯ ಮೇಲೆ ಹಿಂಬದಿಯಿಂದ ಬಂದ ಗೂಡ್ಸ್ ವಾಹನ ಹರಿದು ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿ ಸಮೀಪದ ಅನಂತ ನಗರದಲ್ಲಿ ನಡೆದಿದೆ.
ಮೃತರನ್ನು ಕೇರಳ ಮೂಲದ ಮೇಧಾ (32) ಎಂದು ಗುರುತಿಸಲಾಗಿದೆ. ಅವರು ಎಲೆಕ್ಟ್ರಾನಿಕ್ ಸಿಟಿಯ ಭವಿಷ್ಯ ನಿಧಿ ಕಚೇರಿಯಲ್ಲಿ ಉದ್ಯೋಗಿಯಾಗಿದ್ದರು ಎಂದು ತಿಳಿದುಬಂದಿದೆ.
ಮೇಧಾ ಅವರು ಸ್ನೇಹಿತ ಅಜಯ್ ಗುರು ಅವರೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಮುಂದೆ ಸಾಗುತ್ತಿದ್ದ ಕಾರೊಂದು ಏಕಾಏಕಿ ಬ್ರೇಕ್ ಹಾಕಿದೆ. ಇದರಿಂದ ಬೈಕ್ ಸವಾರ ನಿಯಂತ್ರಣ ಕಳೆದುಕೊಂಡಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಮೇಧಾ ರಸ್ತೆಗೆ ಬಿದ್ದಿದ್ದಾರೆ. ಇದೇ ವೇಳೆ ಹಿಂದಿನಿಂದ ಬಂದ ಗೂಡ್ಸ್ ವಾಹನ ಯುವತಿ ಮೇಲೆ ಹರಿದಿದೆ. ಗಂಭೀರವಾಗಿ ಗಾಯಗೊಂಡ ಮೇಧಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅನಂತ ನಗರದ ಪ್ರಮುಖ ರಸ್ತೆಯು ಸಂಪೂರ್ಣವಾಗಿ ಹಳ್ಳ-ಗುಂಡಿಗಳಿಂದ ಕೂಡಿದ್ದು, ವಾಹನ ಸವಾರರು ಪ್ರತಿನಿತ್ಯ ಅಪಾಯ ಎದುರಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಸ್ತೆ ಅವ್ಯವಸ್ಥೆಯಿಂದಾಗಿ ಈ ಭಾಗದಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಲಾಗಿದೆ.