ಬೆಂಗಳೂರು: ರಾಜಧಾನಿಯ ಪ್ರತಿಷ್ಠಿತ ಆಸ್ಪತ್ರೆಗಳಲ್ಲೊಂದಾದ ಬನ್ನೇರುಘಟ್ಟ ರಸ್ತೆಯ ಅಪೊಲೊ ಆಸ್ಪತ್ರೆಯ (Apollo Hospital) ಕಿಚನ್ ಹಾಗೂ ಕ್ಯಾಂಟೀನ್ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ (FSD) ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ತಪಾಸಣೆಯ ವೇಳೆ ಭಾರಿ ಪ್ರಮಾಣದ ಅವಧಿ ಮುಗಿದ (Expired) ಮತ್ತು ಲೇಬಲ್ ಇಲ್ಲದ ಕಳಪೆ ಆಹಾರ ಸಾಮಗ್ರಿಗಳು ಪತ್ತೆಯಾಗಿದ್ದು, ಇದು ಸಾರ್ವಜನಿಕರ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.
ನಗರದಾದ್ಯಂತ ಹೋಟೆಲ್‌ಗಳು ಹಾಗೂ ಸಾಂಸ್ಥಿಕ ಕ್ಯಾಂಟೀನ್‌ಗಳ ವಿರುದ್ಧ ಹಮ್ಮಿಕೊಳ್ಳಲಾಗಿರುವ ವಿಶೇಷ ಕಾರ್ಯಾಚರಣೆಯ ಭಾಗವಾಗಿ ಈ ದಾಳಿ ನಡೆಸಲಾಗಿದೆ.
ಆಸ್ಪತ್ರೆಯ ಅಡುಗೆಮನೆಯಲ್ಲಿ ರವೆ, ಐಸಿಂಗ್ ಶುಗರ್, ಮೈದಾ ಸೇರಿದಂತೆ ವಿವಿಧ ಕಚ್ಚಾ ವಸ್ತುಗಳು ಹಾಗೂ ಬೇಕರಿ ಉತ್ಪನ್ನಗಳನ್ನು ಅವಧಿ ಮೀರಿದ ಬಳಿಕವೂ ಕಂಟೇನರ್‌ಗಳಲ್ಲಿ ಸಂಗ್ರಹಿಸಿಟ್ಟಿರುವುದು ಕಂಡುಬಂದಿದೆ. ಇದರ ಜತೆಗೆ ಹಲವು ಪ್ಯಾಕೆಟ್ ಪಾನಿಪುರಿ ಮತ್ತು ಮಿಕ್ಸ್ಚರ್ ಪತ್ತೆಯಾಗಿದ್ದು, ಇವುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಇದಲ್ಲದೆ ತಪಾಸಣೆ ವೇಳೆ ಹಳಸಿದ ಬ್ರೆಡ್ ಹಾಗೂ ಬ್ಯಾಕ್ಟೀರಿಯಾಗಳ ಉಗಮಸ್ಥಾನವೆನ್ನಲಾಗುವ, ಅತಿಯಾಗಿ ಬಳಸಲ್ಪಟ್ಟ ಪ್ಲಾಸ್ಟಿಕ್ ಚಾಪಿಂಗ್ ಬೋರ್ಡ್‌ಗಳನ್ನು (ತರಕಾರಿ ಹೆಚ್ಚುವ ಮಣೆ) ಅಡುಗೆಗೆ ಬಳಸುತ್ತಿರುವುದು ಬೆಳಕಿಗೆ ಬಂದಿದೆ.
ತಪ್ಪು ಲೇಬಲ್ ಹೊಂದಿರುವ ಆಹಾರ ಉತ್ಪನ್ನಗಳನ್ನೂ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಇವುಗಳಲ್ಲಿ ಮೆಂತ್ಯ ಸೊಪ್ಪಿನ ಐದು ಪ್ಯಾಕೆಟ್, ತಲಾ 30 ಕೆ.ಜಿ. ತೂಕದ ಆರು ಪ್ಯಾಕೆಟ್ ಹುರಿಗಡಲೆ, 30 ಕೆ.ಜಿ. ತೂಕದ ಒಂದು ಪ್ಯಾಕೆಟ್ ಹಸಿರು ಬಟಾಣಿ ಹಾಗೂ ತಲಾ 30 ಕೆ.ಜಿ. ತೂಕದ ಐದು ಪ್ಯಾಕೆಟ್ ಹೆಸರುಬೇಳೆ ಸೇರಿವೆ.
ಆಸ್ಪತ್ರೆಯ ಅಡುಗೆಮನೆಯಲ್ಲಿ ಆಹಾರ ಸುರಕ್ಷತಾ ನಿಯಮಗಳ ಪಾಲನೆ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಪ್ರಸ್ತುತ ಆಹಾರ ಸುರಕ್ಷತಾ ಅಧಿಕಾರಿಗಳು ಆಸ್ಪತ್ರೆಗೆ ನೋಟಿಸ್ ಜಾರಿಗೊಳಿಸಿದ್ದು, ಮುಂದಿನ ಕಾನೂನು ಕ್ರಮ ಹಾಗೂ ದಂಡ ವಿಧಿಸುವ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದ್ದಾರೆ.