ಬೆಂಗಳೂರು: ಬಿಡದಿ ಟೌನ್ ಶಿಪ್ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಮತ್ತು ವಿಧಾನಸೌಧ ಚಲೋ ಹಮ್ಮಿಕೊಂಡಿದ್ದ ಜೆಡಿಎಸ್ ಮುಖಂಡರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು, ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಅನೇಕ ನಾಯಕರು, ಅಸಂಖ್ಯಾತ ಕಾರ್ಯಕರ್ತರು ಹಾಗೂ ಭೂಮಿ ಕಳೆದುಕೊಳ್ಳುತ್ತಿರುವ ಬಿಡದಿಯ ನೊಂದ ರೈತರು ದೊಡ್ಡ ಪ್ರಮಾಣದಲ್ಲಿ ಪಾಲ್ಗೊಂಡಿದ್ದರು. ವಿಶೇಷವಾಗಿ ಬಿಡದಿ ಹೋಬಳಿಯ ವಿವಿಧ ಹಳ್ಳಿಗಳಿಂದ ಫ್ರೀಡಂಪಾರ್ಕಿಗೆ ಬಂದಿದ್ದ ಸಾವಿರಾರು ರೈತ ಮಹಿಳೆಯರು ಸರ್ಕಾರದ ವಿರುದ್ಧ ದೊಡ್ಡ ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಚಿವ ಕುಮಾರಸ್ವಾಮಿ, ಬಿಡದಿ ಟೌನ್ ಶಿಪ್ ಮತ್ತು ನೈಸ್ ಯೋಜನೆಯ ಮೂಲಕ ಈ ಸರ್ಕಾರ ಖಾಸಗಿ ವ್ಯಕ್ತಿಗಳ ಜೊತೆ ಕುಮ್ಮಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಭೂಮಿಯನ್ನು ಲೂಟಿ ಮಾಡುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ನಾಯಕರು ನಮಗೆ ಎರಡು ಪ್ರಶ್ನೆ ಮುಂದಿಟ್ಟಿದ್ದಾರೆ. ಬಿಡದಿ ಟೌನ್ ಶಿಪ್ ಮತ್ತು ನೈಸ್ ಯೋಜನೆ ಪಿತಾಮಹರು ಕುಮಾರಸ್ವಾಮಿ ಮತ್ತು ದೇವೇಗೌಡರು ಎಂದು ಹೇಳುತ್ತಿದ್ದಾರೆ. ಆದರೆ, ಈ ವೇದಿಕೆಯಿಂದ ಕಾಂಗ್ರೆಸ್ ನಾಯಕರಿಗೆ ನೇರ ಸವಾಲು ಹಾಕುತ್ತೇನೆ. ಬಿಡದಿ ಟೌನ್ ಶಿಪ್ ಯೋಜನೆ ಮತ್ತು ನೈಸ್ ಯೋಜನೆಗಳ ಬಗ್ಗೆ ಏನೇನು ಆಗಿದೆ, ಶುರುವಾಗಿದ್ದೆಲ್ಲಿ? ಈಗ ಬಂದು ನಿಂತಿರುವುದು ಎಲ್ಲಿ? ಎಂಬ ಬಗ್ಗೆ ಕೂಲಂಕಶವಾಗಿ ಚರ್ಚೆ ಮಾಡಲು ತಯಾರಿದ್ದೇನೆ. ಮೊನ್ನೆ ಫ್ರೀಡಂ ಹಬ್ಬ ಮಾಡಿದರಲ್ಲಾ.. ಅಲ್ಲಿಯ ಚರ್ಚೆ ಮಾಡೋಣ. ಚರ್ಚೆ ಬಯಸುವವರು ಬಂದರೆ ನಾನು ಬರಲು ಸಿದ್ಧನಿದ್ದೇನೆ ಎಂದು ಅವರು ಚಾಲೆಂಜ್ ಮಾಡಿದರು.
ನೈಸ್ ಯೋಜನೆ ನುಂಗಲು ಹೊರಟ ಮುಖ್ಯಮಂತ್ರಿ: ಎಲ್ಲವನ್ನೂ ಸರ್ವನಾಶ ಮಾಡುತ್ತಿದೆ ಈ ಸರ್ಕಾರ. ನೈಸ್ ಭೂಮಿ ಅನ್ನು ನುಂಗಿದ್ದಾಯಿತು, ಈಗ ಬೇನಾಮಿ ಕಂಪನಿಗಳನ್ನು ಸೃಷ್ಟಿ ಮಾಡಿಕೊಂಡು ಇಡೀ ಯೋಜನೆಯನ್ನೇ ಕಬಳಿಸಲು ಹೊರಟಿದ್ದೀರಿ. ಬಿಡದಿಯಲ್ಲಿ ಫಲವತ್ತಾದ ರೈತರ ಭೂಮಿಯನ್ನು ಕಸಿದುಕೊಳ್ಳಲು ಹೊರಟಿದ್ದೀರಿ. ಎರಡು ಯೋಜನೆಗಳನ್ನು ರಿಯಲ್ ಎಸ್ಟೇಟ್ ದಂಧೆಕೋರರಿಗೆ ಒತ್ತೆಯಿಡಲು ಹೊರಟಿದ್ದೀರಿ. ಜನರ ರಕ್ತ, ಬೆವರು, ಅವರ ಕಷ್ಟದ ಬೆಲೆ ನಿಮಗೆ ಗೊತ್ತಾಗುವುದು ಹೇಗೆ? ಪಾರಂಪರಿಕ ಕಟ್ಟಡ ಕುಮಾರ ಕೃಪ ಅತಿಥಿ ಗೃಹವನ್ನೇ ಸರ್ವನಾಶ ಮಾಡಿದವರು ನೀವು. ಕೆಂಗಲ್ ಹನುಮಂತಯ್ಯ ನವರು ಕಟ್ಟಿದ ವಿಧಾನಸೌಧವನ್ನು ಹಾಳು ಮಾಡಲು ಹೊರಟವರು ನೀವು. ನಿಮ್ಮಂತವರಿಗೆ ರೈತರ ಕಷ್ಟಕಾರ್ಪಣ್ಯಗಳು ತಿಳಿಯುವುದಿಲ್ಲ ಎಂದು ಕುಮಾರಸ್ವಾಮಿ ಅವರು ಹರಿಹಾಯ್ದರು.
ನಿಮಗೆ ನಾಚಿಕೆಯಾಗಬೇಕು: ಒಂದು ಕಡೆ ವಿಧಾನಸೌಧದ ಮೆಟ್ಟಿಲುಗಳಿಗೆ ಹಣೆ ಇಟ್ಟು ನಮಸ್ಕಾರ ಮಾಡುತ್ತಿರಿ. ಇನ್ನೊಂದು ಕಡೆ ಕೆಂಗಲ್ ಅವರು ಕಟ್ಟಿದ ವಿಧಾನಸೌಧಕ್ಕೆ ಧಕ್ಕೆ ಮಾಡುತ್ತಿದ್ದೀರಿ. ಮೊನ್ನೆ ವಿಧಾನಸಭೆ ಪ್ರವೇಶಕ್ಕೆ ಮೊದಲು ಅದರ ಹೊಸಲಿಗೂ ಹಣೆ ಇಟ್ಟು ನಮಸ್ಕಾರ ಮಾಡುತ್ತಿರಿ. ನೀವು ಹೇಗಿದ್ದವರು, ನಿಮ್ಮ ಹಣೆಬರಹ ಏನು? ನೀವು ಏನು ಮಾಡುತ್ತಿದ್ದೀರಿ? ಎಂದು ಗೊತ್ತಿಲ್ಲದವರಿಗೆ ಇದೆಲ್ಲ ಆಶ್ಚರ್ಯ ಉಂಟು ಮಾಡಬಹುದು. ಆದರೆ ನಿಮ್ಮ ಒಳಹೊರಗು ಬಲ್ಲವರಿಗೆ ಇದು ಶತಮಾನದ ಸೂಜಿಗ ಎನಿಸದೆ ಇರದು ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.
ಆತ್ಮವಂಚನೆಯ ಬದುಕು ನಿಮಗೆ ಯಾಕೆ? ಮಾಡುವುದು ಒಂದು, ಹೇಳುವುದು ಇನ್ನೊಂದು. ಇಂತಹ ಆತ್ಮವಂಚನೆಯ ಬದುಕು ನಿಮಗೆ ಏಕೆ? ನಿಮ್ಮ ಕಾಲದಲ್ಲಿ ಏನೇನು ಮಾಡಿದ್ದೀರಾ ಎನ್ನುವುದು ಗೊತ್ತಿದೆ. ರೈತರನ್ನು ವಿಧಾನಸೌಧಕ್ಕೆ ಕರೆದು ಮಾತನಾಡುವ ಧೈರ್ಯ ಅಥವಾ ಯೋಗ್ಯತೆ ನಿಮಗಿಲ್ಲ. ನೀವು ದೇವೇಗೌಡರು ಮತ್ತು ನನ್ನ ಬಗ್ಗೆ ಮಾತನಾಡುತ್ತೀರಿ ಎಂದು ಕೇಂದ್ರ ಸಚಿವರು ಮುಖ್ಯಮಂತ್ರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕನಕಪುರಕ್ಕೆ ಬೆಣ್ಣೆ, ಬಿಡದಿಗೆ ಸುಣ್ಣ: ಕನಕಪುರದಲ್ಲಿ ಜಮೀನು ಮಾರಾಟ ಮಾಡಬೇಡಿ ಎಂದು ಹೇಳುತ್ತೀರಿ. ಆದರೆ ಬಿಡದಿಯಲ್ಲಿ ಭೂಮಿಯನ್ನು ಕಿತ್ತುಕೊಳ್ಳಲು ಬರುತ್ತೀರಿ. ಬಿಡದಿ ರೈತರು ಏನು ಪಾಪ ಮಾಡಿದ್ದರು? ಮಿಸ್ಟರ್ ಶಿವಕುಮಾರ್, ಇವತ್ತು ಬಿಡದಿ ರೈತರು ಕೃಷಿಭೂಮಿ ಹೊರಟಿದ್ದೀರಾ.. ಈ ಪಾಪಕ್ಕೆ ನೀವು ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ. ಹೌದು, ಬಿಡದಿ ಟೌನ್ ಶಿಪ್ ನನ್ನ ಕನಸಿನ ಕೂಸು. ಇದರಲ್ಲಿ ಎರಡು ಮಾತೇ ಇಲ್ಲ. ಅದೇ ರೀತಿ ನೈಸ್ ಯೋಜನೆ ದೇವೇಗೌಡರ ಕನಸಿನ ಕೂಸು ಎಂಬುವುದರಲ್ಲಿ ಅಸತ್ಯವಿಲ್ಲ. ಆದರೆ ಆ ಎರಡು ಕೂಸುಗಳನ್ನು ನೀವು ಹೀಗೆಲ್ಲಾ ಬೆಳೆಸಿ ಹಾಳು ಮಾಡಿದಿರಿ ಎಂಬುದು ನಮಗಷ್ಟೇ ಅಲ್ಲ, ಇಡೀ ರಾಜ್ಯಕ್ಕೆ ಗೊತ್ತು. ಇಡೀ ದೇಶವೇ ಈ ದರೋಡೆಯನ್ನು ನೋಡುತ್ತಿದೆ. ಇತ್ತೀಚೆಗೆ ರಾಜ್ಯ ಹೈಕೋರ್ಟ್ ಏನೇನು ಅಭಿಪ್ರಾಯ ವ್ಯಕ್ತಪಡಿಸಿದೆ ಎಂಬುದು ನಿಮಗೆ ಗೊತ್ತಿಲ್ಲವೇ ಎಂದು ಸಚಿವ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯನ್ನು ತೀಕ್ಷ್ಣವಾಗಿ ಪ್ರಶ್ನಿಸಿದರು.
ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ.ಶಿವಕುಮಾರ್? ಬೇನಾಮಿ ಕಂಪನಿಗಳನ್ನು ಸೃಷ್ಟಿ ಮಾಡಿಕೊಂಡು ಹೇಗೆ ಆ ಯೋಜನೆಯನ್ನು ಟೇಕ್ ಓವರ್ ಮಾಡಲು ಹೊರಟಿದ್ದೀರಿ ಎಂಬುದು ನನಗೆ ಗೊತ್ತಿಲ್ಲದ ವಿಷಯವಲ್ಲ. ರೈತರ ಭೂಮಿಯನ್ನು ಬೇರೆ ಕಂಪನಿಗೆ ಕೊಡಲು ರೆಡ್ ಕಾರ್ಪೆಟ್ ಹಾಕಿದ್ದು ಯಾರಪ್ಪ ಡಿ.ಕೆ.ಶಿವಕುಮಾರ್? ಅಂದು ಬಿಎಂಐಸಿಪಿಗೆ ಅಧ್ಯಕ್ಷರಾಗಿ ನೀವು ಏನೆಲ್ಲ ಅಕ್ರಮಗಳು ಎಸೆಗಿದಿರಿ, ಯಾರು ಯಾರ ಜೊತೆ ಶಾಮೀಲಾಗಿ ಎಷ್ಟೆಲ್ಲಾ ದಂಧೆಗಳನ್ನು ನಡೆಸಿದಿರಿ ಎಂಬುದು ನನಗೆ ಗೊತ್ತಿದೆ. ಚೌಕಟ್ಟು ಒಪ್ಪಂದ (ಫ್ರೇಮ್ ವರ್ಕ್ ಅಗ್ರಿಮೆಂಟ್) ಮತ್ತು ಯೋಜನಾ ತಾಂತ್ರಿಕ ಒಪ್ಪಂದವನ್ನು ಉಲ್ಲಂಘಿಸಿ ಎಷ್ಟೆಲ್ಲ ಅಕ್ರಮಗಳನ್ನು ಎಸಗಿದಿರಿ ಎಂಬುದು ಗೊತ್ತಿದೆ. ಇಂತಹ ಕೆಟ್ಟ ಯೋಗ್ಯತೆ ಹೊಂದಿರುವ ನೀವು ನನ್ನನ್ನು ಮತ್ತು ದೇವೇಗೌಡರನ್ನು ಪ್ರಶ್ನೆ ಮಾಡುವ ಧೈರ್ಯ ತೋರಿಸುತ್ತೀರಿ. ನಾಚಿಕೆಯಾಗಲ್ಲವೇ ನಿಮಗೆ ಎಂದು ಕೇಂದ್ರ ಸಚಿವರು ಕಿಡಿಕಾರಿದರು.
ಚರ್ಚೆಗೆ ಬನ್ನಿ ಎಂದು ಡಿಕೆಶಿಗೆ ಚಾಲೆಂಜಿಂಗ್: ಬನ್ನಿ ಚರ್ಚೆಗೆ ಸಿದ್ದ ಬನ್ನಿ ಮಾತಾಡೋಣ. ಬೆಂಗಳೂರು ನಗರವನ್ನು ನೀವು ನಗರಾಭಿವೃದ್ಧಿ ಸಚಿವರಾಗಿ ಸಿಂಗಾಪುರ ಮಾಡಿದ್ದನ್ನು ನೋಡಿದ್ದೇನೆ. ಹಾಗೆಯೇ ಈಗ ಬ್ರಾಂಡ್ ಬೆಂಗಳೂರು ಮಾಡಲು ಹೊರಟಿದ್ದೀರಿ. ಆದರೆ ಅದನ್ನು ಹೇಗೆಲ್ಲಾ ದುರ್ಬಳಿಕೆ ಮಾಡಿಕೊಂಡು ಆಸ್ತಿ ಲೂಟಿ ಹೊಡೆಯುತ್ತಿದ್ದೀರಿ ಎಂಬುದನ್ನು ಎಲ್ಲರೂ ನೋಡುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತ ಎಷ್ಟು ಜಮೀನು ಲೂಟಿ ಹೊಡೆದಿದ್ದೀರಿ ಎಂಬ ಬಗ್ಗೆ ಚರ್ಚೆ ಮಾಡೋಣ ಬನ್ನಿ. ದೇವೇಗೌಡರು ರಾಜಕೀಯಕ್ಕೆ ಬಂದಾಗ ನೀವು ಎಲ್ಲಿದ್ದೀರಿ? ದೇವೇಗೌಡ್ರು ಮನಸ್ಸು ಮಾಡಿದಿದ್ದರೆ ಅರ್ಧ ಬೆಂಗಳೂರು ನಗರವನ್ನೇ ಖರೀದಿ ಮಾಡಬಹುದಿತ್ತು. ಆದರೆ ಅವರ ರಾಜಕೀಯ ದಾರಿಯ ಬೇರೆಯಾಗಿತ್ತು ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಲುಲು ಮಾಲ್ ಕೆಳಗಿನ ಹೈಟೆನ್ಶನ್ ವೈರ್ ಬಗ್ಗೆ ಹೇಳಿದ ಹೆಚ್ಡಿಕೆ: ಜೆಡಿಎಸ್ ರೈತರ ಪಕ್ಷ. ರಿಯಲ್ ಎಸ್ಟೇಟ್, ದಂಧಕೋರರು, ಬ್ರೋಕರ್, ದಳ್ಳಾಳಿ, ಭೂಕಳ್ಳರಿಂದ ಕಟ್ಟಿದ ಪಕ್ಷ ಅಲ್ಲ. ನನ್ನನ್ನು ಕರೆಂಟ್ ಕಳ್ಳ ಎಂದು ಹೇಳುತ್ತೀರಿ. ಲುಲು ಮಾಲ್ ಕಟ್ಟಿದೆಯಲ್ಲಪ್ಪ! ಅದರ ಕೆಳಗಡೆ ಹೈಟೆನ್ಶನ್ ವೈರ್ ಹೋಗಿದೆಯಲ್ಲ.. ಅದನ್ನು ಭೂಮಿಯಲ್ಲಿ ಹೂತು ಹಾಕಲು ಎಷ್ಟು ಅಕ್ರಮ ಮಾಡಿದ್ದೀರಿ ಎಂಬುದನ್ನು ಸ್ವಲ್ಪ ಹೇಳುವಿರಾ? ನನ್ನ ಪೋಸ್ಟರ್ ಅಂಟಿಸುವುದಕ್ಕೆ ಚಿಂತಾಮಣಿ ಮಾಡುತ್ತೀರಿ, ಇಂತಹ ಮಹಾನ್ ಅಕ್ರಮಗಳನ್ನು ಎಸಗಿರುವ ನಿಮ್ಮ ವಿರುದ್ಧ ಏನೇನೋ ಅಂಟಿಸಬೇಕು ಎಂದು ಸ್ವಲ್ಪ ಹೇಳುತ್ತೀರಾ? ಎಂದು ಕುಮಾರಸ್ವಾಮಿ ಗುಡುಗಿದರು.
ನೈಸ್ ಬಗ್ಗೆ ಹೈಕೋರ್ಟ್ ಕಟುವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆಯಲ್ಲ, ಇದರ ಬಗ್ಗೆ ನಿಮ್ಮ ಮಂತ್ರಿಗಳು ನಿಮಗೆ ಹೇಳಿಲ್ಲವಾ ಮಿಸ್ಟರ್ ಡಿ.ಕೆ. ಶಿವಕುಮಾರ್.. ಪ್ರತಿಯೊಂದುಕ್ಕೂ ನಾ ಮುಂದು ತಾ ಮುಂದು ಹೇಳಿಕೆ ಕೊಡುವ ಪ್ರಿಯಾಂಕ ಖರ್ಗೆ, ಆಮೇಲೆ ಕೃಷ್ಣಬೈರೇಗೌಡರು ಈ ಬಗ್ಗೆ ಮಾತನಾಡದೆ ಮೌನ ವಹಿಸಿದ್ದಾರೆ? ಎಂದು ಪ್ರಶ್ನಿಸಿದ ಕೇಂದ್ರ ಸಚಿವರು; ಯೋಜನೆಗೆ ನೈಸ್ ಕಂಪನಿ ಒಂದು ರೂಪಾಯಿ ಹಣವನ್ನು ಹೂಡಿಕೆ ಮಾಡಿಲ್ಲ. ಜನರಿಂದ ಕಸಿದುಕೊಂಡ ಭೂಮಿಯನ್ನು ಐಸಿಐಸಿಐ ಬ್ಯಾಂಕ್ ನಲ್ಲಿ ಒತ್ತೆ ಇಟ್ಟು ಹಣ ಪಡೆದು ಅರೆಬರೆ ಕೆಲಸ ಮಾಡಿದೆ. ಇದು ಇಡೀ ಭಾರತವೇ ಕಂಡು ಕೇಳರಿಯದ ಮಹಾನ್ ಅಕ್ರಮ ಎಂದು ಹೇಳಿದರು.
ಶೋಭಾ ಡೆವಲಪರ್ಸ್ ಅಪಾರ್ಟ್ಮೆಂಟ್ ಹೇಗೆ ಬಂತು ಎಂಬುದನ್ನು ಸ್ವಲ್ಪ ಹೇಳುವಿರಾ? ನೈಸ್ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಬಳಸುವ ಹಾಗೆಯೇ ಇಲ್ಲ. ಆದರೆ ಶೋಭಾ ಡೆವಲಪರ್ಸ್ ಅಪಾರ್ಟ್ಮೆಂಟ್ ಹೇಗೆ ಬಂತು ಎಂಬುದನ್ನು ಸ್ವಲ್ಪ ಹೇಳುವಿರಾ ಡಿ.ಕೆ.ಶಿವಕುಮಾರ್? ಇದು ಯಾರಪ್ಪನ ಆಸ್ತಿ? ಇದೇನು ನಿಮ್ಮಪ್ಪ ಕೆಂಪೇಗೌಡರು ಮಾಡಿದ್ದ ಆಸ್ತಿನಾ? ಇದಕ್ಕೆ NOC ಕೊಟ್ಟಿದ್ದು ಯಾರು? ಆ ಗೌರಮ್ಮ ಮತ್ತು ಡಿ.ಕೆ. ಸುರೇಶ್ ಅನ್ನುವವರು ಯಾರಪ್ಪ? ಆ ನೈಸ್ ನವನು ಅವರಿಬ್ಬರಿಗೆ ಅದು ಹೇಗೆ NOC ಕೊಡಲು ಸಾಧ್ಯ? ನಿಮ್ಮ ಯೋಗ್ಯತೆ ಎಲ್ಲರಿಗೂ ಗೊತ್ತಿದೆ. ಮುಖ್ಯಮಂತ್ರಿ ಆಗಿದ್ದೀರಿ, ಕೊನೆಪಕ್ಷ ಒಳ್ಳೆಯ ಕೆಲಸಗಳನ್ನು ಮಾಡಿ ಎಂದು ಡಿಕೆಶಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನಾನು ಈಗಲೂ ಹೇಳುತ್ತಿದ್ದೇನೆ. ಬಿಡದಿ ವಿಷಯವನ್ನು ಭೈರಮಂಗಲದಲ್ಲಿ ರೈತರ ಮುಂದೆ ಕೂತು ಚರ್ಚೆ ಮಾಡೋಣ ಬನ್ನಿ. 2006-07ರಲ್ಲಿ ಬಿಡದಿ ವಿಚಾರದಲ್ಲಿ ನೀವು ಏನು ಭಾಷಣ ಮಾಡಿದ್ದೀರಿ ಎಂಬುದನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ನಿಮ್ಮ ಪಕ್ಷದ ಮಾಜಿ ಮಂತ್ರಿ ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಸತ್ಯಶೋಧನಾ ಸಮಿತಿ ಏನು ವರದಿ ನೀಡಿದೆ ಎಂಬುದನ್ನು ದಯವಿಟ್ಟು ಓದಿಕೊಳ್ಳಿ. ಅದನ್ನು ಟ್ರೀಟ್ ಮಾಡಿ, ಬೇಕಾದರೆ ಅದನ್ನೇ ಪೋಸ್ಟರ್ಗಳಲ್ಲಿ ಮುದ್ರಿಸಿ, ಗೋಡೆಗೆ ಅಂಟಿಸಿ. ಬೇಡ ಎಂದವರು ಯಾರು? ಎಂದು ಕುಮಾರಸ್ವಾಮಿ ಅವರು ಡಿಕೆಶಿಗೆ ಟಾಂಗ್ ಕೊಟ್ಟರು.