ಡಿ.ಕೆ ಶಿವಕುಮಾರ್ 
ರಾಜ್ಯ

ಬೆಂಗಳೂರಿಗೆ ನೀರು ಒದಗಿಸುವುದು ಸವಾಲಿನ ಕೆಲಸ: ಯೌವನ, ಹಣ, ಅಧಿಕಾರ ಒಂದೇ‌ ಕಡೆ ಸೇರಬಾರದು; ಡಿಕೆ ಶಿವಕುಮಾರ್

ರಾಜಕೀಯದಲ್ಲಿ ಅಧಿಕಾರ ದುರಪಯೋಗ ಆಗಬಾರದು. ರಾಜ್ಯದ ಹಿತಾಸಕ್ತಿಗೆ ಎಲ್ಲರೂ ಬಹಳ ಮುಖ್ಯ. ವಿರೋಧ ಪಕ್ಷಗಳ ಟೀಕೆ, ಟಿಪ್ಪಣಿಗಳು, ನಮ್ಮವರ ಸಲಹೆಗಳು ಎಲ್ಲವೂ ಬೇಕು. ನಾವೆಲ್ಲ ಸೇರಿ ಈ ರಾಜ್ಯದ ಹಿತಾಸಕ್ತಿಯಾಗಿ ಕೆಲಸ ಮಾಡೋಣ. ಇಬ್ಬರ ಉದ್ದೇಶ ಒಂದೇ.

ಬೆಂಗಳೂರು: ಪ್ರಧಾನಿಗಳು ದೇಶವನ್ನು ಆರ್ಥಿಕ ಶಕ್ತಿಯನ್ನಾಗಿಸಬೇಕು ಅಂದರೆ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಒಗ್ಗಟ್ಟಾಗಿದ್ದರೆ ಮಾತ್ರ ಸಾಧ್ಯ. ನಮ್ಮಲ್ಲಿರುವ ಪ್ರತಿಭಾ ಸಾಮರ್ಥ್ಯ ಅಸಮಾನ್ಯ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಉಪಸಭಾಧ್ಯಕ್ಷರ ಆಯ್ಕೆಯ ನಂತರ ವಿಧಾನಸಭೆಯಲ್ಲಿ ಸಿಎಂ ಮಂಗಳವಾರ ಮಾತನಾಡಿದರು. ಪ್ರಧಾನಿಗಳು ಮೈಸೂರಿಗೆ ಬಂದಿದ್ದಾಗ. ಅವರ ಬಳಿ, ರಾಜ್ಯದ ಹಿತಕ್ಕಾಗಿ ಏನೇನು ಕೆಲಸ ಆಗಬೇಕು ಎನ್ನುವುದನ್ನ ಹೇಳಿದ್ದೇನೆ. ಇತಿಹಾಸದಲ್ಲಿ ಏನೇನೆಲ್ಲಾ ಆಗಿದೆ ಎನ್ನುವುದನ್ನು ಅವರ ಗಮನಕ್ಕೆ ತಂದಿದ್ದೇನೆ. ನಮ್ಮಲ್ಲಿರುವ ಟ್ಯಾಲೆಂಟ್ ಪೂಲ್ ಬಗ್ಗೆ, ಅದರ ಶಕ್ತಿಯ ಬಗ್ಗೆ ಅವರ ಗಮನ ಸೆಳೆದಿದ್ದೇನೆ" ಎಂದರು.

ಅಧಿಕಾರ ಯಾವತ್ತಿಗೂ ಶಾಶ್ವತ ಅಲ್ಲ ಅನ್ನೋ ಸತ್ಯ ನನಗೆ ತಿಳಿದಿದೆ. ನನ್ನ ಪಾಲಿಗೆ ದೊರೆತ ಸ್ಥಾನಕ್ಕೆ ಗೌರವ ಸಲ್ಲಿಸುತ್ತಾ ಬಂದಿದ್ದರಿಂದ ಇವತ್ತು ಈ ಸ್ಥಾನದಲ್ಲಿ ಕುಳಿತಿದ್ದೇನೆ. ನನ್ನ ಹೃದಯ ನಿಷ್ಕಲ್ಮಶವಾಗಿದೆ. ಮನಸ್ಸಿನಲ್ಲಿ ಯಾವುದೇ ದ್ವೇಷಾಸೂಯೆಗಳು ಇಲ್ಲದೆ ಈ ನಾಡಿನ ಜನರ ಸೇವೆ ಮಾಡಬೇಕು ಅಂತ ಸಂಕಲ್ಪ ಮಾಡಿದ್ದೇನೆ" ಎಂದರು.

ರಾಜಕೀಯದಲ್ಲಿ ಅಧಿಕಾರ ದುರಪಯೋಗ ಆಗಬಾರದು. ರಾಜ್ಯದ ಹಿತಾಸಕ್ತಿಗೆ ಎಲ್ಲರೂ ಬಹಳ ಮುಖ್ಯ. ವಿರೋಧ ಪಕ್ಷಗಳ ಟೀಕೆ, ಟಿಪ್ಪಣಿಗಳು, ನಮ್ಮವರ ಸಲಹೆಗಳು ಎಲ್ಲವೂ ಬೇಕು. ನಾವೆಲ್ಲ ಸೇರಿ ಈ ರಾಜ್ಯದ ಹಿತಾಸಕ್ತಿಯಾಗಿ ಕೆಲಸ ಮಾಡೋಣ. ಇಬ್ಬರ ಉದ್ದೇಶ ಒಂದೇ. ಜನಸೇವೆ" ಎಂದರು.

"ಬಿಡಿದ ವಿಚಾರದಲ್ಲಿ ಚರ್ಚೆ ಮಾಡೋಣ ಅಂತ ಹೇಳಿದ್ದೀರಿ. ಸಂತೋಷ. ತೊಂದರೆ ಕೊಡುವ ಜಾಯಮಾನ ನನ್ನದಲ್ಲ. ಕುಮಾರಸ್ವಾಮಿ ಅವರ ಆವತ್ತಿನ ಬಿಡದಿ ಟೌನ್ ಷಿಪ್ ನಿರ್ಧಾರನ ನಾನು ಒಪ್ಪಿದ್ದೆ. 2028ಕ್ಕೆ ಜನ ಏನು ತೀರ್ಮಾನ ಮಾಡುತ್ತಾರೋ ಅದನ್ನು ನೀವು, ನಾವು ಇಬ್ಬರೂ ಒಪ್ಪಿಕೊಳ್ಳಬೇಕು. ಇಡೀ ದೇಶದಲ್ಲಿ ಸಮಸ್ಯೆಗಳು ಬೇಕಾದಷ್ಟು ಇವೆ. ನಾವು ಟೀಮ್ ಕರ್ನಾಟಕವಾಗಿ ಅದರ ಪರಿಹಾರಕ್ಕಾಗಿ ಒಟ್ಟಾಗಿ ಹೋರಾಟ ಮಾಡೋಣ" ಎಂದರು.

ಕುಮಾರಸ್ವಾಮಿ ಬಿಡದಿ ಸೇರಿದಂತೆ ಐದು ಟೌನ್ ಶಿಪ್ ಮಾಡಲು ಮುಂದಾದರು. ಅವರ ಆಲೋಚನೆ ತಪ್ಪಲ್ಲ. ಆದರೆ ಅದನ್ನು ಮಾಡಲು ಯಾಕೆ ಸಾಧ್ಯವಾಗಲಿಲ್ಲ. ಮಹಾರಾಷ್ಟ್ರ ಸಿಎಂ 80 ಸಾವಿರ ಎಕರೆ ಭೂಸ್ವಾಧೀನ ಮಾಡಿದ್ದಾರೆ. ಮೋದಿ ಅವರು ಗಿಫ್ಟ್ ಸಿಟಿ ಮಾಡುತ್ತಿದ್ದಾರೆ.

ನಮಗೂ ನೀಡಿ ಎಂದು ಕೇಳಿದೆ, ಕೊಡಲಿಲ್ಲ. ಆಂಧ್ರ ಸಿಎಂ ಕೂಡ ಹೊಸ ನಗರ ನಿರ್ಮಿಸುತ್ತಿದ್ದಾರೆ. ನಮ್ಮಲ್ಲಿ ಎಲೆಕ್ಟ್ರಾನಿಕ್ ಸಿಟಿ, ಐಟಿಪಿಎಲ್ ಕೂಡ ರೈತರ ಜಮೀನು. ಪೆರಿಫರಲ್ ರಿಂಗ್ ರಸ್ತೆ ಕೂಡ ರೈತರ ಜಮೀನು. ಈ ಯೋಜನೆಗಳು ದೂರದೃಷ್ಟಿ ಯೋಜನೆಗಳು. ನೈಸ್ ರಸ್ತೆ ಇಲ್ಲವಾಗಿದ್ದಾರೆ ಬೆಂಗಳೂರು ನಗರ ಸಂಚಾರ ಪರಿಸ್ಥಿತಿ ಏನಾಗುತ್ತಿತ್ತು ನೀವೇ ಹೇಳಿ. ಯೋಜನೆ ಲೋಪದೋಷ ವಿರುದ್ಧ ಕ್ರಮ ಕೈಗೊಳ್ಳೋಣ" ಎಂದರು.

"ಇಡೀ ದೇಶದಲ್ಲಿ ರಾಜಸ್ಥಾನ ಬಳಿಕ ಅತಿ ಹೆಚ್ಚು ಒಣ ಭೂಮಿ ಇರುವ ರಾಜ್ಯ ಕರ್ನಾಟಕ. ನಾವು ರೈತರ ಬಗ್ಗೆ ಆಲೋಚನೆ ಮಾಡಬೇಕು, ಅವರನ್ನು ಬದುಕಿಸಬೇಕು. ಹೀಗಾಗಿ ಅತ್ಯಾಧುನಿಕ ತಂತ್ರಜ್ಞಾನ ಮೂಲಕ ರೈತರಿಗೆ ಮಾರ್ಗದರ್ಶನ ನೀಡಲು ಮುಂದಾಗಿದ್ದೇವೆ. ಬೆಂಗಳೂರಿನ ನಗರ ವಿದ್ಯಾರ್ಥಿಗಳಿಗೆ ಹಳ್ಳಿ, ರೈತನ ಬದುಕು ಪರಿಚಯಿಸಬೇಕು ಎಂದು ಕೃಷಿ ವಿವಿಗೆ ಹೇಳಿ 3 ದಿನ ಪ್ರವಾಸದ ಪಠ್ಯಕ್ರಮ ಕಾರ್ಯಕ್ರಮ ಏರ್ಪಡಿಸಲಾಗುವುದು" ಎಂದು ತಿಳಿಸಿದರು.

ನಮ್ಮದು ಸಿದ್ದರಾಮಯ್ಯ ಅವರ ಸರ್ಕಾರದ ಮುಂದುವರಿದ ಭಾಗ. ಹೊಸ ಆಲೋಚನೆ ಹೊಂದಿದ್ದೇವೆ. ಈ ಹಿಂದೆ ಕುಮಾರಸ್ವಾಮಿ, ಯಡಿಯೂರಪ್ಪ, ಬೊಮ್ಮಾಯಿ ಅವರ ಆಲೋಚನೆಯನ್ನು ನಾವು ಬಿಡದೆ ಮುಂದುವರಿಸುತ್ತೇವೆ. ಕುಮಾರಸ್ವಾಮಿ ಅವರ ಬಿಡದಿ, ದೇವೇಗೌಡರ ನೈಸ್ ಯೋಜನೆಯನ್ನು ನಾವು ಮುಂದುವರಿಸುತ್ತೇವೆ. ಈ ಯೋಜನೆಗಳಲ್ಲಿ ತಪ್ಪಾಗಿದ್ದರೆ ಸರಿ ಮಾಡೋಣ" ಎಂದರು.

ಈ ಮಧ್ಯೆ ಬಿಜೆಪಿ ಶಾಸಕ ಸುನೀಲ್ ಕುಮಾರ್, ನಿಮ್ಮ ಈ ಯೋಜನೆ ಮಾಡಲು ನಿಮ್ಮ ಪಕ್ಷದವರೇ ಬಿಡಲ್ಲ ಎಂದಾಗ, "ನೋಡಿ ಸುನೀಲ್, ನನಗೆ ಇತಿಹಾಸ ಓದಕ್ಕೆ ಬರೆಯುವುದಕ್ಕೆ ಇಷ್ಟ ಇಲ್ಲ. ಇತಿಹಾಸ ಸೃಷ್ಟಿಸುವುದಕ್ಕೆ ಹೆಚ್ಚು ಆಸಕ್ತಿ ಇದೆ. ನಾನು ನನ್ನ ಕೈಲಾದ ಪ್ರಯತ್ನ ಮಾಡುವೆ. ಯಾವುದು ಸುಲಭವಲ್ಲ. ಅಧಿಕಾರಿಗಳು ಸುಲಭವಾಗಲು ಬಿಡಲ್ಲ, ಕೊರ್ಟ್ ಗಳಲ್ಲಿ ಒಂದಷ್ಟು ಪ್ರಕರಣ ಇವೆ" ಎಂದರು.

"ನೀವು ಏನು ಟೀಕೆ ಮಾಡುತ್ತೀರೋ ಮಾಡಿ. ಆದರೆ ಮುಂದಿನ 25 ವರ್ಷಗಳಿಗೆ ಅಗತ್ಯವಾದ ನೀಲನಕ್ಷೆ ರೂಪಿಸೋಣ. ನಾವು ಇಲ್ಲಿಗೆ ಬಂದಿರೋದು ಜನರ ಸೇವೆಗಾಗಿ. ಬಿಜೆಪಿ ಕಾಲದಲ್ಲಿ ಸಾಕಾಲ ಎಂದು ಮಾಡಿದ್ದಿರಿ. ನಾನು ಅದಕ್ಕೆ ಹೊಸ ರೂಪ ನೀಡಿ ಪ್ರಜಾಸೇವೆ ಇಲಾಖೆ ಆರಂಭಿಸುತ್ತಿದ್ದೇವೆ. ವಿಧಾನಸೌಧಕ್ಕೆ ಬರಲು ಆಗದ ಜನರ ಬಳಿಗೆ ಸರ್ಕಾರ ತೆಗೆದುಕೊಂಡು ಹೋಗುವ ಉದ್ದೇಶ ನಮ್ಮದು. ನಮ್ಮ ಬಳಿ ಜನರ ಸಮಸ್ಯೆಯೊಂದಿಗೆ ಬರುತ್ತಾರೆ. ಅವರಿಗೆ ಸಾಧ್ಯವಾದಷ್ಟು ಪರಿಹಾರ ನೀಡಲು ಪ್ರಯತ್ನಿಸುತ್ತೇವೆ" ಎಂದರು.

"ಸಂವಿಧಾನ ಜಾರಿ ಆದಾಗ ಅದು ಉತ್ತಮವಾಗಿರುತ್ತದೆ. ನನ್ನ ಈ ಅಧಿಕಾರವನ್ನು ಯಾರ ವಿರುದ್ಧವು ಬಳಸುವುದಿಲ್ಲ. ಅಧಿಕಾರದಲ್ಲಿದ್ದಾಗ ನಾವು ಹೆಚ್ಚು ಗೆಳೆಯರು ಅಥವಾ ಹೆಚ್ಚು ಶತ್ರುಗಳನ್ನು ಮಾಡಿಕೊಳ್ಳಬಹುದು. ನಾನು ಸ್ನೇಹಿತರನ್ನು ಗಳಿಸಲು ಬಯಸುವೆ. ನನ್ನ ಕೈಲಿ ಸಾಧ್ಯವಾದಷ್ಟು ಸಹಾಯ ಮಾಡುವೆ. ದೇವರು ನನಗೆ ಹಾಗೂ ನನ್ನ ಕುಟುಂಬಕ್ಕೆ ಸಾಕಷ್ಟು ಶಕ್ತಿ ನೀಡಿದ್ದಾನೆ. ನಾನು ಇಲ್ಲಿ ಸಿಎಂ ಆಗಿರುವುದು" ಎಂದು ಹೇಳಿದರು.

ಬೆಂಗಳೂರಿಗೆ ನೀರು ಒದಗಿಸುವುದು ಸವಾಲಿನ ಕೆಲಸ. ಅದನ್ನು ನಾವು ಮಾಡುತ್ತಿದ್ದೇವೆ. ಹಿಂದೆ ನಾನು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದಾಗ ಹೆಬ್ಬಾಳದ ನಂತರದ ಪ್ರದೇಶಗಳಿಗೆ ಜಲಮಂಡಳಿಯಿಂದ ನೀರು ಒದಗಿಸುವುದು ಬೇಡ ಅಂತ ತೀರ್ಮಾನಿಸಿ, ನಾನೇ ಆದೇಶಕ್ಕೆ ಸಹಿ ಹಾಕಿದ್ದೆ. ಆದರೆ ಇಂದು ಬೆಂಗಳೂರು ಅಗಾಧವಾಗಿ ಬೆಳೆದಿದೆ. ಹೆಸರಘಟ್ಟ ಕೆರೆ, ಹೊಸಕೋಟೆ ಕೆರೆ, ತಿಪ್ಪಗೊಂಡನಹಳ್ಳಿಯಂಥ ಐದಾರು ಕೆರೆಗಳನ್ನು ಅಭಿವೃದ್ಧಿಗೊಳಿಸಿ, ಅಂತರ್ಜಲ ಹೆಚ್ಚಿಸಿ ಬೆಂಗಳೂರು ಜನರ ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ಪ್ರಯತ್ನಕ್ಕೆ ನಮ್ಮ ಸರ್ಕಾರ ಕೈಹಾಕುತ್ತಿದೆ" ಎಂದರು.

ಯೌವನ, ಹಣ, ಅಧಿಕಾರ ಒಂದೇ‌ ಕಡೆ ಸೇರಬಾರದು

"ಯೌವನ, ಹಣ, ಅಧಿಕಾರ ಈ ಮೂರು ಸಂಗತಿಗಳು ಒಂದೇ ಕಡೆ ಸೇರಬಾರದು ಎಂದು ಹಿರಿಯರು ಅಂದೇ‌ ನನಗೆ ಕಿವಿಮಾತು ಹೇಳಿದ್ದರು" ಎಂದು ವಿಚಾರವನ್ನು ಮೆಲುಕು ಹಾಕಿದರು.

"ನಾನು ವಿದ್ಯಾಭ್ಯಾಸ ಮಾಡಲು ಬೆಂಗಳೂರಿಗೆ ಬಂದರೂ ರಾಜಕೀಯ ಮಾಡಲೆಂದೇ ಇಲ್ಲಿಗೆ ಬಂದವನು. ಪಿಯು ಓದುವಾಗಲೇ ಚುನಾವಣೆಗೆ ನಿಂತಿದ್ದೆ. ನಂತರ ಡಿಗ್ರಿ ಓದುವಾಗ ಎಂಎಲ್ ಎ ಸ್ಥಾನಕ್ಕೆ ಅವಕಾಶ ಸಿಕ್ಕಿತು. ಬಂಗಾರಪ್ಪ ಅವರು ಚಿಕ್ಕ ವಯಸ್ಸಿನಲ್ಲಿಯೇ ನನ್ನ ಮಂತ್ರಿ ಮಾಡಿದರು. ಆಗ ಅನೇಕರು ಹೇಳುತ್ತಿದ್ದರು. ಈ ಸ್ಥಾನ ಶಾಶ್ವತವಲ್ಲ ಎಂದು. ನನಗೆ ಮದುವೆ ಸಹ ಆಗಿರಲಿಲ್ಲ. ನಾನು ಮಂತ್ರಿಯಾಗಿ ಅಧಿಕಾರವಹಿಸಿಕೊಂಡ ದಿನವೇ ಅನಿಸಿತು. ಅಧಿಕಾರ ಶಾಶ್ವತವಲ್ಲ. ದೇವರು ಆಗಲೇ ಆರ್ಥಿಕ ಶಕ್ತಿ ನೀಡಿದ್ದ" ಎಂದರು.

"ನಮ್ಮ ಸಭಾಧ್ಯಕ್ಷರು ಹಾಗೂ ಉಪ ಸಭಾಧ್ಯಕ್ಷರ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ನಾವೆಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡೋಣ. ಕರ್ನಾಟಕವನ್ನು ಬಲಿಷ್ಠ ಮಾಡಿ ಭಾರತ ಬೆಳೆಯುವಂತೆ ಮಾಡೋಣ. ವೈದ್ಯ ಅವರು ಶುದ್ಧ ಮನಸ್ಸಿನ ಮಿತ್ರ. ಸಮುದ್ರದಲ್ಲಿ ಈಜುವ ಶಕ್ತಿ ಇದೆ ಅವರಿಗೆ. ಪ್ರಕೃತಿ ನಾಡಿನಲ್ಲಿ ಬೆಳೆದ ಸ್ನೇಹಿತ.. ಅಲ್ಲಿನ ಪ್ರಕೃತಿ ಸಂಪತ್ತು ಬಳಸಿಕೊಳ್ಳಲು ಸಂಪುಟದಲ್ಲಿ ತೀರ್ಮಾನ ಮಾಡುತ್ತೇವೆ" ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ: ನಕಲಿ ಪಿಂಚಣಿದಾರರಿಗೆ ಸರ್ಕಾರ ಶಾಕ್; 18 ಲಕ್ಷ ಖಾತೆಗಳು ತಾತ್ಕಾಲಿಕ ಸ್ಥಗಿತ, ವಂಚನೆಯಲ್ಲಿ ಬೆಂಗಳೂರೇ ನಂ.1..!

ಕೋಲ್ಕತ್ತಾದ ಹೊಟೇಲ್ ನಲ್ಲಿ ಭೀಕರ ಅಗ್ನಿ ಅವಘಡ: 9 ಮಂದಿ ಸಾವು, 6 ಜನರಿಗೆ ಗಾಯ-Video

ಕ್ಷಿಪಣಿ ದಾಳಿ ಆರೋಪ: Iranಗೆ UAE ಶಾಕ್, ಎಲ್ಲಾ ವ್ಯಾಪಾರ-ವಾಣಿಜ್ಯ ವಹಿವಾಟು ಸಂಪೂರ್ಣ ಸ್ಥಗಿತ..!

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್'ಗೆ VIP ಟ್ರೀಟ್‌ಮೆಂಟ್?: ಕಾನೂನಿನ ಮುಂದೆ ಎಲ್ಲರೂ ಒಂದೇ, ಜೈಲಿನಲ್ಲಿ ಯಾರಿಗೂ ವಿಶೇಷ ಸೌಲಭ್ಯವಿಲ್ಲ; ಸರ್ಕಾರ ಸ್ಪಷ್ಟನೆ