ಆರ್ ಅಶೋಕ್  
ರಾಜ್ಯ

ಸಚಿವ ನಾಗೇಂದ್ರ ವಿರುದ್ಧ 31 ಪ್ರಕರಣಗಳಿವೆ, 3 ಕೇಸ್ ಗಳಲ್ಲಿ CBI ಚಾರ್ಜ್‌ಶೀಟ್‌ ಸಲ್ಲಿಸಿದೆ: ಆರ್‌.ಅಶೋಕ್‌

ನಾಗೇಂದ್ರ ವಿರುದ್ಧ ಯಾವುದೇ ಪ್ರಕರಣ ಇಲ್ಲ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಸದನವನ್ನು ದಾರಿ ತಪ್ಪಿಸಿದ್ದಾರೆ. ಒಟ್ಟು 31 ಪ್ರಕರಣಗಳ ಪೈಕಿ ಮೂರು ಪ್ರಕರಣಗಳಲ್ಲಿ ಸಿಬಿಐ ನಾಗೇಂದ್ರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ.

ಬೆಂಗಳೂರು: ಸಚಿವ ಬಿ. ನಾಗೇಂದ್ರ ವಿರುದ್ಧ ಯಾವುದೇ ಪ್ರಕರಣದಲ್ಲಿ ಆರೋಪಪಟ್ಟಿ ದಾಖಲಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಅವರು ಹೇಳಿಕೆ ನೀಡಿದ ಬೆನ್ನಲ್ಲೇ, ಬಿಜೆಪಿ ಹಿರಿಯ ನಾಯಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಚಿವ ಬಿ. ನಾಗೇಂದ್ರ ವಿರುದ್ಧ ಒಟ್ಟು 31 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಜಾರಿ ನಿರ್ದೇಶನಾಲಯ (ED), ಕೇಂದ್ರ ತನಿಖಾ ದಳ (CBI) ಮತ್ತು ಲೋಕಾಯುಕ್ತ ದಾಖಲಿಸಿರುವ ಪ್ರಕರಣಗಳೂ ಸೇರಿವೆ ಎಂದು ವಿಧಾನಸಭೆಯಲ್ಲಿ ಆರೋಪಿಸಿದರು.

ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷ ಸದಸ್ಯರು ಸತತ ನಾಲ್ಕನೇ ದಿನವೂ ವಿಧಾನಸಭೆಯಲ್ಲಿ ಗದ್ದಲ ನಡೆಸಿದರು.

ನಾಗೇಂದ್ರ ವಿರುದ್ಧ ಯಾವುದೇ ಪ್ರಕರಣ ಇಲ್ಲ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಸದನವನ್ನು ದಾರಿ ತಪ್ಪಿಸಿದ್ದಾರೆ. ಒಟ್ಟು 31 ಪ್ರಕರಣಗಳ ಪೈಕಿ ಮೂರು ಪ್ರಕರಣಗಳಲ್ಲಿ ಸಿಬಿಐ ನಾಗೇಂದ್ರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಈ ಮೂರು ಪ್ರಕರಣಗಳಲ್ಲೂ ಅವರು ಪ್ರಮುಖ ಆರೋಪಿಯಾಗಿದ್ದಾರೆ ಎಂದು ಹೇಳಿದರು.

ಇದೇ ವೇಳೆ ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್‌ ಹೈಕಮಾಂಡ್‌ಗೆ ಹಣ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಒಬ್ಬ ಸಚಿವರನ್ನು ರಕ್ಷಿಸಲು ಸರ್ಕಾರ ಜನರ ಹಣ ಹಾಗೂ ವಿಧಾನಸಭೆಯ ಅಮೂಲ್ಯ ಸಮಯವನ್ನು ಏಕೆ ವ್ಯರ್ಥ ಮಾಡುತ್ತಿದೆ ಎಂದು ಪ್ರಶ್ನಿಸಿದರು.

ಒಬ್ಬ ಸಚಿವರನ್ನು ರಕ್ಷಿಸುವ ಸಲುವಾಗಿ ಸದನದ 223 ಶಾಸಕರ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ. ನಾಗೇಂದ್ರ ರಾಜೀನಾಮೆ ನೀಡುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ನಾಗೇಂದ್ರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸಂಪೂರ್ಣ ದಾಖಲೆಗಳನ್ನು ನಾನು ಒದಗಿಸಬಲ್ಲೆ. ಉಪಮುಖ್ಯಮಂತ್ರಿ ಪರಮೇಶ್ವರ್‌ ಯಾವುದೇ ಪ್ರಕರಣ ಇಲ್ಲ ಎನ್ನುತ್ತಿದ್ದಾರೆ. ನಾನು ಪ್ರಕರಣಗಳ ಸಂಖ್ಯೆಯನ್ನು ನೀಡಬಲ್ಲೆ. ಪರಿಶಿಷ್ಟ ಜಾತಿಯವರಿಗೆ ಆರ್ಥಿಕ ನೆರವು ನೀಡಬೇಕಿದ್ದ ರೂ.187 ಕೋಟಿ ಹಣವನ್ನು ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.

ಆತ್ಮಹತ್ಯೆ ಮಾಡಿಕೊಂಡಿದ್ದ ಅಧಿಕಾರಿ ಪಿ. ಚಂದ್ರಶೇಖರನ್‌ ತಮ್ಮ ಡೆತ್‌ನೋಟ್‌ನಲ್ಲಿ ಬಿ. ನಾಗೇಂದ್ರ ಅವರ ಹೆಸರನ್ನು ಉಲ್ಲೇಖಿಸಿದ್ದರು.

ಮೃತ ಅಧಿಕಾರಿಯ ಕುಟುಂಬಕ್ಕೆ ಇದುವರೆಗೆ ಪರಿಹಾರವಾಗಲಿ, ಅನುಕಂಪದ ಆಧಾರದ ಮೇಲೆ ಉದ್ಯೋಗವಾಗಲಿ ದೊರೆತಿಲ್ಲ. ಆದರೆ, ಸಿದ್ದರಾಮಯ್ಯ ಸಚಿವ ಸಂಪುಟದಿಂದ ರಾಜೀನಾಮೆ ನೀಡಿದ್ದ ಪ್ರಮುಖ ಆರೋಪಿಯನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಟೀಕಿಸಿದರು.

ಇಜೇ ವೇಳೆ ವಿಧಾನಸಭೆ ಸ್ಪೀಕರ್‌ ಜಿ.ಎಸ್‌. ಪಾಟೀಲ್‌ ಹಾಗೂ ಆಡಳಿತ ಪಕ್ಷದ ಸದಸ್ಯರು ಬರಗಾಲದ ಕುರಿತು ಚರ್ಚೆ ನಡೆಸುವಂತೆ ಒತ್ತಾಯಿಸಿದಾಗ, ರಾಜ್ಯ ಸರ್ಕಾರ ಇನ್ನೂ ಬರಗಾಲ ಘೋಷಿಸದಿರುವುದು ನಾಚಿಕೆಗೇಡಿನ ಸಂಗತಿ ಎಂದು ಅಶೋಕ್‌ ಅವರು ಹೇಳಿದರು.

ಕರ್ನಾಟಕ ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿದೆ ಎಂಬುದನ್ನು ಒಪ್ಪಿಕೊಳ್ಳಲು ಸರ್ಕಾರ ಸಿದ್ಧವಿಲ್ಲ. ಕುಡಿಯುವ ನೀರು ಸೇರಿದಂತೆ ಬರ ಪರಿಹಾರ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲು ಸರ್ಕಾರದ ಬಳಿ ಅನುದಾನವಿಲ್ಲದಿರುವುದೇ ಇದಕ್ಕೆ ಕಾರಣ ಎಂದು ಆರೋಪಿಸಿದರು. ಹಣ ಬಿಡುಗಡೆ ಮಾಡದೆ ಬರಗಾಲದ ಕುರಿತು ಚರ್ಚೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.

ನಂತರ ಬಿಜೆಪಿ ಸದಸ್ಯರು ವಿಧಾನಸಭೆ ಹೊರಗಡೆಯೂ ಪ್ರತಿಭಟನೆ ನಡೆಸಿ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿದರು. ನಾಗೇಂದ್ರ ಅವರು ತಮ್ಮನ್ನು ರಕ್ಷಿಸಿಕೊಳ್ಳಲು ದಲಿತ ಅಸ್ತ್ರ ಬಳಸುತ್ತಿದ್ದಾರೆ ಎಂದು ಅಶೋಕ್‌ ಆರೋಪಿಸಿದರು.

ಕಾಂಗ್ರೆಸ್‌ಗೆ ಕೋಟ್ಯಂತರ ದಲಿತರು ಬೇಕೋ ಅಥವಾ ಒಬ್ಬ ನಾಗೇಂದ್ರ ಬೇಕೋ ಎಂಬುದನ್ನು ಪಕ್ಷ ನಿರ್ಧರಿಸಬೇಕು. ಬಡವರ ಹಿತ ಕಾಪಾಡಲು ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವಂತೆ ಕಾಂಗ್ರೆಸ್‌ ಸೂಚಿಸಬೇಕು ದು ಹೇಳಿದರು.

ಬರಗಾಲ, ಬಿಡದಿ ಟೌನ್‌ಶಿಪ್‌, ಕೆಪಿಎಸ್‌ಸಿ ಹಗರಣ, ನೈಸ್‌ ವಿವಾದ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ವಿಧಾನಸಭೆಯಲ್ಲಿ ಚರ್ಚಿಸಬೇಕಿದೆ. ಆದರೆ,ಒಬ್ಬ ವ್ಯಕ್ತಿಯನ್ನು ರಕ್ಷಿಸುವ ಸಲುವಾಗಿ ಕಾಂಗ್ರೆಸ್‌ ಸರ್ಕಾರ ಹಠ ಹಿಡಿದು ಸದನದ ಸಮಯವನ್ನು ವ್ಯರ್ಥ ಮಾಡುತ್ತಿದೆ ಎಂದು ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Yemen, Somalia ಕರಾವಳಿಯಲ್ಲಿ ಕಡಲ್ಗಳ್ಳರ ಅಟ್ಟಹಾಸ: 22 ಮಂದಿ ಭಾರತೀಯರಿದ್ದ 2 ಹಡಗುಗಳ ಅಪಹರಣ..!

ಭಾರತ-ಚೀನಾ ಗಡಿ ಉದ್ವಿಗ್ನತೆ ನಡುವೆ ಅಮೆರಿಕ ರಾಯಭಾರಿ ಲಡಾಖ್ ಭೇಟಿ; ಬೀಜಿಂಗ್ ಗೆ ಪ್ರಬಲ ಸಂದೇಶ

'Pak ಜೊತೆ ಯುದ್ಧ ಮಾಡಿದ್ದರೂ...' ಭಾರತದ ಅಸಲಿ ಕಾಂಪಿಟೇಟರ್ China; ಮಾಜಿ ಸೇನಾ ಮುಖ್ಯಸ್ಥ ಜನರಲ್ ನರವಾಣೆ..!

ಹಿಸಾರ್ ಜಿಲ್ಲಾ ನ್ಯಾಯಾಲಯದ ಹೊರಗೆ ಗ್ಯಾಂಗ್‌ಸ್ಟರ್ ವಿನೋದ್ ಪನ್ನುಗೆ ಗುಂಡಿಕ್ಕಿ ಹತ್ಯೆ

Southern Zonal Council meet: ಜಲ ವಿವಾದಗಳ ಕುರಿತು ಮಾತುಕತೆಗೆ ಅಮಿತ್ ಶಾ ಕರೆಗೆ ರಾಜ್ಯಗಳ ಬೆಂಬಲ