ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಪ್ರಮುಖ ರಸ್ತೆಗಳಲ್ಲಿ ವಾಹನ ಸವಾರರು ಎದುರಿಸುತ್ತಿರುವ ಪಾರ್ಕಿಂಗ್ ಸಮಸ್ಯೆ ಮತ್ತು ಸಂಚಾರ ದಟ್ಟಣೆಗೆ ಶೀಘ್ರದಲ್ಲೇ ಮುಕ್ತಿ ಸಿಗಲಿದೆ.
ಕ್ಷೇತ್ರಕ್ಕೆ ಹೈಟೆಕ್ ಸ್ಪರ್ಶ ನೀಡಲು ಬೆಂಗಳೂರು ದಕ್ಷಿಣ ನಗರ ಪಾಲಿಕೆ (BSCC) ಮುಂದಾಗಿದ್ದು, ಮೆ. ಪಾರ್ಕ್‌ಲೆನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯೊಂದಿಗೆ ಐದು ವರ್ಷಗಳ ಪಿಪಿಪಿ (PPP) ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಅಡಿಯಲ್ಲಿ ಎಐ (AI) ಆಧಾರಿತ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.
ಈ ಸಂಬಂಧ ಬೆಂಗಳೂರು ದಕ್ಷಿಣ ನಗರ ಪಾಲಿಕೆ (BSCC) ಶುಕ್ರವಾರ ಪಾರ್ಕ್‌ಲೆನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಜೊತೆ ಒಡಂಬಡಿಕೆ (MoU) ಮಾಡಿಕೊಂಡಿದೆ.
BSCC ಆಯುಕ್ತ ಕೆ.ಎನ್. ರಮೇಶ್ ಅವರು ಮಾತನಾಡಿ, ಜಯನಗರ ಕ್ಷೇತ್ರದಲ್ಲಿ ಒಟ್ಟು 1,215 ರಸ್ತೆಗಳ ಪೈಕಿ 281 ಕಿ.ಮೀ. ರಸ್ತೆಗಳಿವೆ. ಸಮಗ್ರ ಅಧ್ಯಯನ ನಡೆಸಿ, ಸಂಚಾರ ಪೊಲೀಸರ ಅನುಮೋದನೆ ಪಡೆದ ಬಳಿಕ ಹೊಸ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲು 42 ಪ್ರಮುಖ ವಾಣಿಜ್ಯ ರಸ್ತೆಗಳನ್ನು (31.65 ಕಿ.ಮೀ.) ಗುರುತಿಸಲಾಗಿದೆ.
ಈ 42 ರಸ್ತೆಗಳಲ್ಲಿ ಒಟ್ಟು 4,749 ಪಾರ್ಕಿಂಗ್ ವಲಯಗಳನ್ನು ನಿರ್ಮಿಸಲಾಗುತ್ತಿದೆ. ಈ ಪೈಕಿ ಸುಮಾರು 3,800 ದ್ವಿಚಕ್ರ ವಾಹನಗಳಿಗೆ ಹಾಗೂ 900ಕ್ಕೂ ಹೆಚ್ಚು ಕಾರುಗಳಿಗೆ ಮೀಸಲಾಗಿರಲಿವೆ.
ಇದರ ಜೊತೆಗೆ ಆಟೋರಿಕ್ಷಾಗಳು, ಸೈಕಲ್‌ಗಳು ಹಾಗೂ ಪ್ರಯಾಣಿಕರಿಗಾಗಿ ಪ್ರತ್ಯೇಕ ಪಾರ್ಕಿಂಗ್ ಸ್ಥಳಗಳನ್ನೂ ಕಲ್ಪಿಸಲಾಗುತ್ತದೆ ಎಂದು ಹೇಳಿದ್ದಾರೆ.
ವಾಹನ ಸವಾರರು ಮೊಬೈಲ್ ಆ್ಯಪ್, ವೆಬ್‌ಸೈಟ್ ಹಾಗೂ ಡಿಜಿಟಲ್ ಪ್ರದರ್ಶನ ಫಲಕಗಳ ಮೂಲಕ ಖಾಲಿ ಪಾರ್ಕಿಂಗ್ ಸ್ಥಳಗಳ ಲಭ್ಯತೆ ಪರಿಶೀಲಿಸಬಹುದು. ಅಲ್ಲದೆ, ನಗದುರಹಿತವಾಗಿ ಪಾರ್ಕಿಂಗ್ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ನಿಗದಿತ ಪಾರ್ಕಿಂಗ್ ವಲಯಗಳಲ್ಲಿ ಸ್ಥಳೀಯ ನಿವಾಸಿಗಳಿಗೆ ಮಧ್ಯರಾತ್ರಿ 12ರಿಂದ ಬೆಳಗ್ಗೆ 9ರವರೆಗೆ ಉಚಿತ ಪಾರ್ಕಿಂಗ್ ಸೌಲಭ್ಯ ನೀಡಲಾಗುತ್ತದೆ.
ಕರ್ನಾಟಕದ ಸಾರ್ವಜನಿಕ ಖರೀದಿ ಪೋರ್ಟಲ್ ಮೂಲಕ ನಡೆದ ಮುಕ್ತ ಟೆಂಡರ್‌ನಲ್ಲಿ ಪಾರ್ಕ್‌ಲೆನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಆಯ್ಕೆಯಾಗಿದ್ದು, ಐದು ವರ್ಷಗಳ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಯೋಜನೆ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.