ಸಾಂದರ್ಭಿಕ ಚಿತ್ರ 
ರಾಜ್ಯ

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಪತ್ನಿಯಾದವಳು ಮನೆಗೆಲಸ ಮಾಡಲೇಬೇಕು ಅಥವಾ ಅತ್ತೆ-ಮಾವಂದಿರನ್ನು ನೋಡಿಕೊಳ್ಳಲೇಬೇಕು ಎಂದು ಆದೇಶಿಸಲು ಪತಿಗಾಗಲಿ ಅಥವಾ ಆತನ ಕುಟುಂಬಸ್ಥರಿಗಾಗಲಿ ಯಾವುದೇ ಹಕ್ಕಿಲ್ಲ.

ಬೆಂಗಳೂರು: ಮದುವೆ ಎನ್ನುವುದು ಇಬ್ಬರ ನಡುವಿನ ಸಮಾನತೆಯ ಪಾಲುದಾರಿಕೆಯೇ ಹೊರತು, ಪತ್ನಿಯ ಸ್ವಾತಂತ್ರ್ಯ ಮತ್ತು ಇಚ್ಛೆಯನ್ನು ಹತ್ತಿಕ್ಕುವ ಪರವಾನಗಿ ಅಲ್ಲ" ಎಂದು ಕರ್ನಾಟಕ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.

ಪತ್ನಿಯಾದವಳು ಮನೆಗೆಲಸ ಮಾಡಲೇಬೇಕು ಅಥವಾ ಅತ್ತೆ-ಮಾವಂದಿರನ್ನು ನೋಡಿಕೊಳ್ಳಲೇಬೇಕು ಎಂದು ಆದೇಶಿಸಲು ಪತಿಗಾಗಲಿ ಅಥವಾ ಆತನ ಕುಟುಂಬಸ್ಥರಿಗಾಗಲಿ ಯಾವುದೇ ಹಕ್ಕಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿ ಚಿಲ್ಲಕುರ್ ಸುಮಲತಾ ಅವರು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿರುವ 36 ವರ್ಷದ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದರು.

2025ರ ನವೆಂಬರ್‌ನಲ್ಲಿ ಕುಟುಂಬ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಆತ ಹೈಕೋರ್ಟ್‌ ಮೆಟ್ಟಿಲೇರಿದ್ದ. ಕುಟುಂಬ ನ್ಯಾಯಾಲಯವು 33 ವರ್ಷದ ಪತ್ನಿಗೆ ರೂ.5,000 ಹಾಗೂ ಅಪ್ರಾಪ್ತ ಮಗಳಿಗೆ ರೂ.4,000 ಸೇರಿದಂತೆ ಒಟ್ಟು ರೂ.9,000 ಮಾಸಿಕ ಜೀವನಾಂಶ ಪಾವತಿಸುವಂತೆ ಪತಿಗೆ ಆದೇಶಿಸಿತ್ತು. ಮಹಿಳೆ ತುಮಕೂರು ಜಿಲ್ಲೆಯ ಗ್ರಾಮವೊಂದರಲ್ಲಿ ತನ್ನ ಅಪ್ರಾಪ್ತ ಮಗಳೊಂದಿಗೆ ವಾಸಿಸುತ್ತಿದ್ದಾರೆ.

ಮದುವೆಯಾದ ಬಳಿಕ ಸುಮಾರು ಆರು ತಿಂಗಳ ಕಾಲ ತಾನು ಮತ್ತು ಪತ್ನಿ ಸಂತೋಷದಿಂದ ಜೀವನ ನಡೆಸಿದ್ದೆವು. ಬಳಿಕ ಪತ್ನಿ ತನ್ನ ತಂದೆ-ತಾಯಿಯ ಬಗ್ಗೆ ಬದಲಾಗಿದ್ದು, ಅವರನ್ನು ನೋಡಿಕೊಳ್ಳುತ್ತಿಲ್ಲ ಹಾಗೂ ಮನೆಕೆಲಸವನ್ನೂ ಮಾಡುತ್ತಿಲ್ಲ ಎಂದು ಪತಿ ಆರೋಪಿಸಿದ್ದ. ಅಲ್ಲದೆ, ತನ್ನ ಅಥವಾ ತನ್ನ ಪೋಷಕರ ಅನುಮತಿ ಪಡೆಯದೆ ಪತ್ನಿ ತವರು ಮನೆಗೆ ಹೋಗಿದ್ದಾಳೆ ಎಂದು ಆತ ನ್ಯಾಯಾಲಯಕ್ಕೆ ತಿಳಿಸಿದ್ದ.

ಈ ವಾದಗಳನ್ನು ಗಮನಿಸಿದ ನ್ಯಾಯಾಲಯ, ಪತಿ ತನ್ನ ಪತ್ನಿಯನ್ನು ಮನೆಕೆಲಸ ಹಾಗೂ ತನ್ನ ತಂದೆ-ತಾಯಿಯನ್ನು ನೋಡಿಕೊಳ್ಳಲು ನೇಮಿಸಿಕೊಂಡಿರುವ ಉದ್ಯೋಗಿಯಂತೆ ಭಾವಿಸಿರುವುದು ಕಂಡುಬರುತ್ತದೆ ಎಂದು ಹೇಳಿತು.

ತನ್ನ ಮತ್ತು ತನ್ನ ಪೋಷಕರ ಅನುಮತಿ ಇಲ್ಲದೆ ಪತ್ನಿ ತವರು ಮನೆಗೆ ಹೋಗಿದ್ದಾಳೆ ಎಂಬ ಪತಿಯ ಹೇಳಿಕೆಯು ಆತನ ಮನಸ್ಥಿತಿಯನ್ನು ಹಾಗೂ ಪತ್ನಿಯ ವರ್ತನೆ ಮತ್ತು ಇಚ್ಛೆಗಳನ್ನು ನಿಯಂತ್ರಿಸುವ ಬಯಕೆಯನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟಿತು.

ಭಾರತೀಯ ಮಹಿಳೆ ತನ್ನ ತವರು ಮನೆಗೆ ಹೋಗಲು ತನ್ನ ವೈವಾಹಿಕ ಮನೆಯಲ್ಲಿರುವ ಎಲ್ಲರಿಂದಲೂ ಅನುಮತಿ ಪಡೆಯಬೇಕಾದ ಅಗತ್ಯವೇನು ಎಂದು ನ್ಯಾಯಾಲಯ ಪ್ರಶ್ನಿಸಿತು.

“ಮದುವೆ ಇಬ್ಬರು ವ್ಯಕ್ತಿಗಳನ್ನು ಒಂದುಗೂಡಿಸುವ ಪವಿತ್ರ ಮತ್ತು ಸುಂದರ ಬಂಧ. ಪ್ರೀತಿ, ನಂಬಿಕೆ, ಗೌರವ, ಪರಸ್ಪರ ಸಹಕಾರ ಮತ್ತು ಒಬ್ಬರ ಭಾವನೆಗಳನ್ನು ಮತ್ತೊಬ್ಬರು ಅರ್ಥಮಾಡಿಕೊಳ್ಳುವ ಮೂಲಕ ಅವರು ಜೀವನದ ಪಯಣದಲ್ಲಿ ಸಂಗಾತಿಗಳು, ಸ್ನೇಹಿತರು ಮತ್ತು ಪಾಲುದಾರರಾಗುತ್ತಾರೆ.

ಮಹಿಳೆಗೆ ತನ್ನ ವೃತ್ತಿ, ಹಣಕಾಸು ಸೇರಿದಂತೆ ತನ್ನ ಜೀವನಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಭೂತ ಹಾಗೂ ಸಂಪೂರ್ಣ ಹಕ್ಕಿದೆ. ಪತಿ ತನ್ನ ಇಚ್ಛೆ ಮತ್ತು ನಿರೀಕ್ಷೆಗಳಿಗೆ ಅನುಗುಣವಾಗಿ ಪತ್ನಿ ಬದುಕುವಂತೆ ಒತ್ತಾಯಿಸಲು ಅಥವಾ ಬಲವಂತಪಡಿಸಲು ಸಾಧ್ಯವಿಲ್ಲ.

“ಮದುವೆ ಎಂದರೆ ಸಂಗಾತಿಯ ವ್ಯಕ್ತಿತ್ವ, ಸ್ವಾತಂತ್ರ್ಯ ಅಥವಾ ಇಚ್ಛೆಯನ್ನು ನಿಯಂತ್ರಿಸಲು, ಆಜ್ಞಾಪಿಸಲು, ಪ್ರಾಬಲ್ಯ ಸಾಧಿಸಲು ಅಥವಾ ಗೆಲ್ಲಲು ನೀಡುವ ಪರವಾನಗಿ ಅಲ್ಲ” ಎಂದು ನ್ಯಾಯಾಲಯ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಕುಟುಂಬದ ಮೇಲಿನ ಪತ್ನಿಯ ಸಮರ್ಪಣೆಯನ್ನು ಆಕೆಯ ವಿಧೇಯತೆ ಮತ್ತು ಶರಣಾಗತಿಯ ಆಧಾರದ ಮೇಲೆ ಅಳೆಯಲು ಸಾಧ್ಯವಿಲ್ಲ ಎಂದಿರುವ ಹೈಕೋರ್ಟ್, ಮದುವೆ ಅಸಮಾನರ ನಡುವಿನ ಸಂಬಂಧವಲ್ಲ ಎಂದು ಹೇಳಿದೆ.

ಲಿಂಗದ ಆಧಾರದ ಮೇಲೆ ಮಹಿಳೆಯ ಸ್ವಾಯತ್ತತೆಯನ್ನು ಕಸಿದುಕೊಳ್ಳುವ ಅಥವಾ ಆಕೆಯ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಯಾವುದೇ ಪ್ರಯತ್ನವು ಸಮಾನತೆಯ ತತ್ವಗಳಿಗೆ ವಿರುದ್ಧವಾಗಿದ್ದು, ಮಾನವ ಘನತೆ ಮತ್ತು ಸಾಮಾಜಿಕ ನ್ಯಾಯದ ಸಾಂವಿಧಾನಿಕ ಆಶಯಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಜೀವನಾಂಶದ ಮೊತ್ತಕ್ಕೆ ಸಂಬಂಧಿಸಿದಂತೆ, ನ್ಯಾಯಾಲಯವು ಎಲ್ಲ ವಾಸ್ತವಾಂಶಗಳನ್ನು ಪರಿಗಣಿಸಿ ಪತ್ನಿಗೆ ತಿಂಗಳಿಗೆ ರೂ.5,000 ಹಾಗೂ ಅಪ್ರಾಪ್ತ ಮಗಳಿಗೆ ರೂ.4,000 ನೀಡುವಂತೆ ಆದೇಶಿಸಿತ್ತು. ಒಟ್ಟು ರೂ.9,000 ಮೊತ್ತವು ದಿನಕ್ಕೆ ರೂ.300, ಅಂದರೆ ಒಬ್ಬರಿಗೆ ರೂ.150ರಂತೆ ಆಗುತ್ತದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಬೆಲೆ ಏರಿಕೆ ಮತ್ತು ಜೀವನ ನಿರ್ವಹಣೆಯ ವೆಚ್ಚವನ್ನು ಗಮನಿಸಿದರೆ, ದಿನಕ್ಕೆ ತಲಾ ರೂ.150 ಕನಿಷ್ಠ ಮಟ್ಟದ ಜೀವನ ನಡೆಸಲೂ ಸಾಕಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿತು. ಹೀಗಾಗಿ ಕೌಟಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಲು ಅಥವಾ ಬದಲಿಸಲು ಯಾವುದೇ ಕಾರಣವಿಲ್ಲ ಎಂದು ತಿಳಿಸಿ ವ್ಯಕ್ತಿಯ ಅರ್ಜಿಯನ್ನು ವಜಾಗೊಳಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಕಡಿವಾಣ: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!