ಕರ್ನಾಟಕ ಹೈಕೋರ್ಟ್ Online Desk
ರಾಜ್ಯ

ಇದು ಪೊಲೀಸ್ ರಾಜ್ಯವಲ್ಲ! ಸಿವಿಲ್ ವ್ಯಾಜ್ಯದಲ್ಲಿ ಕಾನೂನುಬಾಹಿರವಾಗಿ ಸಾಕ್ಷಿ ಬಂಧಿಸಿದಕ್ಕೆ ಪೊಲೀಸರ ವಿರುದ್ಧ ಹೈಕೋರ್ಟ್ ಕೆಂಡಾಮಂಡಲ

ಸಿವಿಲ್ ವ್ಯಾಜ್ಯದಲ್ಲಿ ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸರ ಅಕ್ರಮ ಬಂಧನ ಮತ್ತು ಬೇಜವಾಬ್ದಾರಿ ನಡವಳಿಕೆಗೆ ತೀವ್ರ ಆಕ್ರೋಶ ಹೊರಹಾಕಿರುವ ಕರ್ನಾಟಕ ಹೈಕೋರ್ಟ್, ಸಂತ್ರಸ್ತ ಅರ್ಜಿದಾರರಿಗೆ ₹3 ಲಕ್ಷ ದಂಡ ಪಾವತಿಸುವಂತೆ ತನಿಖಾಧಿಕಾರಿಗೆ ಖಡಕ್ ಆದೇಶ ನೀಡಿದೆ.

ಬೆಂಗಳೂರು: ಕಾನೂನು ರಕ್ಷಣೆ ಮಾಡಬೇಕಾದ ಪೊಲೀಸರೇ ಕಾನೂನು ಕೈಗೆತ್ತಿಕೊಂಡರೆ ಏನಾಗಬಹುದು? ಸಾಮಾನ್ಯವಾಗಿ, ಪೊಲೀಸರಿಗೆ ಸಿವಿಲ್ ವ್ಯಾಜ್ಯಗಳಲ್ಲಿ ಯಾವುದೇ ವ್ಯಕ್ತಿಯನ್ನು ನೇರವಾಗಿ ಬಂಧಿಸುವ ಅಥವಾ ವಶಕ್ಕೆ ತೆಗೆದುಕೊಳ್ಳುವ ಅಧಿಕಾರವಿಲ್ಲ. ಆದರೆ, ಈ ಕಾನೂನನ್ನು ಮೀರಿ, ಕೇವಲ ಸಾಕ್ಷಿಯಾಗಿ ಸಹಿ ಮಾಡಿದ್ದ ವ್ಯಕ್ತಿಯನ್ನು ಆರೋಪಿ ಎಂದು ಪರಿಗಣಿಸಿ ಎಫ್‌ಐಆರ್ ದಾಖಲಿಸಿದ್ದ ಖಾಕಿ ದರ್ಪಕ್ಕೆ ಬ್ರೇಕ್ ಹಾಕಿರುವ ಘನ ಉಚ್ಚ ನ್ಯಾಯಾಲಯ, ಪೊಲೀಸರ ಅತಿಯಾದ ವರ್ತನೆಗೆ ಭಾರಿ ಮೊತ್ತದ ದಂಡ ವಿಧಿಸಿ ಬಿಸಿ ಮುಟ್ಟಿಸಿದೆ. ಇದೇ ವೇಳೆ, ರಾಜ್ಯದಲ್ಲಿ ಪೊಲೀಸ್ ರಾಜ್ ನಡೆಯಲು ಬಿಡುವುದಿಲ್ಲ ಎಂದು ಕಟು ಶಬ್ದಗಳಲ್ಲಿ ಎಚ್ಚರಿಸಿರುವ ನ್ಯಾಯಪೀಠ, ಪೊಲೀಸರಿಗೆ ಬರೋಬ್ಬರಿ 3 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಪ್ರಕರಣ?

ಬೆಂಗಳೂರಿನ ವರ್ತೂರು ನಿವಾಸಿ ಕೆ.ಎನ್. ಮೋಹನ್ ರೆಡ್ಡಿ ಎಂಬುವರು ವಿವಾದಾತ್ಮಕ ಉಯಿಲು ಒಂದಕ್ಕೆ ಕೇವಲ ಸಾಕ್ಷಿಯಾಗಿ ಸಹಿ ಮಾಡಿದ್ದರು. ಆದರೆ, ಈ ಸಿವಿಲ್ ಸ್ವರೂಪದ ವ್ಯಾಜ್ಯದಲ್ಲಿ ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸರು ಹಸ್ತಕ್ಷೇಪ ಮಾಡಿ, ಅವರನ್ನು ಆರೋಪಿ (ಎರಡನೇ ಆರೋಪಿ) ಎಂದು ಪರಿಗಣಿಸಿ ಎಫ್‌ಐಆರ್ ದಾಖಲಿಸಿದ್ದರು. ಜೊತೆಗೆ, ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅಡಿ ಆಗಸ್ಟ್ 27 ರಂದು ವಿಚಾರಣೆಗೆ ಹಾಜರಾಗುವಂತೆ ಅರ್ಜಿದಾರರಿಗೆ ನೋಟಿಸ್ ನೀಡಿದ್ದರು. ಆದರೆ, ನಿಗದಿತ ದಿನಾಂಕಕ್ಕಿಂತ ಎರಡು ದಿನ ಮುಂಚಿತವಾಗಿ, ಅಂದರೆ ಆಗಸ್ಟ್ 25 ರ ಮುಂಜಾನೆಯೇ ಅವರ ಮನೆಗೆ ನುಗ್ಗಿ ಅಕ್ರಮವಾಗಿ ವಶಕ್ಕೆ ಪಡೆದಿದ್ದರು.

ಈ ಕುರಿತು ವಿಚಾರಣೆ ನಡೆಸಿದ, ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠವು, "ರಾಜ್ಯದಲ್ಲಿ ಕಾನೂನಿನ ಆಡಳಿತವಿದೆ, ಇದನ್ನು ಪೊಲೀಸ್ ರಾಜ್ಯವಾಗಲು ನಾವು ಬಿಡುವುದಿಲ್ಲ" ಎಂದು ಮೌಖಿಕವಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ, "ನೋಟಿಸ್ ನೀಡಿದ ಮೇಲೆ ವ್ಯಕ್ತಿ ಅಸಹಕಾರ ತೋರದ ಹೊರತು ಬಂಧಿಸುವಂತಿಲ್ಲ ಎಂಬ ಕಾನೂನು ನಿಮಗೆ ಗೊತ್ತಿಲ್ಲವೇ? ದೂರುದಾರರು ಪ್ರಭಾವಿಯಾಗಿದ್ದರೆ ಯಾರನ್ನು ಬೇಕಾದರೂ ಬಂಧಿಸುತ್ತೀರಾ?" ಎಂದು ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರು. ಇದರೊಂದಿಗೆ, ನೋಟಿಸ್ ನೀಡಿ ವಿಚಾರಣೆಗೆ ಸಮಯ ಕೊಟ್ಟ ಮೇಲೆಯೂ ಸಹಕರಿಸದಿದ್ದರೆ ಮಾತ್ರ ಬಂಧಿಸಬೇಕು. ಅದನ್ನು ಬಿಟ್ಟು ಮುಂಚಿತವಾಗಿಯೇ ಬಂಧಿಸಲು ಇದುವೇನು ಜೋಕ್ ಆಗಿದೆಯೇ? ಎಂದು ತನಿಖಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಸಂತ್ರಸ್ತ ಅರ್ಜಿದಾರರಿಗೆ ₹3 ಲಕ್ಷ ದಂಡ (ಪರಿಹಾರ) ಪಾವತಿಸುವಂತೆ ತನಿಖಾಧಿಕಾರಿ ಮತ್ತು ಸಂಬಂಧಪಟ್ಟ ಪೊಲೀಸ್ ಸಿಬ್ಬಂದಿಗೆ ಖಡಕ್ ಆದೇಶ ನೀಡಿದೆ.

ಮುಂದುವರೆದು, ಹೈಕೋರ್ಟ್ ವಿಧಿಸಿರುವ ಈ ₹3 ಲಕ್ಷ ದಂಡದ ಮೊತ್ತವನ್ನು ಸರ್ಕಾರದ ಬೊಕ್ಕಸದಿಂದ ನೀಡುವಂತಿಲ್ಲ. ತಪ್ಪು ಎಸಗಿದ ತನಿಖಾಧಿಕಾರಿ ಹಾಗೂ ಅವರ ಮೇಲ್ವಿಚಾರಣೆಯಲ್ಲಿ ನಿರ್ಲಕ್ಷ್ಯ ವಹಿಸಿದ ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಸಿಬ್ಬಂದಿಯೇ ತಮ್ಮ ಸ್ವಂತ ಜೇಬಿನಿಂದ ಈ ಹಣವನ್ನು ಅರ್ಜಿದಾರರಿಗೆ ನೀಡಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಇದರೊಂದಿಗೆ, ಈ ಅಕ್ರಮ ಬಂಧನಕ್ಕೆ ಕಾರಣರಾದ ತನಿಖಾಧಿಕಾರಿ ಮತ್ತು ಅವರ ಮೇಲಧಿಕಾರಿಗಳ ವಿರುದ್ಧ ತಕ್ಷಣವೇ ಇಲಾಖಾ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಅಲ್ಲದೆ, ಅರ್ಜಿದಾರರ ವಿರುದ್ಧದ ಮುಂದಿನ ತನಿಖಾ ಪ್ರಕ್ರಿಯೆಗಳಿಗೂ ಮಧ್ಯಂತರ ತಡೆ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಡಿಕೆ ಶಿವಕುಮಾರ್

Nepal Floods: ಭೀಕರ ಪ್ರವಾಹದಲ್ಲಿ 30 ದೇಶಗಳ ನಾಗರೀಕರು ನಾಪತ್ತೆ, ಅಮೆರಿಕದವರೇ ಅತೀ ಹೆಚ್ಚು!

Yash’s Toxic: ನೆಗೆಟಿವ್ ರಿವ್ಯೂ ನಡುವೆ 'ರೇಟಿಂಗ್' ತೆಗೆದುಹಾಕಿದ ಬುಕ್ ಮೈ ಶೋ; ನಿರೀಕ್ಷಿತ ಕಲೆಕ್ಷನ್ ಇಲ್ವಾ? ನೆಟ್ಟಿಗರಿಂದ ತರಾಟೆ!

‘ಬರೆಯೋದೊಂದು, ಶೂಟ್ ಮಾಡೋದು ಇನ್ನೊಂದು’: ಟಾಕ್ಸಿಕ್ ರಿಲೀಸ್ ಬೆನ್ನಲ್ಲೇ ಗೀತು ಮೋಹನ್‌ದಾಸ್ ಹಳೆ ವಿಡಿಯೋ ವೈರಲ್; ಅದಕ್ಕೇನೆ ಸಿನಿಮಾ ಹೀಗಿದೆ ಎಂದ ನೆಟ್ಟಿಗರು!

"RSS ನಲ್ಲಿ ಜೆನ್ ಝೀಗಳೇ ಅತಿ ದೊಡ್ಡ ಸಂಖ್ಯೆ": ಬಿಜೆಪಿ ಉಪಾಧ್ಯಕ್ಷ ರಾಮ್ ಮಾಧವ್